ಕೇಂದ್ರ ಸರಕಾರದ ಕೃಷಿ ತಿದ್ದುಪಡಿ ಮಸೂದೆಗಳು ಅಪ್ರಜಾಪ್ರಭುತ್ವದ ಕಾಯ್ದೆಗಳು: ನಿವೃತ್ತ ನ್ಯಾ.ನಾಗಮೋಹನ್‍ದಾಸ್

Update: 2021-10-27 12:10 GMT

ಚಿಕ್ಕಮಗಳೂರು, ಅ.27: ಕೇಂದ್ರ ಸರಕಾರ ಕೃಷಿ ತಿದ್ದುಪಡಿ ಮಸೂದೆಗಳನ್ನು ಕೃಷಿ ಕ್ಷೇತ್ರದ ತಜ್ಞರು, ರೈತರು ಹಾಗೂ ಸಂಸತ್‍ನಲ್ಲಿ ಸಮಗ್ರವಾಗಿ ಚರ್ಚೆಗೊಳಪಡಿಸದೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಮುಂದಾಗಿರುವುದು ಸಂವಿಧಾನ ವಿರೋಧಿ ನಿಲುವಾಗಿದೆ. ಈ ಕೃಷಿ ತಿದ್ದುಪಡಿ ಕಾಯ್ದೆಗಳು ಅಪ್ರಜಾಪ್ರಭುತ್ವದ ಕಾಯ್ದೆಗಳಾಗಿದ್ದು, ಈ ಕಾಯ್ದೆಗಳ ಜಾರಿ ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ಚಳವಳಿ ಮಾಡುತ್ತಿರುವ ರೈತರ ಮಾತುಗಳನ್ನು ಕೇಂದ್ರ ಸರಕಾರ ಕಿವಿಗಳಿಂದ ಕೇಳಿಸಿಕೊಳ್ಳದೇ ಹೃದಯದಿಂದ ಕೇಳಿಸಿಕೊಂಡಲ್ಲಿ ಈ ಕಾಯ್ದೆಗಳು ಎಷ್ಟು ಜನವಿರೋಧಿ ಎಂಬುದು ಅರಿವಿಗೆ ಬರುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಎಚ್.ಎನ್.ನಾಗಮೋಹನ್‍ದಾಸ್ ಅಭಿಪ್ರಾಯಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳು ಹಾಗೂ ದಲಿತ, ರೈತ, ಕನ್ನಡ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಜನಸಂಸ್ಕøತಿ ವೇದಿಕೆ ಬುಧವಾರ ಹಮ್ಮಿಕೊಂಡಿದ್ದ "ರೈತರನ್ನು ರಕ್ಷಿಸಿ, ಸಂವಿಧಾನ ಉಳಿಸಿ" ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ವಿಚಾರ ಮಂಡಿಸಿದ ಅವರು, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ರೈತರು ದಿವಾಳಿಯಾದರೇ ದೇಶವೇ ದಿವಾಳಿಯಾಗುತ್ತದೆ. ದೇಶದ ರೈತರ ಬದುಕಿಗೆ ಭದ್ರತೆ ನೀಡಿದಲ್ಲಿ ದೇಶಕ್ಕೆ ಭದ್ರತೆ ಸಿಗುತ್ತದೆ. ರೈತರನ್ನು ನಿರ್ಲಕ್ಷ್ಯಿಸಿ ದೇಶ ಕಟ್ಟಲು ಸಾಧ್ಯವೇ ಇಲ್ಲ ಎಂದ ಅವರು, ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಕೃಷಿ ತಿದ್ದುಪಡಿ ಮಸೂದೆಗಳು ಇಡೀ ದೇಶಕ್ಕೇ ಮಾರಕ. ರೈತರ ಹೋರಾಟಕ್ಕೆ ಜಯ ಸಿಗುವಂತಾಗಲೂ ಎಲ್ಲ ಪಕ್ಷ, ಸಂಘಟನೆಗಳು ಭಿನ್ನಾಭಿಪ್ರಾಯ ಮರೆತು ಐಕ್ಯ ಹೋರಾಟ ರೂಪಿಸಬೇಕು. ಜನರ ಎಲ್ಲ ರೀತಿಯ ಸಮಸ್ಯೆಗಳಿಗೆ ಜನಪರ ಚಳವಳಿಗಳೇ ಮದ್ದು ಎಂದರು.

ದೇಶದಲ್ಲಿ ಈ ಹಿಂದೆ ಕೃಷಿ ಪದ್ಧತಿ ಸ್ವಾವಲಂಬಿಯಾಗಿತ್ತು. ಜನಸಂಖ್ಯೆ ಹೆಚ್ಚಿದಂತೆ ಆಹಾರದ ಕೊರತೆ ಉಂಟಾಗಿದ್ದರಿಂದ ಹಸಿರುಕ್ರಾಂತಿಗೆ ಆಧ್ಯತೆ ನೀಡಲಾಯಿತು. ಇದರ ಪರಿಣಾಮ ಆಹಾರೋತ್ಪನ್ನದಲ್ಲಿ ದೇಶ ಸ್ವಾವಲಂಭಿಯಾಗಿ ವಿದೇಶಗಳಿಗೆ ರಫ್ತು ಮಾಡುವಷ್ಟು ಆಹಾರೋತ್ಪನ್ನಗಳನ್ನು ಉತ್ಪಾದಿಸಲಾಯಿತು. ಆದರೆ ಈ ಇದೇ ಸಂದರ್ಭದಲ್ಲಿ ರಾಸಾಯನಿಕಗಳ ಭಾರೀ ಬಳಕೆಯಿಂದ ಭೂಮಿ ಬರಡಾಗಿ, ಅಂತರ್ಜಲ ಬತ್ತಿ ರೈತರು ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರೈತರು ಆರ್ಥಿಕವಾಗಿ, ನೈತಿಕವಾಗಿ, ಸಾಂಸ್ಕøತಿಕವಾಗಿ ದಿವಾಳಿಯಾಗಿದ್ದು, ರೈತರು ಬೆಳೆದ ಬೆಳೆ ಇಲ್ಲದೇ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ, ವಿಜ್ಞಾನದ ಕೊಡುಗೆಗಳನ್ನು ವೈಜ್ಞಾನಿಕವಾಗಿ ಬಳಸದಿರುವುದು ಕೃಷಿ ಕೇತ್ರದಲ್ಲಿನ ಇಂದಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಪ್ರತೀ ವರ್ಷ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸಿ ಎಂದು ಸರಕಾರದ ಬಳಿ ಕೇಳಿಕೊಂಡ ರೈತರಿಗೆ ಸರಕಾರ ಹಿಂದಿನ ಕೃಷಿ ಮಸೂದೆಗಳಿಗೆ ತಿದ್ದುಪಡಿ ಮಾಡಿ ಕೃಷಿ ಕ್ಷೇತ್ರವನ್ನೇ ಖಾಸಗೀಕರಣ ಮಾಡಲು ಮುಂದಾಗಿದೆ. ಈ ತಿದ್ದುಪಡಿ ಮಸೂದೆಗಳಿಂದಾಗಿ ಕೃಷಿ ಜಮೀನುಗಳು ಕೃಷಿಕರಲ್ಲದವರು, ಕಾರ್ಪೊರೆಟ್ ಕಂಪೆನಿಗಳು, ರಿಯಲ್ ಎಸ್ಟೇಟ್ ಕಂಪೆನಿಗಳ ಪಾಲಾಗಲು ನಾಂದಿ ಹಾಡಲಿದ್ದು, ಸಣ್ಣ, ಮಧ್ಯಮ ಹಿಡುವಳಿದಾರರು ತಮ್ಮ ಜಮೀನು ಕಳೆದುಕೊಂಡು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲಿವೆ ಎಂದು ಎಚ್ಚರಿಸಿದರು.

ಹಿಂದಿನ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವ ಪರಿಣಾಮ ಇನ್ನು ಮುಂದೆ ಕೃಷಿಕರಲ್ಲದವರೂ ಕೃಷಿ ಜಮೀನುಗಳನ್ನು ಎಷ್ಟು ಪ್ರಮಾಣದಲ್ಲಾದರೂ ಖರೀದಿಸಬಹುದು. ಪರಿಣಾಮ ಸಣ್ಣ ಕೃಷಿಕರು ತಮ್ಮ ಕೃಷಿ ಜಮೀನುಗಳನ್ನು ಮಾರಿಕೊಂಡು ಬೀದಿಪಾಲಾಗುತ್ತಾನೆ. ದೇಶದಲ್ಲಿ ಸಣ್ಣ, ಅತಿಸಣ್ಣ ರೈತರೇ ಹೆಚ್ಚಿರುವುದರಿಂದ ಈ ಜಮೀನುಗಳು ಕೃಷಿಕರಲ್ಲದ ಕಾರ್ಪೊರೆಟ್ ಕಂಪೆನಿಗಳ ಪಾಲಾದಲ್ಲಿ ಕೃಷಿ ಕ್ಷೇತ್ರ ಉಳಿಯಲು ಸಾಧ್ಯವೇ ಇಲ್ಲ. ಸರಕಾರ ಭೂಮಿಯನ್ನು ಆರ್ಥಿಕ ದೃಷ್ಟಿಯಿಂದ ನೋಡಿದಾಗ ಇಂತಹ ಕಾನೂನುಗಳು ಜಾರಿಯಾಗುತ್ತವೆ ಎಂದ ಅವರು, ಕೃಷಿ ಗುತ್ತಿಗೆ ಕಾಯ್ದೆಯಿಂದಾಗಿ ಸಾವಿರಾರು ರೈತರ ಜಮೀನು ಗುತ್ತಿಗೆ ಪಡೆದ ಕಂಪೆನಿಯವರು ಆಧುನಿಕ ಕೃಷಿಗೆ ಒತ್ತು ನೀಡುವುದರಿಂದ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಆತ ವಿದೇಶಗಳಲ್ಲಿ ಬೇಡಿಕೆ ಇರುವ ಬೆಳೆ ಬೆಳೆಯುವುದರಿಂದ ದೇಶೀಯವಾಗಿ ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ಕೃಷಿ ಉತ್ಪಾದನಾ ಗುತ್ತಿಗೆ ಕಾಯ್ದೆಯಿಂದಾಗಿ ರೈತರ ಶೋಷಣೆ ಹೆಚ್ಚಾಗಲಿದ್ದು, ಇದರ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯ ಕೇಳಲೂ ರೈತರಿಗೆ ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.

ಹಿಂದಿನ ಎಪಿಎಂಸಿ ಕಾಯ್ದೆ ಮೂಲಕ ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಇತ್ತು. ಇಲ್ಲಿ ಸರಕಾರ ನಿಗದಿ ಮಾಡಿದ ಬೆಲೆ ರೈತನಿಗೆ ಸಿಗುತ್ತಿತ್ತು. ಬೆಳೆಯನ್ನು ದಾಸ್ತಾನು ಮಾಡಿ ಬೆಲೆ ಬಂದ ಬಳಿಕವೂ ಮಾರಾಟ ಮಾಡಲು ಸಾಧ್ಯವಿತ್ತು. ಇಂತಹ ವ್ಯವಸ್ಥೆಯ ಮಧ್ಯೆಯೂ ಎಪಿಎಂಸಿ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆ ಸೃಷ್ಟಿಯಾಗಿದ್ದು, ಇದನ್ನು ಸರಿಪಡಿಸಿ ಎಂದು ರೈತರು ಕೇಳಿಕೊಂಡರೇ ಸರಕಾರ ಎಪಿಎಂಸಿ ಮಾರುಕಟ್ಟೆಯನ್ನೇ ಖಾಸಗೀಕರಣ ಮಾಡಲು ಮುಂದಾಗಿದೆ. ಎಪಿಎಂಸಿ ಖಾಸಗೀಕರಣದಿಂದ ರೈತರ ಸುಲಿಗೆ, ಶೋಷಣೆ ಮತ್ತಷ್ಟು ಹೆಚ್ಚಾಗಲಿದೆ. ಹಿಂದಿನ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಲು ಕಾಯ್ದೆಗೆ ತಿದ್ದುಪಡಿ ತರಲಿ, ಆದರೆ ಎಪಿಎಂಸಿಯನ್ನೇ ಖಾಸಗೀಕರಣ ಮಾಡುವುದು ಸರಿಯಾದ ಕ್ರಮ ಅಲ್ಲ ಎಂದ ಅವರು, ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದರೆ ಈ ವಿಚಾರವಾಗಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ.

ಕೃಷಿ ತಿದ್ದುಪಡಿ ಮಸೂದೆಗಳ ಜಾರಿ ವಿರೋಧಿಸಿ ಕಳೆದ 11 ತಿಂಗಳುಗಳಿಂದ ದಿಲ್ಲಿಯ ಗಡಿಗಳಲ್ಲಿ ರೈತರು ಚಳವಳಿ ಆರಂಭಿಸಿದ್ದಾರೆ. ಈ ಸಂಬಂಧ ತಾನು ರೈತರ ಪರ ವಕಾಲತ್ತು ವಹಿಸಿರುವುದರಿಂದ ಜನ ವಿರೋಧಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ದಿಲ್ಲಿ ಚಳವಳಿಯಲ್ಲಿ 500ಕ್ಕೂ ಹೆಚ್ಚು ರೈತರು ಅಸುನೀಗಿದ್ದರೂ ಕೇಂದ್ರ ಸರಕಾರ ರೈತರ ಚಳವಳಿಗೆ ಸ್ಪಂದಿಸದಿರುವುದು ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ. ಸರಕಾರ ರೈತರೊಂದಿಗೆ 10 ಬಾರಿ ಮಾತುಕತೆ ನಡೆಸಿದ್ದು, ಸರಕಾರ ರೈತರ ಬೇಡಿಕೆಗಳನ್ನು ಕಿವಿಯಿಂದ ಕೇಳಿಸಿಕೊಳ್ಳದೇ ಹೃದಯದಿಂದ ಕೇಳಿಸಿಕೊಂಡಿದ್ದರೇ ರೈತರ ಸಮಸ್ಯೆಗಳು ಕೇಂದ್ರ ಸರಕಾರಕ್ಕೆ ಅರಿವಿಗೆ ಬರುತ್ತಿತ್ತು ಎಂದ ಅವರು, ಕೃಷಿ ತಿದ್ದುಪಡಿ ಮಸೂದೆಗಳು ಸಂಪೂರ್ಣವಾಗಿ ಜನವಿರೋಧಿಯಾಗಿದ್ದು, ಈ ಕಾಯ್ದೆಗಳನ್ನು ಸರಕಾರ ಮರುಪರಿಶೀಲನೆ ಮಾಡಬೇಕು. ಸರಕಾರ ಇದಕ್ಕೆ ಮುಂದಾಗದಿದ್ದಲ್ಲಿ ಎಲ್ಲ ಪಕ್ಷ, ಸಂಘಟನೆಗಳು ತಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಐಕ್ಯ ಹೋರಾಟದ ಮೂಲಕ ಸರಕಾರವನ್ನು ಎಚ್ಚರಿಸಬೇಕು. ಜನಪರ ಚಳವಳಿಗಳೇ ಜನರ ಎಲ್ಲ ಸಮಸ್ಯೆಗಳಿಗೂ ಮದ್ದು ಎಂದು ಕರೆ ನೀಡಿದರು.

ಜನಸಂಸ್ಕೃತಿ ವೇದಿಕೆ ಮುಖಂಡ ರವೀಶ್ ಕ್ಯಾತನಬೀಡು ಪ್ರಸ್ತಾವಿಕವಾಗಿ ಮಾತನಾಡಿದರು. ರೈತಸಂಘದ ಮುಖಂಡ ಗುರುಶಾಂತಪ್ಪ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರೈತಗೀತೆ, ಕ್ರಾಂತಿಗೀತೆಗಳನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ವಿಪ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ರೈತ ಸಂಘದ ಬಸವರಾಜ್, ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರಾದ ಡಿ.ಎಲ್.ವಿಜಯ್‍ಕುಮಾರ್, ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಡಾ.ಸುಂದರ್‍ಗೌಡ, ಎಂ.ಎಲ್.ಮೂರ್ತಿ, ಎ.ಎನ್.ಮಹೇಶ್, ಕೆ.ಮುಹಮ್ಮದ್, ಹಿರೇಮಗಳೂರು ಪುಟ್ಟಸ್ವಾಮಿ, ಚಂದ್ರಪ್ಪ, ಮಂಜಪ್ಪ, ಮಂಜೇಗೌಡ, ರಾಧಾಸುಂದರೇಶ್, ಬಿ.ಅಮ್ಜದ್ ಮತ್ತಿತರರು ಭಾಗವಹಿಸಿದ್ದರು.

ಸುಪ್ರೀಂಕೋರ್ಟ್ ಸರಕಾರದ ಕಿವಿಹಿಂಡುವ ಕೆಲಸ ಮಾಡಬೇಕಿತ್ತು: ಸುಧೀರ್ಘ ಕಾಲದ ದಿಲ್ಲಿ ರೈತರ ಚಳವಳಿ ಸಂಬಂಧ ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪೊಂದನ್ನು ನೀಡಿದ್ದು, ಸುಧೀರ್ಘ ಕಾಲದವರೆಗೆ ರಸ್ತೆಗಳನ್ನು ಬಂದ್ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದಿದೆ. ಆದರೆ ಚಳವಳಿಗಳನ್ನು ಹತ್ತಿಕ್ಕಲು ಕೇಂದ್ರ ಸರಕಾರವೇ ದಿಲ್ಲಿಯಲ್ಲಿ ರಸ್ತೆಗಳನ್ನು ಬಂದ್ ಮಾಡಿ ರೈತರು ಬಾರದಂತೆ ಮಾಡಿದೆ. ರಸ್ತೆ ಬಂದ್ ಮಾಡಿದ ಕೇಂದ್ರ ಸರಕಾರಕ್ಕೂ ಸುಪ್ರೀಂಕೋರ್ಟ್ ಕಿವಿಹಿಂಡುವ ಕೆಲಸ ಮಾಡಬೇಕಿತ್ತು. ರೈತರ ಸಮಸ್ಯೆ ಬಗೆಹರಿಸಲು ಸುಪ್ರೀಂಕೋರ್ಟ್ ಕಮಿಟಿಯೊಂದನ್ನು ನೇಮಿಸಿದ್ದು, ಈ ಕಮಿಟಿ ರೈತರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ರಾಜೀ ಸಂದಾನ ಮಾಡುತ್ತಿರುವುದು ವಿಪರ್ಯಾಸ ಎಂದು ಜಸ್ಟೀಸ್ ನಾಗಮೋಹನ್‍ದಾಸ್ ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಸಮಸ್ಯೆಗಳಿಗೆ ಮೀಸಲಾತಿ ಕಾರಣವಲ್ಲ: ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ರೈತರ ಸಮಸ್ಯೆಗಳಿಗೆ ಮೀಸಲಾತಿಯೇ ಕಾರಣ ಎನ್ನಲಾಗುತ್ತಿದೆ. ಮೀಸಲಾತಿಯೇ ಬೇಡ ಎನ್ನುತ್ತಿದ್ದವರೂ ಈಗ ಮೀಸಲಾತಿ ಕೇಳುತ್ತಿದ್ದಾರೆ. ಮೀಸಲಾತಿ ಕೇಳುತ್ತಿರುವ ಎಲ್ಲ ಜಾತಿ, ಜನಾಂಗದವರಿಗೂ ಮೀಸಲಾತಿ ನೀಡಿದರೂ ರೈತರ ಸಮಸ್ಯೆ ಬಗೆಹರಿಯಲ್ಲ. ರೈತರ ಸಮಸ್ಯೆಗಳಿಗೆ ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಕಾರಣವೇ ಹೊರತು, ಮೀಸಲಾತಿ ಕಾರಣ ಅಲ್ಲವೇ ಅಲ್ಲ. ದೇಶದಲ್ಲಿ ಶೇ.99ರಷ್ಟು ಉದ್ಯೋಗಗಳು ಖಾಸಗಿ ಕ್ಷೇತ್ರ ನೀಡಿದ್ದರೇ, ಮೀಸಲಾತಿಯಡಿ ಶೇ.1ರಷ್ಟು ಮಾತ್ರ ಸರಕಾರಿ ಕೆಲಸ ಸಿಗುತ್ತಿದೆ. ಮೀಸಲಾತಿಯಡಿ ನೇಮಕವಾಗಬೇಕಿದ್ದ ಬಾಕಿ ಉದ್ಯೋಗಗಳಿಗೆ ಸರಕಾರ ನೇಮಕಾತಿಯನ್ನೇ ಮಾಡುತ್ತಿಲ್ಲ. ಮೀಸಲಾತಿಯಡಿ ನೇಮಕ ಮಾಡಿಕೊಳ್ಳುತ್ತಿದ್ದ ಸರಕಾರಿ ಸಂಸ್ಥೆಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡಲಾಗುತ್ತಿದೆ.

- ಎಚ್.ಎನ್.ನಾಗಮೋಹನ್‍ದಾಸ್, ನಿವೃತ್ತ ನ್ಯಾಯಮೂರ್ತಿ

ಸಂವಿಧಾನ ಜಾರಿಯಾದ ಬಳಿಕವೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದ್ದು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಸ್ವೇಚ್ಛಾಚಾರದ ವರ್ತನೆ ನಿಯಂತ್ರಣಕ್ಕಾಗಿ ಸಂವಿಧಾನದ ಮೂಲಕ ಅವುಗಳ ಕಾರ್ಯವ್ಯಾಪ್ತಿಯನ್ನು ಹೇಳಲಾಗಿದೆ. ದೇಶದ ಇಂದಿನ ಎಲ್ಲ ರೀತಿಯ ಸಾಧನೆಗಳಿಗೆ ಸಂವಿಧಾನವೇ ಕಾರಣ. ದೇಶಕ್ಕೆ ನಿಜವಾಗಿಯೂ ಸ್ವಾತಂತ್ರ್ಯ ಎಂಬುದು ಬಂದಿದ್ದೇ ಸಂವಿಧಾನ ಜಾರಿಯಾದ ಬಳಿಕ. ಸಂವಿಧಾನ ಜಾರಿಯಾಗಿ 72 ವರ್ಷಗಳ ಅವಧಿಯಲ್ಲಿ ಏನೂ ಸಾಧನೆಯಾಗಿಲ್ಲ ಎಂಬುದನ್ನು ಒಪ್ಪಲು ಸಾಧ್ಯವೇ ಇಲ್ಲ. ಆದರೆ ಇಷ್ಟು ವರ್ಷಗಳಲ್ಲಿ ಎಷ್ಟು ಸಾಧನೆ ಮಾಡಬೇಕಿತ್ತೋ ಅದನ್ನು ಮಾಡಿಲ್ಲ. ಇದಕ್ಕೆ ಕಾರಣ ನಮ್ಮೊಳಗಿನ ದೋಷ ಕಾರಣವೇ ಹೊರತು ಸಂವಿಧಾನ ಕಾರಣವಲ್ಲ. ಎಲ್ಲ ಧರ್ಮಗಳ ಗ್ರಂಥಗಳಿಗೂ ಮಿಗಿಲಾದ ಗ್ರಂಥ ಸಂವಿಧಾನ ಎಂದು ಹೇಳುವ ನಾವು ನಮ್ಮ ನಮ್ಮ ಧರ್ಮ ಗ್ರಂಥಗಳನ್ನು ಓದಿಕೊಂಡಿದ್ದೇವೆಯೋ ಹೊರತು ಸಂವಿಧಾನವನ್ನು ಓದಿಕೊಂಡಿಲ್ಲ. ಸಂವಿಧಾನ ಎಂಬ ಗ್ರಂಥ ಓದಿಕೊಂಡಿದ್ದರೇ ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಸದ್ಯ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನದ ಪ್ರತಿಗಳನ್ನೂ ಸುಡುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರು ಯಾವ ಸಂವಿಧಾನ ಜಾರಿ ಮಾಡುತ್ತೇವೆ ಎಂಬುದನ್ನೂ ಹೇಳಬೇಕು. ಅಂಬೇಡ್ಕರ್ ಸಂವಿಧಾನವನ್ನು ಕಳೆದುಕೊಂಡರೇ ಪ್ರಜಾಪ್ರಭುತ್ವ ನಾಶವಾಗಿ, ಅರಾಜಕತೆ ತಾಂಡವವಾಡುತ್ತದೆ. ಕೋಮುವಾದ ವಿಜೃಂಭಿಸುತ್ತದೆ. ಶೋಷಿತ ಸಮುದಾಯಗಳು ಗುಲಾಮರಂತೆ ಬದುಕಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News