ಜೆಡಿಎಸ್ ಪಕ್ಷದ ಸೂಟ್‍ಕೇಸ್ ವಿಚಾರ ಮೊದಲು ಬಹಿರಂಗಪಡಿಸಿದ್ದು ಪ್ರಜ್ವಲ್ ರೇವಣ್ಣ: ಶಾಸಕ ಝಮೀರ್ ಅಹ್ಮದ್

Update: 2021-10-27 15:33 GMT

ಹಾನಗಲ್, ಅ.27: ಚುನಾವಣೆ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದಲ್ಲಿ ಸೂಟ್‍ಕೇಸ್ ವಿಚಾರ ಮುಂದೆ ಬರುತ್ತದೆ ಎಂದು ಮೊದಲು ನಾನಲ್ಲ ಹೇಳಿದ್ದು, ನಿಮ್ಮ ಸ್ವಂತ ಅಣ್ಣ ಎಚ್.ಡಿ.ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಬಹಿರಂಗ ಸಭೆಯೊಂದರಲ್ಲೆ ಹೇಳಿದ್ದಾರೆ. ಮರೆತು ಹೋಗಿದೆಯೇ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಶಾಸಕ ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.

ಹಾನಗಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೂಟ್‍ಕೇಸ್ ವಿಚಾರ ಹೇಳುತ್ತಿದ್ದಂತೆ ಕುಮಾರಸ್ವಾಮಿ ತಮ್ಮ ಶಿಷ್ಯನೊಬ್ಬನ ಮೂಲಕ ನನಗೆ ಉತ್ತರ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಈ ವಿಚಾರವನ್ನು ಮೊದಲು ಬಹಿರಂಗಪಡಿಸಿದ್ದು ಪ್ರಜ್ವಲ್ ರೇವಣ್ಣ ಅನ್ನೋದನ್ನು ಅವರು ಮರೆತಿದ್ದಾರೆ ಎಂದರು.

ಸಿಂದಗಿಯಲ್ಲಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಎಲ್ಲ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಹಾನಗಲ್ ಕಡೆ ಮಾತ್ರ ಯಾವ ಪ್ರಮುಖ ನಾಯಕರು ಮುಖ ಮಾಡುತ್ತಿಲ್ಲ. ಆದುದರಿಂದ ನಾನು ಹೇಳಿದ್ದು ಅವರಿಗೆ ಅಲ್ಲಿ ಸೂಟ್‍ಕೇಸ್ ಸಿಕ್ಕಿರಬಹುದು. ಇಲ್ಲಿ ಇನ್ನೂ ಸಿಕ್ಕಿಲ್ಲ ಅದಕ್ಕೆ ಬಂದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದರು.

ಹಾನಗಲ್ ಅಭ್ಯರ್ಥಿ ನಿಯಾಝ್ ಶೇಕ್ ನಮ್ಮ ಪಕ್ಷದಲ್ಲಿ ಇದ್ದ ಯುವಕ. ಆತನನ್ನು ಕರೆದುಕೊಂಡು ಹೋಗಿ ಜೆಡಿಎಸ್‍ನಿಂದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಬಗ್ಗೆ ಯಾವುದೆ ಕಾಳಜಿಯಿಲ್ಲ. ಚುನಾವಣೆ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News