ಒಂದೊಂದು ಕ್ಷೇತ್ರಕ್ಕೆ 10ರಿಂದ 12 ಸಚಿವರು ದುಡ್ಡಿನ ಚೀಲ ಹಿಡಿದು ಬಂದು ಕೂತಿದ್ದಾರೆ: ಸಿದ್ದರಾಮಯ್ಯ ಆರೋಪ

Update: 2021-10-27 09:37 GMT

ಹುಬ್ಬಳ್ಳಿ, ಅ.27: ಜನರಿಗೆ ಬಿಜೆಪಿ ಅಧಿಕಾರದಿಂದ ತೊಲಗಿ ಕಾಂಗ್ರೆಸ್ ಬಂದರೆ ಸಾಕಾಗಿದೆ. ಬಿಜೆಪಿಯವರಿಗೆ ಹಣ ಕೊಟ್ಟು ಓಟು ಖರೀದಿ ಮಾಡುವುದೊಂದು ಬಿಟ್ಟು ಯಾವ ದಾರಿ ಇಲ್ಲವಾಗಿದೆ. ಬೆಲೆಯೇರಿಕೆ ಮಾಡಿರುವುದು ಅಭಿವೃದ್ಧಿ ಕಾರ್ಯಗಳೇ? ಒಂದೊಂದು ಕ್ಷೇತ್ರಕ್ಕೆ ಹತ್ತರಿಂದ ಹನ್ನೆರಡು ಜನ ಸಚಿವರು ದುಡ್ಡಿನ ಚೀಲ ಹಿಡಿದುಕೊಂಡು ಬಂದು ಕೂತಿದ್ದಾರೆ. ಬಿಜೆಪಿಯವರು ಹಣ ಹಂಚುತ್ತಿರುವ ವೀಡಿಯೋ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವರೆಗೆ ಹಾನಗಲ್ ನಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿ ಮಾಡಿಲ್ಲ, ನಮ್ಮ‌ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾದದ್ದು ಬಿಟ್ಟರೆ ಬೇರೆ ಯಾವ ಕೆಲಸ ಆಗಿಲ್ಲ. ಇದರಿಂದ ಜನ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಲು ಅರಂಭಿಸಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಪಕ್ಷದ ಗೆಲುವು ನಿಚ್ಚಳವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹಾನಗಲ್ ಕ್ಷೇತ್ರಕ್ಕೆ ಈ ವರೆಗೆ ಒಂದು ಮನೆ ಕೊಟ್ಟಿಲ್ಲ, ಈಗ ಚುನಾವಣೆ ಬಂದಿರುವುದರಿಂದ 7,500 ಮನೆ ಮಂಜೂರು ಮಾಡಿರುವ ಪತ್ರ ಹಿಡಿದುಕೊಂಡು ಮುಖ್ಯಮಂತ್ರಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಅದನ್ನು ಕಟ್ಟಿಸಿಕೊಡ್ತಾರೊ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬಸವರಾಜ ಬೊಮ್ಮಾಯಿ ಸುಳ್ಳು ಹೇಳಿರುವುದು ಜನರ ಎದುರು, ಹಾಗಾಗಿ ಜನರ ಎದುರೇ ಚರ್ಚೆ ನಡೆಯಲಿ. ಯಾರು ಸತ್ಯ ಹೇಳುತ್ತಾರೆ ಎಂದು ಜನತಾ ನ್ಯಾಯಾಲಯದಲ್ಲೇ ತೀರ್ಮಾನವಾಗಲಿ. ಮುಖ್ಯಮಂತ್ರಿಗೆ ಜನರೆದುರು ಚರ್ಚೆ ಮಾಡಲು ಭಯ ಯಾಕೆ?

ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮದ ಜನರ ಪರವಾಗಿದೆ. ನಮ್ಮ ಅನ್ನಭಾಗ್ಯ ಯೋಜನೆಯ ಅಕ್ಕಿ, ಮಕ್ಕಳಿಗೆ ಹಾಲು, ಶೂಭಾಗ್ಯ, ಕ್ಷೀರಧಾರೆ, ಇಂದಿರಾ ಕ್ಯಾಂಟೀನ್ ಹೀಗೆ ಹಲವು ಯೋಜನೆಗಳನ್ನು ಬರೀ ಮುಸ್ಲಿಮರಿಗೆ ಮಾತ್ರ ಕೊಟ್ಟಿದ್ವಾ? 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಿದ್ದು ಬರೀ ಮುಸ್ಲಿಂ ರೈತರಿಗಾ? ಇಂದಿರಾ ಕ್ಯಾಂಟೀನ್ ನಲ್ಲಿ ಬರೀ ಮುಸ್ಲಿಮರು ಮಾತ್ರ ಊಟ ಮಾಡೋದ? ರಾಜಕೀಯಕ್ಕಾಗಿ ಏನೇನೋ ಮಾತನಾಡಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಸರಕಾರ. ಅನ್ನಭಾಗ್ಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೆ ಉಚಿತವಾಗಿ ಅಕ್ಕಿ ಕೊಡುವ ಕಾರ್ಯಕ್ರಮ ಗುಜರಾತ್ ನಲ್ಲಿ ಯಾಕಿಲ್ಲ? ಉತ್ತರ ಪ್ರದೇಶದಲ್ಲಿ ಏಕಿಲ್ಲ? ಮಧ್ಯ ಪ್ರದೇಶದಲ್ಲಿ ಏಕಿಲ್ಲ? ಅಲ್ಲೆಲ್ಲಾ ಬಿಜೆಪಿ ಸರ್ಕಾರವೇ ಇದಾವಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News