ಪ್ರಸಕ್ತ ವರ್ಷದಲ್ಲಿ ಶೇ.125ರಷ್ಟು ಕೃಷಿಸಾಲ ನೀಡಲು ಸಿದ್ಧತೆ: ಸಚಿವ ಎಸ್.ಟಿ.ಸೋಮಶೇಖರ್

Update: 2021-10-24 12:02 GMT

ಬೆಂಗಳೂರು, ಅ.24: ರೈತರ ಸ್ವಾವಲಂಬಿ ಬದುಕಿಗೆ ಪೂರಕವಾಗಿ ರಾಜ್ಯ ಸರಕಾರವು ಯೋಜನೆಗಳನ್ನು ರೂಪಿಸುತ್ತಿದೆ. ಯೋಜನೆಯ ಅನುಷ್ಟಾನದೊಂದಿಗೆ ಎಲ್ಲ ರೈತರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 30,85,644 ರೈತರಿಗೆ 20,810 ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ಶೇ.125ರಷ್ಟು ಗುರಿಯನ್ನು ಸಾದಿಸಲಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ರೈತರ ಸ್ವಾವಲಂಬಿ ಬದುಕಿಗೆ ಬೇಕಿರುವ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಬಾರಿ ಕೃಷಿ ಸಾಲ ವಿತರಣೆಯಲ್ಲಿ ಶೇ.115 ಗುರಿಯನ್ನು ತಲುಪಿದ್ದು, ಈ ಬಾರಿ ಶೇ.125ರಷ್ಟು ಸಾಧನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ವರ್ಷ ಸೆಪ್ಟೆಂಬರ್ ಅಂತ್ಯದೊಳಗೆ 12,35,033 ರೈತರಿಗೆ 9,136 ಕೋಟಿ 89 ಲಕ್ಷ ರೂ.ಸಾಲವನ್ನು ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿಯೇ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಅ.23ರವರೆಗೆ 12,35,033 ರೈತರಿಗೆ 9,136 ಕೋಟಿ ರೂ. ಸಾಲವನ್ನು ನೀಡುವ ಮುಖಾಂತರ ಶೇ.72.96 ಗುರಿಯನ್ನು ತಲುಪಲಾಗಿದೆ. ಅದರಲ್ಲಿ 30,25,788 ರೈತರಿಗೆ 19,370 ಕೋಟಿ ರೂ.ಅಲ್ಪಾವಧಿ ಸಾಲ ನೀಡಿಕೆ ಗುರಿಯನ್ನು ಹೊಂದಿದ್ದು, ಈಗಾಗಲೇ 12,25,027 ರೈತರಿಗೆ 8,742.10 ಕೋಟಿ ರೂ.ಸಾಲವನ್ನು ವಿತರಿಸಿ ಶೇ.45.55ರಷ್ಟು ಗುರಿಯನ್ನು ಸಾಧಿಸಲಾಗಿದೆ. ಅಲ್ಲದೆ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಿಕೆ ವಿಭಾಗದಲ್ಲಿ 59,856 ರೈತರಿಗೆ 1,440 ಕೋಟಿ ರೂ. ಸಾಲ ನೀಡಿಕೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಲ್ಲಿ 10,009 ರೈತರಿಗೆ 394.79 ಕೋಟಿ ರೂ. ಸಾಲವಾಗಿ ವಿತರಿಸಲಾಗಿದೆ. ಈ ಮೂಲಕ ಶೇ.27.41ರಷ್ಟು ಗುರಿ ತಲುಪಲಾಗಿದೆ. ಶೇ.72.96 ಸಾಧನೆಯನ್ನು ನಾವು ಈಗಾಗಲೇ ತೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ 25.12 ಲಕ್ಷ ರೈತರಿಗೆ 15,802 ಕೋಟಿ ರೂ.ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಇಲಾಖೆಯಲ್ಲಿ ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಿ, ಡಿಸಿಸಿ ಬ್ಯಾಂಕ್‍ಗಳ ಸಮಸ್ಯೆ ಬಗೆಹಿರಿಸಲಾಯಿತು. ಪರಿಣಾಮವಾಗಿ, 21 ಡಿಸಿಸಿ ಬ್ಯಾಂಕ್‍ಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದವು. ಅದುದರಿಂದ 26,19,015 ರೈತರಿಗೆ 17,901.21 ಕೋಟಿ ರೂ.ಸಾಲವನ್ನು ವಿತರಣೆ ಮಾಡಿ ಶೇ. 115 ಗುರಿ ಮುಟ್ಟಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದ್ದಾರೆ.

ಡಿಸಿಸಿ ಬ್ಯಾಂಕ್‍ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಗುವುದು. ಈ ಮೂಲಕ ಬ್ಯಾಂಕ್‍ಗಳು ತೋರಿರುವ ಸಾಧನೆ, ಎದುರಿಸುತ್ತಿರುವ ಸಣ್ಣಪುಟ್ಟ ತೊಡಕುಗಳು, ಸಮಸ್ಯೆಗಳ ಬಗ್ಗೆಯೂ ಚರ್ಚಿಸಿ, ಪರಿಹಾರಗಳನ್ನು ಸೂಚಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. 

ರೈತರ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸಹ 21 ಡಿಸಿಸಿ ಬ್ಯಾಂಕ್‍ಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅರ್ಹ ಫಲಾನುಭವಿಗಳಿಗೆ ಸಾಲ ಕೊಡುವಂತೆ ಸೂಚಿಸಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News