ಸಿದ್ದರಾಮಯ್ಯರದ್ದು ಯಾವ ಪಕ್ಷ?: ಎಚ್.ಡಿ.ಕುಮಾರಸ್ವಾಮಿ

Update: 2021-10-24 14:19 GMT

ಮೈಸೂರು,ಅ.24: 'ಜೆಡಿಎಸ್ ಪಕ್ಷವನ್ನು ಜೆಡಿಎಫ್' ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ಗುರಿ ಕಾಂಗ್ರೆಸ್ ಪಕ್ಷವೇ ಹೊರತು ಸಿದ್ದರಾಮಯ್ಯ ಅಲ್ಲ, ಅವರು ಪದೇ ಪದೇ ಜೆಡಿಎಸ್ ಪಕ್ಷದ ವಿರುದ್ಧ ಮಾತನಾಡುತ್ತಿರುವುದರಿಂದ ಅವರ ಬಗ್ಗೆ ಟೀಕೆ ಮಾಡಬೇಕಿದೆ ಎಂದು ತಿಳಿಸಿದರು.

ನಾನು ಯಾರನ್ನು ವ್ಯಕ್ತಿಗತವಾಗಿ ಟೀಕಿಸುವುದಿಲ್ಲ. ಸಿದ್ದರಾಮಯ್ಯ ನಮ್ಮ ಗುರಿಯಲ್ಲ, ನಮ್ಮ ಗುರಿ ಕಾಂಗ್ರೆಸ ಪಕ್ಷ, ಕಾಂಗ್ರೆಸ್‍ನ ಇತರ ನಾಯಕರ್ಯಾರು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಸಿದ್ದರಾಮಯ್ಯ ಒಬ್ಬರೆ ಹೆಚ್ಚು ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿರುವುದು. ಜೊತೆಗೆ 5 ವರ್ಷ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿರುವವರು ಹಾಗಾಗಿ ನಾವು ಅವರಿಗೆ ಉತ್ತರಕೊಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ನಮ್ಮ ಪಕ್ಷವನ್ನು ಜೆಡಿಎಫ್ ಎಂದು ಟೀಕೆ ಮಾಡಿದ್ದಾರೆ. ಇವರದು ಯಾವ ಪಕ್ಷ ? ಕುಟುಂಬ ರಾಜಕಾರಣ ಇಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಮಾಡಲು ಇವರ ದೊಡ್ಡಮಗ ಪ್ರಯತ್ನಿಸಿದ್ದರು. ಆದರೆ ಅವರು ಅಕಾಲಿಕ ನಿಧನ ಹೊಂದಿದರು. ಪಾಪ ಇವರ ಎರಡನೇ ಮಗ ವೈದ್ಯವೃತ್ತಿ ಮಾಡುತ್ತಿದ್ದರು. ಅವರನ್ನು ಯಾಕೆ ರಾಜಕೀಯಕ್ಕೆ ಕರೆದುಕೊಂಡು ಬಂದು ವರುಣಾದಲ್ಲಿ ಟಿಕೆಟ್ ಕೊಡಿಸಿ ಗೆಲ್ಲಿಸಿದರು ಎಂದು ತಿರುಗೇಟು ನೀಡಿದರು.

ಇವರು ಕುಟುಂಬ ರಾಜಕಾರಣ ಮಾಡುವುದಿಲ್ಲ ಎನ್ನುವುದಾದರೆ ವರುಣಾ ಕ್ಷೇತ್ರದಲ್ಲಿ ಯಾರದು ಕಾರ್ಯಕರ್ತರಿಗೆ ನೀಡಬಹುದಿತ್ತು. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕಡೆಗಳಲ್ಲಿ ಸಿದ್ದರಾಮಯ್ಯ ಸ್ಪರ್ಧೆಮಾಡಿದರು. ಅಲ್ಪಸಂಖ್ಯಾತರ ಬಗ್ಗೆ ಏನೋ ಬಹಳ ಕಾಳಜಿಯವರಂತೆ ಮಾತನಾಡುವ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬಹುದಿತ್ತು ಅಲ್ಲವೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷವನ್ನು ನಾನು ಕಟ್ಟಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇವರ ಕೊಡುಗೆ ಏನು ಎಂಬುದು ನಮಗೆ ಗೊತ್ತಿದೆ.  ಜನ ಸೇರಿಸುವುದು, ಬ್ಯಾನ್ ಕಟ್ಟುವುದು ನಾವು, ಕಾರ್ಯಕ್ರಮಕ್ಕೆ ಹಣ ಖರ್ಚು ಮಾಡುತ್ತಿದ್ದವರು ನಾವುಗಳು ಇವರು ಬಂದು ಭಾಷಣ ಬಿಗಿದು ಹೋಗುತ್ತಿದ್ದರು. ದೇವೇಗೌಡರ ಪಕ್ಕದಲ್ಲಿ ಕುಳಿತುಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು ಅಲ್ಲಾಡಿಸುತ್ತಾ ದೇವೇಗೌಡರಿಗೆ ಒದ್ದು ಕೊಂಡು ಕುಳಿತುಕೊಳ್ಳುತ್ತಿದ್ದರು ಇವರ ನಡವಳಿಕೆ ನಮಗೆ ಗೊತ್ತಿಲ್ಲವೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News