ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಗೆ ಪ್ರಧಾನಿ ಮೋದಿ ಚಾಲನೆ

Update: 2021-10-25 16:29 GMT

ಹೊಸದಿಲ್ಲಿ,ಅ.25: ನೂತನ ದೇಶವ್ಯಾಪಿ ಆರೋಗ್ಯ ರಕ್ಷಣೆ ಯೋಜನೆಗೆ ಸೋಮವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿನ ಸರಕಾರಗಳು ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿದ್ದವು ಎಂದು ಹೇಳುವ ಮೂಲಕ ಕಾಂಗ್ರೆಸ್‌ನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು. ಸ್ವಾತಂತ್ರಾನಂತರದ ಮೊದಲ 70 ವರ್ಷಗಳಲ್ಲಿ ಯಾವುದೇ ಪಕ್ಷವು ಅಗತ್ಯ ಆರೋಗ್ಯ ಮೂಲಸೌಕರ್ಯಗಳ ನಿರ್ಮಾಣಕ್ಕೆ ಗಮನವನ್ನು ನೀಡಿರಲಿಲ್ಲ.

ದೇಶವನ್ನು ಸುದೀರ್ಘ ಅವಧಿಗೆ ಆಳಿದ್ದ ಸರಕಾರಗಳು ದೇಶದ ಆರೋಗ್ಯ ರಕ್ಷಣೆ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವ ಬದಲು ಅದಕ್ಕೆ ಸೌಲಭ್ಯಗಳನ್ನು ವಂಚಿಸಿದ್ದವು ಎಂದ ಅವರು,‘ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕವನ್ನು ಎದುರಿಸಲು ನನ್ನ ಸರಕಾರವು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತಿದೆ ’ಎಂದರು.

5,000 ಕೋ.ರೂ.ವೆಚ್ಚದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನವನ್ನು ಉದ್ಘಾಟಿಸಿದ ಮೋದಿ,ಇಂದು ಬಡವರು,ಶೋಷಿತರು,ದಮನಿತರು,ಹಿಂದುಳಿದವರು ಮತ್ತು ಮಧ್ಯಮವರ್ಗದವರು ಸೇರಿದಂತೆ ಪ್ರತಿಯೊಬ್ಬರ ನೋವನ್ನು ಅರ್ಥ ಮಾಡಿಕೊಂಡಿರುವ ಸರಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ದೇಶದಲ್ಲಿಯ ಆರೋಗ್ಯ ಸೌಲಭ್ಯಗಳನ್ನು ಉತ್ತಮಗೊಳಿಸಲು ನಾವು ಅಹರ್ನಿಶಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಬೃಹತ್ ದೇಶವ್ಯಾಪಿ ಯೋಜನೆಗಳಲ್ಲೊಂದಾಗಿರುವ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನವನ್ನು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿಯ,ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖ ಆರೋಗ್ಯ ರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆ ಸೌಲಭ್ಯಗಳಲ್ಲಿಯ ಅಂತರಗಳನ್ನು ನಿವಾರಿಸಲು ರೂಪಿಸಲಾಗಿದೆ.

ದೇಶದ ಆರೋಗ್ಯ ಕ್ಷೇತ್ರದಲ್ಲಿಯ ವಿವಿಧ ಲೋಪಗಳನ್ನು ನಿವಾರಿಸಲು ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನವು ಮೂರು ಪ್ರಮುಖ ಮಗ್ಗಲುಗಳನ್ನು ಹೊಂದಿದೆ ಎಂದು ಹೇಳಿದ ಪ್ರಧಾನಿ,ಮೊದಲನೆಯದು ರೊಗನಿರ್ಣಯ ಮತ್ತು ಚಿಕಿತ್ಸೆಗಾಗಿ ವ್ಯಾಪಕ ಸೌಲಭ್ಯಗಳ ಸೃಷ್ಟಿಗೆ ಸಂಬಂಧಿಸಿದ್ದರೆ,ಎರಡನೆಯದು ರೋಗನಿರ್ಣಯಕ್ಕಾಗಿ ಪರೀಕ್ಷಾ ಕೇಂದ್ರಗಳ ಜಾಲಕ್ಕೆ ಸಂಬಂಧಿಸಿದೆ. ಅಂತಿಮವಾಗಿ ರೋಗನಿರ್ಧಾರ ಮತ್ತು ಕಣ್ಗಾವಲಿಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಯೋಜನೆಯು ದೇಶಾದ್ಯಂತ ಪ್ರಯೋಗಾಲಯಗಳ ಜಾಲಗಳ ಮೂಲಕ ಸಂಪೂರ್ಣ ರೋಗನಿರ್ಣಯ ಸೌಲಭ್ಯಗಳನ್ನು ಒದಗಿಸಲಿದೆ ಮತ್ತು ಎಲ್ಲ ಜಿಲ್ಲೆಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.

ಅಭಿಯಾನವು 10 ಪ್ರಮುಖ ರಾಜ್ಯಗಳಲ್ಲಿ ಹರಡಿಕೊಂಡಿರುವ 17,788 ಗ್ರಾಮೀಣ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಬೆಂಬಲಿಸುವ ಜೊತೆಗೆ ಎಲ್ಲ ರಾಜ್ಯಗಳಲ್ಲಿ ಇನ್ನೂ 11,024 ನಗರ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಯೋಜನೆಯಡಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ,ನಾಲ್ಕು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಗಳು,ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಏಷ್ಯಾ ವಲಯಕ್ಕಾಗಿ ಪ್ರಾದೇಶಿಕ ಸಂಶೋಧನಾ ವೇದಿಕೆ,ಒಂಭತ್ತು ಬಯೊಸೇಫ್ಟಿ ಲೆವೆಲ್- III ಪ್ರಯೋಗಾಲಯಗಳು,ಐದು ಪ್ರಾದೇಶಿಕ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಗಳನ್ನೂ ಸ್ಥಾಪಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News