ದೇಶದಲ್ಲಿ ಹಿಟ್ಲರ್ ಆಡಳಿತ: ಮಲ್ಲಿಕಾರ್ಜುನ ಖರ್ಗೆ ಟೀಕೆ

Update: 2021-10-27 15:13 GMT

ಹುಬ್ಬಳ್ಳಿ, ಅ.27: ‘ದೇಶದಲ್ಲಿ ಹಿಟ್ಲರ್ ರೀತಿಯ ಆಡಳಿತ ನಡೆಯುತ್ತಿದೆ. ಬಿಜೆಪಿ ಸರಕಾರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂದು ಹೇಳುತ್ತಿದೆ. ಆದರೆ, ಈ ಬಗ್ಗೆ ಯಾವುದೆ ಪ್ರಸ್ತಾಪ ಮಾಡದೆ ಸಬ್ ಕಾ ಸಾಥ್ ಎನ್ನುವುದು ಸತ್ಯನಾಶವಾಗಿದೆ' ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. ಏಳು ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಇರುವ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಸಾಕಷ್ಟು ಖಾಲಿ ಹುದ್ದೆಗಳಿದ್ದರೂ ಉದ್ಯೋಗ ನೀಡುತ್ತಿಲ್ಲ' ಎಂದು ದೂರಿದರು.

‘ದೇಶದ ರೈತರ ಮೇಲೆ ದೌರ್ಜನ್ಯಗಳು ನಡೆದಿವೆ. ರೈತರು ಗೊಬ್ಬರಕ್ಕಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಅವಶ್ಯಕ ವಸ್ತುಗಳ ದಾಸ್ತಾನು ಮಾಡಬಾರದೆಂಬ ಕಾಯ್ದೆ ಇದ್ದು, ಶ್ರೀಮಂತರಿಂದ ದಾಸ್ತಾನು ಮಾಡಲಾಗುತ್ತಿದೆ. ರೈತರ ಬಗ್ಗೆ ಕೇಂದ್ರ ಸರಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ತೈಲ ಬೆಲೆ ಗಗನಕ್ಕೇರಿದೆ. ತೈಲ ಬೆಲೆ ಏರಿದಾಗ ಬಿಜೆಪಿಯವರೇ ಈ ಹಿಂದೆ ಬೀದಿಗೆ ಬರುತ್ತಿದ್ದರು. ಈಗ ಅವರೆಲ್ಲಿ ಹೋಗಿದ್ದಾರೆ. ಸಮಯ ಬಂದಾಗ ಇದಕ್ಕೆ ಜನತೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದು ಖರ್ಗೆ ಎಚ್ಚರಿಕೆ ನೀಡಿದರು.

ರಾಜ್ಯಕ್ಕೆ 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಜಿಎಸ್ಟಿ ಹಣ ಬರಬೇಕು. ಇದನ್ನು ಯಾರೂ ಕೇಳುವವರು ಇಲ್ಲ. ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಅವರು, ಚುನಾವಣೆಗಳು ಬಂದರೆ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಮೋದಿ, ಅಮಿತ್ ಶಾ ಅವರಿಗೆ ಚೆನ್ನಾಗಿ ಗೊತ್ತಿದ್ದು, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಗೆಲ್ಲುವ ವಿಶ್ವಾಸ: ‘ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಬಹುಮತ ಸಿಗುವ ವಿಶ್ವಾಸವಿದೆ. ಸಿಂದಗಿಯಲ್ಲಿ ಎರಡು ದಿನ ಪ್ರಚಾರ ನಡೆಸಿ, ಹಾನಗಲ್ ತೆರಳಲು ಹುಬ್ಬಳ್ಳಿಗೆ ಬಂದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವಿನ ಸಾಧ್ಯತೆ ಇದೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲ್ಲುವಿಗೆ ನೆರವಾಗಲಿವೆ' ಎಂದು ಅವರು ನುಡಿದರು.

ಜನಪ್ರತಿನಿಧಿಗಳ ವ್ಯೆಯಕ್ತಿಕ ನಿಂದನೆಗಳ ಕುರಿತು ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ನಂಬಿದ್ದು, ಕೇವಲ ಅಭಿವೃದ್ಧಿ. ನಮ್ಮ ವಿಚಾರಧಾರೆಗಳ ಮೇಲೆ ಹಾಗೂ ನಮ್ಮ ಕೆಲಸ-ಕಾರ್ಯಗಳ ಮೇಲೆ ಚುನಾವಣೆ ನಡೆಯಬೇಕು. ಆದರೆ, ವೈಯಕ್ತಿಕ ನಿಂದನೆಗಳು ಸರಿಯಲ್ಲ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಮತ ಕೇಳಬೇಕು' ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News