''ರೈತನ ಆದಾಯ ಡಬಲ್ ಮಾಡದೇ ಆತ ರೇಷ್ಮೆ ಜುಬ್ಬಾ ಹಾಕಲು ಸಾಧ್ಯವೇ?'': ಸಿಎಂ ಬೊಮ್ಮಾಯಿಗೆ ಡಿ.ಕೆ ಶಿವಕುಮಾರ್ ತಿರುಗೇಟು

Update: 2021-10-24 14:29 GMT

ಹಾವೇರಿ, ಅ. 24: ‘ರೈತ ರೇಷ್ಮೆ ಜುಬ್ಬಾ ಹಾಕಿ, ರೇಷ್ಮೆ ರುಮಾಲು ಸುತ್ತಬೇಕು. ಜೂರ್ಕಿ ಚಪ್ಪಲಿ ಹಾಕಿ, ಬಾರುಕೋಲು ಹಿಡಿಯಬೇಕು. ರೈತ ಹಣಗಳಿಸಿ ಅಭಿವೃದ್ಧಿ ಕಾಣಬೇಕು. ಇದು ಬಿಜೆಪಿಯ ಅಭಿವೃದ್ಧಿಯ ಕನಸು' ಎಂದು ಸಿಎಂ ಭಾಷಣ ಮಾಡಿದ್ದಾರೆ. ಆದರೆ, ರೈತನ ಆದಾಯ ದ್ವಿಗುಣಗೊಳ್ಳದೆ ಆತ ರೇಶ್ಮೆ ಜುಬ್ಬಾ ಹಾಕಕು ಸಾಧ್ಯವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ರವಿವಾರ ಹಾನಗಲ್ ಕ್ಷೇತ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ರೈತನಿಗೆ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರಲ್ಲಾ ಮುಖ್ಯಮಂತ್ರಿಗಳೇ, ಮೊದಲು ಅದನ್ನು ಮಾಡಿ. ಆಗ ರೈತ ರೇಷ್ಮೆ ಹಾಕಲು ಪ್ರಯತ್ನ ಮಾಡಬಹುದು. ಬರುವ ಆದಾಯವೇ ಕಡಿಮೆ ಆಗಿದೆ. ಗೊಬ್ಬರ ಬೆಲೆ ಏರಿಕೆಯಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೇಂದ್ರದಲ್ಲಿ ರಾಜ್ಯದಿಂದ ಆಯ್ಕೆಯಾದವರೇ ಗೊಬ್ಬರದ ಮಂತ್ರಿಯಾಗಿದ್ದರೂ ಈ ದುಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ರೈತ ರೇಷ್ಮೆ ಪಂಚೆ, ಜುಬ್ಬಾ ಹಾಕಲು ಸಾಧ್ಯವೇ? ಎಂದು ಕೇಳಿದರು.

ರೈತ ಬಾರ್ ಕೋಲು ಹಿಡಿಯುವುದಿರಲಿ, ನೀವು ಅದೇ ಬಾರ್ ಕೋಲಿನಿಂದ ರೈತನಿಗೆ ಬಾರಿಸಿ, ಆತನ ಎದೆಗೆ ಚುಚ್ಚಿ ಸಾಯಿಸುತ್ತಿದ್ದೀರಿ. ಅವರಿಗೆ ಸಣ್ಣ ಸಹಾಯ ಮಾಡಲು ಆಗಿಲ್ಲ. ಆದರೂ ಆತ ರೇಷ್ಮೆ ಜುಬ್ಬಾ ಹಾಕಬೇಕು ಎನ್ನುತ್ತೀರಿ. ಇದೆಂಥಾ ತಮಾಷೆ? ಮುಖ್ಯಮಂತ್ರಿಗಳೇ ರೈತರಿಗೆ ನೆರವಾಗದೆ, ಯಾವ ಪುರುಷಾರ್ಥಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದೀರಿ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಯಾರನ್ನು ಮೂರ್ಖರನ್ನಾಗಿಸಲು ಪ್ರಣಾಳಿಕೆ?: ಸಿಎಂ ಕಚೇರಿಯಲ್ಲಿರುವವರಿಗೆ ಪರಿಜ್ಞಾನ ಇದೆಯೋ? ಇಲ್ಲವೋ? ಎಂಬ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಬಿಡುಗಡೆ ಮಾಡಿರುವ ಈ ಪ್ರಣಾಳಿಕೆ ಮಾಡಿದ್ದು ಯಾರು? ಯಾರನ್ನು ಮೂರ್ಖರನ್ನಾಗಿಸಲು ಇದನ್ನು ಬಿಡುಗಡೆ ಮಾಡಲಾಗಿದೆ? ಇದರಲ್ಲಿ ಆಯುಷ್ಮಾನ್ ಭಾರತ ಯೋಜನೆಯಲ್ಲಿ ಆರೋಗ್ಯಕ್ಕಾಗಿ 5 ಲಕ್ಷ ರೂ.ನೀಡುತ್ತಾರಂತೆ. ಅದಕ್ಕೆ ಪ್ರಮಾಣ ಪತ್ರ ನೀಡುತ್ತಾರಂತೆ. 2 ವರ್ಷಗಳಲ್ಲಿ ಈ ವಿಮೆಯಿಂದಲೇ ಸತ್ತವರಿಗೆ ಪರಿಹಾರ, ಆಸ್ಪತ್ರೆಯಲ್ಲಿ ದುಬಾರಿ ಬಿಲ್ ತೆತ್ತವರಿಗೆ ಸಹಾಯ ಮಾಡಬಹುದಿತ್ತಲ್ಲವೇ? ಯಾಕೆ ಮಾಡಲಿಲ್ಲ? ಎಂದು ಶಿವಕುಮಾರ್ ಪ್ರಶ್ನೆ ಮಾಡಿದರು.

ಉದ್ಯೋಗ ಇಲ್ಲದವರಿಗೆ ಸ್ವಂತ ಉದ್ಯೋಗ ಮಾಡಲು ಕೌಶಲ್ಯ ತರಬೇತಿ, ಪ್ರತಿವರ್ಷ ಉದ್ಯೋಗ ಮೇಳ ಮಾಡುತ್ತಾರಂತೆ. ಎರಡು ವರ್ಷಗಳಲ್ಲಿ ಎಷ್ಟು ಉದ್ಯೋಗ ಮೇಳ ಮಾಡಿದ್ದಾರೆ? ಪಟ್ಟಣ ಪ್ರದೇಶದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕಟ್ಟಿಸಿಕೊಡುತ್ತಾರಂತೆ. ಇದನ್ನು ಪ್ರಣಾಳಿಕೆಯಲ್ಲಿ ಹಾಕುವ ಪರಿಸ್ಥಿತಿಗೆ ಸರಕಾರ ಬಂದಿದೆಯಾ? ಅತ್ಯತ್ತಮ ಪ್ರಕೃತಿ ಸೌಂದರ್ಯ ಇರುವ ಹಾನಗಲ್‍ನಲ್ಲಿ ಈಗ ಸುಂದರ ಉದ್ಯಾನವನ ಮಾಡುತ್ತಾರಂತೆ. ಪಟ್ಟಣದವರಿಗೆ ಆರೋಗ್ಯ ಕಾರ್ಡ್ ಕೊಡುವುದಾದರೆ ಹಳ್ಳಿ ಜನ ಏನು ಅನ್ಯಾಯ ಮಾಡಿದ್ದರು? ಇದ್ಯಾವುದನ್ನೂ ಇವರಿಂದ ಮಾಡಲು ಸಾಧ್ಯವಿಲ್ಲ. ಅಧಿಕಾರವಿದ್ದಾಗಲೇ ನೀವು ಇದನ್ನು ಮಾಡಲು ಆಗಿಲ್ಲ. ಎರಡೂವರೆ ವರ್ಷದಲ್ಲಿ ಕೇಂದ್ರದ ಯೋಜನೆ ಜನರಿಗೆ ಮುಟ್ಟಿಸಲು ಆಗಿಲ್ಲ. ಮಾನೆ ಅವರು ಶಾಸಕರಾಗಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲಷ್ಟೇ ಇದೆಲ್ಲವೂ ಸಾಧ್ಯ ಎಂದು ಶಿವಕುಮಾರ್ ಟೀಕಿಸಿದರು.

‘ನಾನು ಯಾರಮೇಲೂ ವೈಯಕ್ತಿಕ ದಾಳಿ ಮಾಡುತ್ತಿಲ್ಲ. ವಾಸ್ತವ ಸ್ಥಿತಿಯನ್ನು ಜನರ ಮುಂದೆ ಇಡುತ್ತಿದ್ದೇನೆ. ನಾನು ಕಣ್ಣಲ್ಲಿ ನೋಡಿ, ಕಿವಿಯಲ್ಲಿ ಕೇಳಿದ ಸತ್ಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಯಾರ ಮೇಲೂ ವೈಯಕ್ತಿಕವಾಗಿ ದಾಳಿ ನಡೆಸುವ ಅಗತ್ಯವಿಲ್ಲ. ಮುಂದಿನ 50 ವರ್ಷಗಳ ವರೆಗೂ ಕಾಂಗ್ರೆಸ್ ಅಡ್ರೆಸ್‍ಗೆ ಇರುವುದಿಲ್ಲ ಎಂಬ ಬಿಎಸ್‍ವೈ ಹೇಳಿದ್ದಾರೆ. ಇದೀಗ ಯಡಿಯೂರಪ್ಪರ ವಿಳಾಸ ಯಾವುದು ಎಂಬ ವಿಚಾರವಾಗಿ ನಾವು ಬೇಜಾರಾಗುತ್ತಿದ್ದೇವೆ. ಅವರ ಕಣ್ಣೀರಲ್ಲಿ ಬಿಜೆಪಿ ಸರಕಾರ ಕೊಚ್ಚಿಕೊಂಡು ಹೋಗಲಿದೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News