ಸಿಂದಗಿ, ಹಾನಗಲ್ ಕ್ಷೇತ್ರದ ಉಪ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ

Update: 2021-10-27 15:38 GMT

ಬೆಂಗಳೂರು, ಅ.27: ರಾಜ್ಯದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು, ನಾಳೆ ಮನೆ ಮನೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅ.30ರಂದು ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನ.2ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕೋವಿಡ್‍ನಿಂದ ಮೃತಪಟ್ಟ ಮಾಜಿ ಸಚಿವ ಸಿ.ಎಂ.ಉದಾಸಿ ಹಾಗೂ ಎಂ.ಸಿ.ಮನಗೂಳಿ ನಿಧನದಿಂದಾಗಿ ಕ್ರಮವಾಗಿ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನರ್, ಕಾಂಗ್ರೆಸ್ ಪಕ್ಷದಿಂದ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್ ಪಕ್ಷದಿಂದ ನಿಯಾಝ್ ಶೇಕ್ ಕಣದಲ್ಲಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಬೂಸನೂರು, ಕಾಂಗ್ರೆಸ್ ಪಕ್ಷದಿಂದ ಅಶೋಕ್ ಮನಗೂಳಿ(ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಪುತ್ರ) ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ನಾಝಿಯಾ ಶಕೀಲ್ ಅಹ್ಮದ್ ಅಂಗಡಿ ಅಭ್ಯರ್ಥಿಯಾಗಿದ್ದಾರೆ.

ಆಡಳಿತರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಎರಡು ಕ್ಷೇತ್ರಗಳನ್ನೂ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಶತಾಯಗತಾಯ ಗೆಲ್ಲಲೇಬೇಕು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮೂರು ಪಕ್ಷಗಳ ಮುಖಂಡರು ಎರಡು ಕ್ಷೇತ್ರಗಳಲ್ಲಿ ನಿರಂತರ ಪ್ರಚಾರಗಳನ್ನು ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯದ ಸಚಿವರು, ಶಾಸಕರು, ಸಂಸದರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಕಾಂಗ್ರೆಸ್ ಪರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಇನ್ನಿತರ ಮುಖಂಡರು ಪ್ರಚಾರ ನಡೆಸಿದರು.

ಜೆಡಿಎಸ್ ಪಕ್ಷದ ಪರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಪ್ರಚಾರ ನಡೆಸಿದರು.

ಅನ್ನಭಾಗ್ಯ ಯೋಜನೆ, ಬಡವರಿಗೆ ಮನೆ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರಿಗೆ ಪರಿಹಾರ, ಅಲ್ಪಸಂಖ್ಯಾತರ ಕಲ್ಯಾಣ, ಜೆಡಿಎಸ್ ಪಕ್ಷದ ಎಂ.ಸಿ.ಮನಗೂಳಿ ಹಾಗೂ ಬಿಜೆಪಿ ಪಕ್ಷದ ಸಿ.ಎಂ.ಉದಾಸಿಯವರ ಅಗಲಿಕೆ, ಎಂ.ಸಿ.ಮನಗೂಳಿ ಪುತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಸೂಟ್‍ಕೇಸ್ ವಿಚಾರ, ಜಾತಿವಾದಿಗಳು ಎಂಬ ವಿಚಾರಗಳು ಈ ಉಪ ಚುನಾವಣೆಯ ಪ್ರಚಾರದಲ್ಲಿ ಚರ್ಚಾ ವಸ್ತುಗಳಾಗಿದ್ದವು.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 204289 ಮತದಾರರಿದ್ದು, ಲಿಂಗಾಯತ ಸಮುದಾಯದ ಮತದಾರರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರ ನಂತರ ಕ್ರಮವಾಗಿ ಅಲ್ಪಸಂಖ್ಯಾತ ಸಮುದಾಯ, ಗಂಗಾಮತ, ಎಸ್ಸಿ-ಎಸ್ಟಿ, ಕುರುಬ, ಮರಾಠಾ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮತದಾರರಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 234309 ಮತದಾರರಿದ್ದು, ಎಸ್ಸಿ-ಎಸ್ಟಿಯವರು ಪ್ರಬಲರಾಗಿದ್ದು, ನಂತರದ ಸ್ಥಾನದಲ್ಲಿ ಅಲ್ಪಸಂಖ್ಯಾತರು, ಕುರುಬ ಸಮಾಜದವರು, ಗಾಣಿಗರು, ಪಂಚಮಸಾಲಿ ಲಿಂಗಾಯತರು, ಕೋಳಿ, ಬಣಜಿಗ ಸಮುದಾಯದ ಮತದಾರರಿದ್ದಾರೆ.

ನಿಷೇಧಾಜ್ಞೆ: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ನ.2ರಂದು ಮತ ಎಣಿಕೆ ಕಾರ್ಯ ನಡೆಯಲಿರುವುದರಿಂದ ಅಂದು ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಾವೇರಿ ಹಾಗೂ ವಿಜಯಪುರ ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ನ.3ರ ಬೆಳಗ್ಗೆ 6 ಗಂಟೆವರೆಗೆ ನಿμÉೀಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿ ಓಡಾಡುವುದು, ಜೀವಕ್ಕೆ ಹಾನಿಯನ್ನುಂಟು ಮಾಡುವ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು, ಸ್ಪೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಜೊತೆಗಿಟ್ಟುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದು ಹಾಗೂ ಯಾವುದೇ ಸಭೆ-ಸಮಾರಂಭ ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ, ಶವ ಸಂಸ್ಕಾರ, ಮದುವೆ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಗೆ ಈ ಆದೇಶದಲ್ಲಿ ವಿನಾಯಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News