ಚುನಾವಣೆಗಳ ಮೇಲೆ ಪ್ರಭಾವ:ಫೇಸ್‌ಬುಕ್ ಪಾತ್ರದ ಬಗ್ಗೆ ಜೆಪಿಸಿ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2021-10-25 18:01 GMT

ಹೊಸದಿಲ್ಲಿ,ಅ.25: ಫೇಸ್‌ಬುಕ್ ಭಾರತದ ಚುನಾವಣೆಗಳ ಮೇಲೆ ಪ್ರಭಾವವನ್ನು ಬೀರುತ್ತಿದೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಸೋಮವಾರ ಆರೋಪಿಸಿರುವ ಕಾಂಗ್ರೆಸ್,ಈ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆಗೆ ಆಗ್ರಹಿಸಿದೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ,ಭಾರತದಲ್ಲಿ ತನ್ನ ವೇದಿಕೆಯಲ್ಲಿ ದ್ವೇಷ ಭಾಷಣ ಪೋಸ್ಟ್‌ಗಳ ವಿರುದ್ಧ ಯಾವುದೇ ಕ್ರಮವನ್ನು ಫೇಸ್‌ಬುಕ್ ಕೈಗೊಳ್ಳುತ್ತಿಲ್ಲ ಎನ್ನುವುದಕ್ಕೆ ಸೋರಿಕೆಯಾಗಿರುವ ಕಂಪನಿಯ ಆಂತರಿಕ ವರದಿಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ವಕ್ತಾರ ಪವನ ಖೇರಾ ಅವರು,ಫೇಸ್‌ಬುಕ್ ಈಗ ತನ್ನನ್ನು ‘ಫೇಕ್‌ಬುಕ್’ ಮಟ್ಟಕ್ಕೆ ಇಳಿಸಿಕೊಂಡಿದೆ ಎಂದರು.

ಈ ಆರೋಪಗಳಿಗೆ ಫೇಸ್‌ಬುಕ್ ಇಂಡಿಯಾ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಫೇಸ್‌ಬುಕ್ ಆಡಳಿತ ಬಿಜೆಪಿಯ ಮಿತ್ರಪಕ್ಷದಂತೆ ವರ್ತಿಸುತ್ತಿದೆ ಮತ್ತು ಅದರ ಅಜೆಂಡಾವನ್ನು ಮುಂದೊತ್ತುತ್ತಿದೆ ಎಂದೂ ಆರೋಪಿಸಿದ ಖೇರಾ,ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ದ್ವೇಷ ಭಾಷಣ ಪೋಸ್ಟ್‌ಗಳನ್ನು ಮಾಡಿದವರ ವಿರುದ್ಧ ಫೇಸ್‌ಬುಕ್ ಯಾವುದೇ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿರುವ ಕಂಪನಿಯ ಮಾಜಿ ಉದ್ಯೋಗಿ ಫ್ರಾನ್ಸೆಸ್ ಹಾಗೆನ್ ಅವರ ಸಂಶೋಧನಾ ದಾಖಲೆಗಳನ್ನು ಉಲ್ಲೇಖಿಸಿದರು.

ಫೇಸ್‌ಬುಕ್‌ನ ಆಂತರಿಕ ವರದಿಗಳು 10 ಲಕ್ಷಕ್ಕೂ ಅಧಿಕ ದ್ವೇಷ ಭಾಷಣ ಪೋಸ್ಟ್‌ಗಳೊಂದಿಗೆ ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ್ದರೂ ಕಂಪನಿಯು ಈವರೆಗೆ ಆ ಕುರಿತು ಯಾವುದೇ ಕ್ರಮಗಳನು ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು,‘ಚುನಾವಣೆಗಳ ಮೇಲೆ ಪ್ರಭಾವ ಬೀರುವಲ್ಲಿ ಫೇಸ್‌ಬುಕ್‌ನ ಪಾತ್ರದ ಬಗ್ಗೆ ಜೆಪಿಸಿ ತನಿಖೆಗೆ ನಾವು ಆಗ್ರಹಿಸುತ್ತಿದ್ದೇವೆ ’ಎಂದರು.

ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಫೇಸ್‌ಬುಕ್‌ನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ನುಸುಳಿದ್ದಾರೆ ಎಂದು ಆರೋಪಿಸಿದ ಖೇರಾ,ನಕಲಿ ಪೋಸ್ಟ್‌ಗಳು,ಚಿತ್ರಗಳು ಮತ್ತು ನಿರೂಪಣೆಗಳ ಮೂಲಕ ನಿರ್ದಿಷ್ಟ ಸಿದ್ಧಾಂತವನ್ನು ಮುಂದಕ್ಕೊತ್ತಲು ಫೇಸ್‌ಬುಕ್‌ಗೆ ಯಾವ ಹಕ್ಕು ಇದೆ? ಫೇಸ್‌ಬುಕ್‌ನಿಂದ ಕೇವಲ ಶೇ.0.2ರಷ್ಟು ದ್ವೇಷ ಭಾಷಣ ಪೋಸ್ಟ್‌ಗಳನ್ನು ತೆಗೆಯಲಾಗಿದೆ ಎನ್ನುವುದು ಆಘಾತಕಾರಿಯಾಗಿದೆ.

ಅದು ಭಾರತದಿಂದ ಹೇರಳ ದುಡ್ಡು ಗಳಿಸುತ್ತಿದ್ದರೂ ಹಿಂದಿ ಅಥವಾ ಬಂಗಾಳಿಯಲ್ಲಿಯ ಪೋಸ್ಟ್‌ಗಳನ್ನು ಜಾಲಾಡುವ ವ್ಯವಸ್ಥೆಯನ್ನು ಹೊಂದಿಲ್ಲ.ಭಾರತದಲ್ಲಿಯ ಕೇವಲ ಶೇ.9ರಷ್ಟು ಬಳಕೆದಾರರು ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದ್ದಾರೆ,ಆದರೂ ಪ್ರಾದೇಶಿಕ ಭಾಷೆಗಳಲ್ಲಿಯ ಪೋಸ್ಟ್‌ಗಳ ಮೇಲೆ ನಿಗಾಯಿರಿಸುವ ವ್ಯವಸ್ಥೆಗಳನ್ನು ಅದು ರೂಪಿಸಿಲ್ಲ ಎಂದರು.

ದಿಲ್ಲಿ ದಂಗೆಗಳಲ್ಲಿ ಮತ್ತು ಪ.ಬಂಗಾಳ ಚುನಾವಣೆಗಳಲ್ಲಿ ಫೇಸ್‌ಬುಕ್‌ನ ಪಾತ್ರವು ಶಂಕಾಸ್ಪದವಾಗಿದೆ ಎಂದು ಆರೋಪಿಸಿದ ಅವರು,‘ಅದು ಆಡಳಿತ ಪಕ್ಷದ ಅಜೆಂಡಾ ಮತ್ತು ಅದರ ದ್ವೇಷಭರಿತ, ಮತಾಂಧ ಮತ್ತು ಸಮಾಜ ವಿಭಜನಕಾರಿ ಸಿದ್ಧಾಂತವನ್ನು ಗೊತ್ತಿದ್ದೇ ಉತ್ತೇಜಿಸುತ್ತಿರುವುದರಿಂದ ಫೇಸ್‌ಬುಕ್‌ನ ಪಾತ್ರವನ್ನು ಕಣ್ತಪ್ಪಿನಿಂದ ಆಗಿರುವ ಲೋಪ ಎಂದು ತಳ್ಳಿಹಾಕಲು ಸಾಧ್ಯವಿಲ್ಲ.

ಅದು ತನ್ನ ಬಳಕೆದಾರರ ಮತದಾನ ಪ್ರವೃತ್ತಿಯ ಮೇಲೆ ಪ್ರಭಾವ ಬೀರುವ ಮೂಲಕ ನಮ್ಮ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ನಾವೇಕೆ ಆರೋಪಿಸಬಾರದು? ಇದು ಗಂಭೀರ ಚುನಾವಣಾ ಮೋಸವಾಗಿದೆ ಮತ್ತು ವಿದೇಶಿ ಕಂಪನಿಯಿಂದ ನಮ್ಮ ಚುನಾವಣೆಗಳಲ್ಲಿ ಗಂಭಿರ ಹಸ್ತಕ್ಷೇಪವಾಗಿದೆ.

ತನ್ನವರಿಂದಲೇ ವ್ಯಕ್ತವಾಗಿರುವ ಆರೋಪಗಳಿಗೆ ಫೇಸ್‌ಬುಕ್ ಏಕೆ ವೌನವಾಗಿದೆ? ಸರಕಾರವೇಕೆ ವೌನವಾಗಿದೆ? ಏಕೆಂದರೆ ಫೇಸ್‌ಬುಕ್ ಅದರ ಅಜೆಂಡಾಕ್ಕೆ ಸೂಕ್ತವಾಗಿದೆ ಮತ್ತು ಅದು ಬಿಜೆಪಿ ಹಾಗೂ ಅದರ ಸಹವರ್ತಿಗಳ ಕೈಯಲ್ಲಿ ಸಾಧನವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News