ರೈತರಲ್ಲಿ ಆತಂಕ ಸೃಷ್ಟಿಸಲೆಂದೇ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ: ಭಗವಂತ್ ಖೂಬಾ ಆರೋಪ

Update: 2021-10-27 13:22 GMT

ಬೆಂಗಳೂರು, ಅ. 27: ‘ಉಪಚುನಾವಣೆಯ ಸೋಲಿನ ಭೀತಿ ಹಾಗೂ ಹತಾಶೆಯಿಂದ ರೈತರ ರಸಗೊಬ್ಬರ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಸುಳ್ಳು ವದಂತಿ ಸೃಷ್ಟಿಸುವ ಮೂಲಕ ರಾಜ್ಯದ ರೈತರಲ್ಲಿ ಆತಂಕವನ್ನುಂಟು ಮಾಡಿದ್ದಾರೆ' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ತಿರುಗೇಟು ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ವರ್ಷದಲ್ಲಿ ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸ್ವಲ್ಪ ಭಾಗದಲ್ಲಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಹೆಚ್ಚಾಗುತ್ತಿದೆ. ರೈತರು ಅದನ್ನು ಅಳವಡಿಸಿಕೊಂಡರೆ ರೈತರಿಗೆ ಅನುಕೂಲವಾಗಲಿದೆ. ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರದಿಂದ ಹೆಚ್ಚಿನ ಉತ್ಪಾದನೆ ಹೆಚ್ಚಾಗುತ್ತಿದೆ. ಹೀಗಾಗಿ ಕಾರಣಕ್ಕೆ ಸರಕಾರ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಖರೀದಿಗೆ ಸೂಚಿಸಲಾಗುತ್ತಿದೆ. ಇದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ರೈತರು ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ' ಎಂದು ತಿಳಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ರೈತರಿಗೆ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಈ ರೀತಿ ವದಂತಿ ಸೃಷ್ಟಿಸಿದರೆ ರಸಗೊಬ್ಬರದ ಕೊರತೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಮುಂದಿನ ನಾಲ್ಕು ತಿಂಗಳಿಗೆ ಬೇಕಾದಷ್ಟು ಗೊಬ್ಬರ ಸಂಗ್ರಹಕ್ಕೆ ಮುಂದಾಗುತ್ತಾರೆ. ಇದರಿಂದ ದಲ್ಲಾಳಿಗಳ ಹಾವಳಿ ಹೆಚ್ಚಾಗಲಿದೆ. ಕಾಳಸಂತೆಯಲ್ಲಿ ರಸಗೊಬ್ಬರಕ್ಕೆ ಮಾರಾಟಕ್ಕೆ ಅವಕಾಶ ಕೊಡಬಾರದು. ನಾನು ಇಲಾಖೆಯ ಜವಾಬ್ದಾರಿ ಸಚಿವನಾಗಿ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲು ಬಂದಿದ್ದೇನೆ' ಎಂದು ಅವರು ಸ್ಪಷ್ಟಪಡಿಸಿದರು.

‘2008ರಲ್ಲಿ ಕೇಂದ್ರದಲ್ಲಿ ಬೇಜವಾಬ್ದಾರಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಇದರಿಂದ ರಾಜ್ಯಗಳಲ್ಲಿ ಬೀಜ ಗೊಬ್ಬರದ ಸಮಸ್ಯೆಯಾಗಿತ್ತು. ಆಗ ಕೇಂದ್ರ ಸರಕಾರ ಏಕೆ ಗೊಬ್ಬರ ಸರಬರಾಜು ಮಾಡಿರಲಿಲ್ಲ. ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಈ ವರ್ಷ ಮಳೆ ಹೆಚ್ಚಳವಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ.

ಚೀನಾ ರಸಗೊಬ್ಬರ ರಫ್ತು ಸ್ಥಗಿತಗೊಳಿಸಿದೆ. ಅಮೆರಿಕಾದಲ್ಲಿ ಸೈಕ್ಲೋನ್ ಬಂದಿರುವುದರಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷ ‘ಆತ್ಮನಿರ್ಭರ ಭಾರತ' ಅಡಿಯಲ್ಲಿ ನ್ಯಾನೊ ಯೂರಿಯಾ ಉತ್ಪಾದನೆ ಹೆಚ್ಚಾಗಿದೆ. ಮುಂದಿನ ವರ್ಷ ನ್ಯಾನೊ ಡಿಎಪಿ ಉತ್ಪಾದನೆ ಮಾಡಲಾಗುವುದು. ಯೂರಿಯಾ ರಾಜ್ಯದಲ್ಲಿ 22 ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಎಂಒಪಿ-29. ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಮೈಸೂರು ಭಾಗದಲ್ಲಿ ಸ್ವಲ್ಪ ಕೊರತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ಕೇಂದ್ರದಿಂದ 3 ಸಾವಿರ ಮೆಟ್ರಿಕ್ ಟನ್ ತರಿಸಲು ಸೂಚನೆ ನೀಡಿದ್ದೇನೆ ಎಂದು ಮಲ್ಲಿಕಾರ್ಜುನ ಖೂಬಾ ವಿವರಿಸಿದರು.

ಹಿಂಗಾರು ಹಂಗಾಮಿನಲ್ಲಿ 2 ಲಕ್ಷ ಮೆಟ್ರಿಕ್ ಟನ್ ಡಿಎಪಿ ಬೇಕಾಗಲಿದೆ. ಅದನ್ನು ಉತ್ಪಾದನೆ ಮಾಡಲಾಗುವುದು. ಎರಡು ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಕ್ರಮ ಕೈಗೊಂಡಿದ್ದೇವೆ. ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, 78.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಗೆ ಅವಶ್ಯವಿರುವ ಪರಿಕರಗಳ ಸರಬರಾಜನ್ನು ರಾಜ್ಯದಿಂದ ಸಮರ್ಪಕವಾಗಿ ಮಾಡಲಾಗಿದೆ. ರಸಗೊಬ್ಬರಗಳನ್ನು ಕೇಂದ್ರ ಸರಕಾರದ ಹಂಚಿಕೆಯಂತೆ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ.

2021-22ರ ಸಾಲಿನ ಹಿಂಗಾರು/ಬೇಸಿಗೆ ಹಂಗಾಮಿಗೆ 16.94 ಲಕ್ಷ ಮೆಟನ್ (ಯೂರಿಯಾ-6.50 ಲಕ್ಷ ಮೆ.ಟನ್, ಡಿಎಪಿ 2.10 ಲಕ್ಷ ಮೆ.ಟನ್, ಎಂಒಪಿ-1.17 ಲಕ್ಷ ಮೆಟನ್ ಮತ್ತು ಕಾಂಪ್ಲೆಕ್ಸ್ 7.17 ಲಕ್ಷ ಮೆಟನ್) ಪ್ರಮಾಣದ ವಿವಿಧ ಗ್ರೇಡ್‍ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ. 2021-22ನೆ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 28 ಲಕ್ಷ ಹೆಕ್ಟೇರ್‍ಗೆ ಪ್ರತಿಯಾಗಿ ಅ.26ರವರೆಗೆ 5.02 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇ.18 ಬಿತ್ತನೆಯಾಗಿದೆ. 2021-22ನೆ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5ಲಕ್ಷ ಹೆಕ್ಟೇರ್ ಇರುತ್ತದೆ. ನೇರ ರಸಗೊಬ್ಬರದ ಬದಲಿಗೆ ಕಾಂಪ್ಲೆಕ್ಸ್ ರಸಗೊಬ್ಬರದಲ್ಲಿ ಸಮತೋಲಿತ ಪೋಷಕಾಂಶಗಳೊಂದಿಗೆ ತ್ವರಿತವಾಗಿ ಬೆಳೆಗಳಿಗೆ ಲಭ್ಯವಾಗುವ ಕಾರಣ ಪ್ರಸ್ತುತ ನೇರ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಬಳಕೆ ಮಾಡಲು ರೈತರಿಗೆ ಪ್ರೋತ್ಸಾಹಿಸಲಾಗಿದ್ದು, ಈ ಬಗ್ಗೆ ರೈತರಿಗೆ ಮನವರಿಗೆ ಮಾಡಲಾಗಿದೆ ಎಂದು ಅವರ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News