ರಾಜ್ಯಾದ್ಯಂತ 1ರಿಂದ 5ನೇ ತರಗತಿಗಳು ನಾಳೆಯಿಂದ ಆರಂಭ

Update: 2021-10-24 15:25 GMT

ಬೆಂಗಳೂರು, ಅ. 24: ರಾಜ್ಯದಲ್ಲಿ ಇಪ್ಪತ್ತು ತಿಂಗಳಿಂದ ಮುಚ್ಚಿದ್ದ ಪ್ರಾಥಮಿಕ ಶಾಲೆಗಳು ನಾಳೆಯಿಂದ (ಸೋಮವಾರ ಅ.25)ಆರಂಭವಾಗುತ್ತಿವೆ. ರಾಜ್ಯಾದ್ಯಂತ 1 ರಿಂದ 5ನೆ ತರಗತಿಯನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಕಾಲ ಸಿದ್ಧತೆ ಮಾಡಿಕೊಂಡಿದ್ದು, ಕೆಲ ದಿನಗಳ ಹಿಂದೆ ರಾಜ್ಯ ಸರಕಾರ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಕೊವಿಡ್ ನಿಯಮದಂತೆ ಭೌತಿಕ ತರಗತಿಗಳು ಆರಂಭವಾಗಲಿದ್ದು, ಮಕ್ಕಳು ಶಾಲೆಗೆ ಹೋಗಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಕೊರೊನ ಲಾಕ್‍ಡೌನ್‍ನಿಂದಾಗಿ ಸರಕಾರ ಶಾಲೆಗಳನ್ನು ಮುಚ್ಚಿತ್ತು. ಈಗ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ಭೌತಿಕ ತರಗತಿ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸರಕಾರಿ, ಅನುದಾನಿತ ಸೇರಿದಂತೆ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯು ಹೊಡಿಸಿದ ಮಾರ್ಗಸೂಚಿಗಳಂತೆ ತರಗತಿಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿವೆ. ಯಾವುದೇ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತೆರೆಯಲು ಅವಕಾಶ ಇಲ್ಲ. ಇನ್ನೂ ಸರಕಾರಿ ಶಾಲೆಗಳಲ್ಲಿ ಇಂದಿನಿಂದಲೇ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ಶಿಕ್ಷಣ ಇಲಾಖೆ ಪೂರ್ವ ತಯಾರಿ ಮಾಡಿಕೊಂಡಿದೆ. 

ಎಲ್ಲ ಮಕ್ಕಳಿಗೆ ಒಂದು ದಿನ ತರಗತಿ, ಒಂದು ದಿನ ರಜೆ ನೀಡುವ ಮೂಲಕ, ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಮತ್ತು ಆಫ್‍ಲೈನ್ ತರಗತಿಗಳಿಗೆ ಅವಕಾಶ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರವೇ ಶಾಲೆಗಳು ತೆರೆಯಲಿದ್ದು, ಶನಿವಾರ ಮತ್ತು ರವಿವಾರ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯ ಮಾಡಲಾಗುವುದು. 

ಎರಡು ಡೋಸ್ ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗಿದೆ. ಎಲ್ಲ ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೆ ಇರುವುದನ್ನು ಪೋಷಕರು ದೃಢೀಕರಿಸಿರಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು ಎಂದು ಶಿಕ್ಷಣ ಇಲಾಖೆಯು ಶಾಲಾ ಮುಖ್ಯಸ್ಥರಿಗೆ ಆದೇಶ ನೀಡಿದ್ದು, ಶಾಲೆಗಳು ಸಿದ್ಧತೆ ಮಾಡಿಕೊಂಡಿವೆ. ಇನ್ನೂ ನ.2ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಲಿದ್ದು, ನ.2ರ ಶನಿವಾರ ಬೆಳಗ್ಗೆ 8 ರಿಂದ 11.40 ರ ವರೆಗೆ ಮಾತ್ರ ತರಗತಿ ನಡೆಯುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News