ಲಂಚದ ಬೇಡಿಕೆಯಿಟ್ಟ ಸರಕಾರಿ ಅಧಿಕಾರಿ: ಜನರಿಂದ ಭಿಕ್ಷೆ ಬೇಡಿ ಹಣ ನೀಡಲು ಮುಂದಾದ ವ್ಯಕ್ತಿ!

Update: 2021-10-27 10:21 GMT

ಯಲ್ಲಾಪುರ, ಅ.27: ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚದ ಬೇಡಿಕೆಯಿಟ್ಟ ಅಧಿಕಾರಿಯ ಮನಃಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಜನರಿಂದ ಭಿಕ್ಷೆ ಬೇಡಿ ಹಣ ನೀಡಲು ಮುಂದಾದ ಘಟನೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.

ತಟಗಾರ ಗ್ರಾಮದ ಸರ್ವೆ ನಂ 12ರಲ್ಲಿನ ಪ್ರದೇಶವನ್ನು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಗಜಾನನ ಭಟ್ ಹಾಗೂ ನಾರಾಯಣ ಭಟ್ ಎಂಬ ಸಹೋದರರಿಬ್ಬರು ವಿಭಾಗಿಸಿ ಹಂಚಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂ ಬೇಡಿಕೆ ಇಟ್ಟಿದ್ದರೆನ್ನಲಾಗಿದ. ಈ ಹಿನ್ನೆಲೆಯಲ್ಲಿ ಗಜಾನನ ಭಟ್ ಅವರ ಪುತ್ರ ಅಚ್ಯುತಕುಮಾರ್ ಮಂಗಳವಾರ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿಗೆ ಅವರು ಬಯಸಿದ ಹಣ ನೀಡಲು ಮುಂದಾಗಿದ್ದರು.

ಭ್ರಷ್ಟಾಚಾರದ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನ ಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ ಎಂದು ಅಚ್ಯುತಕುಮಾರ್ ಈ ವೇಳೆ ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆಗೆ ಸರಕಾರಿ ಕಚೇರಿಯ ಎಲ್ಲಡೆ ಸಿಸಿಟಿವಿ ಕಡ್ಡಾಯ ಆಗಬೇಕು. ಈ ಕುರಿತು ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಪಾಲನೆಯಾಗಿಲ್ಲ. ಪ್ರಸಕ್ತ ಜನರಿಂದ ಸ್ವೀಕೃತವಾದ 136 ರೂ. ಅನ್ನು ಜಿಲ್ಲಾಧಿಕಾರಿ ಅಧೀನದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಕೃತಿ ವಿಕೋಪ ನಿಧಿಗೆ ನೀಡಲಾಗುವುದು ಎಂದು ಅಚ್ಯುತಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News