ಮೈಸೂರು; ರೈಲ್ವೆ ಇಲಾಖೆಯ ನಕಲಿ ನೇಮಕಾತಿಯಲ್ಲಿ ವಂಚನೆ: ಇಬ್ಬರ ಬಂಧನ

Update: 2021-10-27 15:44 GMT

ಮೈಸೂರು,ಅ.27: ರೈಲ್ವೆ ಇಲಾಖೆಯಲ್ಲಿ ನಕಲಿ ನೇಮಕಾತಿಯನ್ನು ಒಳಗೊಂಡ ದೊಡ್ಡ ದಂಧೆ ನಡೆಸುತ್ತಿದ್ದ ಪ್ರಕರವಣವನ್ನು ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ದಳವು ಭೇದಿಸಿದ್ದು, ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಸುಮಾರು 400 ಅಭ್ಯರ್ಥಿಗಳಿಗೆ ಕೆಲಸದ ಆಮಿಷ ತೋರಿಸಿ ಕೋಟ್ಯಾಂತ ರೂಪಾಯಿ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿದೆ.

ಮೈಸೂರಿನ ಚಂದ್ರಗೌಡ ಎಸ್.ಪಾಟೀಲ್ , ಗದಗ ಮೂಲದ ಶಿವಸ್ವಾಮಿ ಬಂಧಿತ ಆರೋಪಿಗಳಾಗಿದ್ದು,  ಶಿವಸ್ವಾಮಿ ಎಂಬಾತ ನಿವೃತ್ತ ರೈಲ್ವೆ ನೌಕರ. ಬಂಧಿತರು 400 ಮಂದಿ ಉದ್ಯೋಗಾಕಾಂಕ್ಷಿಗಳಿಂದ ಸುಮಾರು ಕೋಟ್ಯಾಂತ ರೂಪಾಯಿ ವಂಚಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಹಲವರು ತಮ್ಮ ಜಮೀನು ಮಾರಿ ಮತ್ತು ಹೆಚ್ಚಿನ ಬಡ್ಡಿಗೆ ಕೈಸಾಲ ಪಡೆದು ಹಣ ನೀಡಿದ್ದರು. ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್‍ಗಳು, 4,15,000 ರೂ. ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್‍ಟಾಪ್, ಒಂದು ಕಂಪ್ಯೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರಿನ ರೈಲ್ವೆ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಾಗೂ ಛಾಯಾಚಿತ್ರ ತೆಗೆಯುತ್ತಿರುವ ಕೆಲವು ವ್ಯಕ್ತಿಗಳ ಚಲನವಲನದ ಬಗ್ಗೆ ಮೈಸೂರಿನ ಮುಖ್ಯ ವೈದ್ಯಕೀಯ ಅಧೀಕ್ಷಕರು ದೂರು ದಾಖಲಿಸಿದ್ದರು. ಪ್ರಕರಣ ಬೆನ್ನಹತ್ತಿದ ರೈಲ್ವೆ ಸಂರಕ್ಷಣಾ ಪಡೆ, ವಂಚಕರ ಚಟುವಟಿಕೆಗಳ ಮೇಲೆ ನಿಕಟವಾದ ಕಣ್ಣಿಡುವ ಮೂಲಕ ಇವರೆಲ್ಲಾ ಯುವ ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕ ರೈಲ್ವೆ ಉದ್ಯೋಗಗಳ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೆ ನೇಮಕಾತಿ ದಂಧೆಯನ್ನು ನಡೆಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿತು.

ಮೈಸೂರಿನ ಹೈವೇ ಸರ್ಕಲ್ ಬಳಿಯ ಶಿವ ಶಕ್ತಿ ಕಲ್ಯಾಣ ಮಂಟಪದ ಎದುರಿನ ಮನೆಯೊಂದರಲ್ಲಿ ನಕಲಿ ನೇಮಕಾತಿ ದಂಧೆ ನಡೆಸುತ್ತಿದ್ದ ಈ ತಂಡ, ಮುಖ್ಯವಾಗಿ ಬಡ ಮತ್ತು ಮುಗ್ಧ ಹಳ್ಳಿ ಹುಡುಗರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿತ್ತು. ಅಭ್ಯರ್ಥಿಗಳ ಮೂಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ನಕಲಿ ಕರೆ ಪತ್ರಗಳು, ನಕಲಿ ವೈದ್ಯಕೀಯ ಜ್ಞಾಪನ ಪತ್ರಗಳು ಮತ್ತು ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರು. ಈ ತಂಡ ಸುಳ್ಳು ಬರವಸೆ ನೀಡಿ ಉದ್ಯೋಗ ಆಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿತ್ತು.

ಸದ್ಯ ತಂಡವನ್ನು ಸಾಕ್ಷಿ ಸಮೇತ ಸೆರೆ ಹಿಡಿದ ರೈಲ್ವೆ ಸಂರಕ್ಷಣಾ ಪಡೆಯು ಅಗತ್ಯ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತರಾದ ಥಾಮಸ್ ಜಾನ್, ಸಹಾಯಕ ಭದ್ರತಾ ಆಯುಕ್ತರಾದ ಎ.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್‍ಗಳಾದ ಸತೀಶನ್, ಎಂ.ನಿಶಾದ್, ವೆಂಕಟೇಶ್, ರಾಧಾಕೃಷ್ಣ ಮತ್ತು ಇತರೆ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ಸದರಿ ಪ್ರಕರಣವನ್ನು ಮುಂದುವರಿದ ತನಿಖೆಗಾಗಿ ಎನ್.ಆರ್. ಠಾಣೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News