ಚಾಮರಾಜನಗರ: ಸಾಮಾಜಿಕ ಬಹಿಷ್ಕಾರ ಆರೋಪ; ವ್ಯಕ್ತಿ ಆತ್ಮಹತ್ಯೆ

Update: 2021-10-27 16:28 GMT

ಚಾಮರಾಜನಗರ : ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ಮುದ್ದನಾಯಕ(55) ಮೃತ ದುರ್ದೈವಿ. ಇಂದು ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸ್ವಜಾತಿಯ ಮುಖಂಡರೇ ಸಾಮಾಜಿಕ ಬಹಿಷ್ಕಾರ ಹಾಕುತ್ತೇವೆಂದು ಬೆದರಿಸಿದ್ದರು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. 

ಮೃತ ಮುದ್ದನಾಯಕರ ಮಗಳಾದ ಶಿಲ್ಪಾಳನ್ನು ಅದೇ ಗ್ರಾಮದ ಮಹೇಶ್​​​ ಎಂಬಾತನ ಜೊತೆಗೆ ಮದುವೆ ಮಾಡಿ ಕೊಡಲಾಗಿತ್ತು. ಕೆಲ ವರ್ಷಗಳ ನಂತರ ಕೌಟುಂಬಿಕ ಕಲಹ ಏರ್ಪಟ್ಟು ಇಬ್ಬರ ನ್ಯಾಯ ತೀರ್ಮಾನ ಪಂಚಾಯತ್‌ ಮುಂದೆ ಬಂದಿತ್ತು.ಗ್ರಾಮದ ಹಿರಿಯ ಯಜಮಾನ ಶೇಖರ್ ಮಹೇಶ್​​​ ಸಂಬಂಧಿಯಾದ ಹಿನ್ನೆಲೆಯಲ್ಲಿ ಅವರ ಪರವಾಗಿ ನ್ಯಾಯ ಹೇಳಿ, ನನ್ನ ತೀರ್ಮಾನವೇ ಅಂತಿಮ. ಇದನ್ನು ಮೀರಿ ಯಾರು ಠಾಣೆ ಮೆಟ್ಟಿಲು ಏರಬಾರದು. ಒಂದು ವೇಳೆ ಮಾತು ಮೀರಿ ಹೋದರೆ ಅಂತವರಿಗೆ ಒಂದು ಲಕ್ಷ ರೂ. ದಂಡ ಹಾಗೂ ಸಾಮಾಜಿಕ ಬಹಿಷ್ಕಾರ ಹಾಕಿ ಊರಿನಿಂದ ಹೊರಗೆ ಕಳುಹಿಸಲಾಗುವುದು ಎಂದು ಬೆದರಿಕೆ ಹಾಕಿರುವ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ .

ಸೋಮವಾರ ಶಿಲ್ಪ ಮತ್ತೆ ಗಂಡನ ಮನೆಗೆ ಹೋದ ವೇಳೆ ಕುಟುಂಬದವರ ಜೊತೆ ಗಲಾಟೆ ನಡೆದಿದೆ. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಗ್ರಾಮದ ಹಿರಿಯ ಯಜಮಾನ ಶೇಖರ್, ಶಿಲ್ಪಳಿಗೆ ಮನ ಬಂದಂತೆ ಬೈದು ಮನೆಯಿಂದ ಹೊರ ದೂಡಿದ್ದಾನೆ. 

ಮರುದಿನ ಮಂಗಳವಾರ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡು ಯಾರು ಗಲಾಟೆ ಮಾಡಬಾರದು ಎಂದು ಎಚ್ಚರಿಸಿದ್ದರು.

ಅದೇ ದಿನ ಸಂಜೆ ಶೇಖರ್ ಉದ್ರಿಕ್ತನಾಗಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಮುದ್ದನಾಯಕ ಮನೆ ಮುಂದೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮುದ್ದನಾಯಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ‌. 

ಘಟನೆ ಸಂಬಂಧ ಗ್ರಾಮದ ಹಿರಿಯ ಶೇಖರ್​​, ಸಂತೋಷ್, ವಿಜಯಕುಮಾರ್, ಮಹೇಶ್​​, ಚಿತ್ರ, ಸುರೇಶ್​​ ಸೇರಿದಂತೆ 6 ಮಂದಿ ಮೇಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News