ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: ಮೂವರು ವಕೀಲು ಸೇರಿ ಐವರ ಬಂಧನ

Update: 2021-10-27 16:52 GMT

ಬೆಂಗಳೂರು, ಅ.27: ಉದ್ಯಮಿ ಮನೆ ಬಳಿ ನಿಲ್ಲಿಸಿದ್ದ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಕೀಲರು ಸೇರಿದಂತೆ ಐವರನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಶ್ರೀನಿವಾಸ್ ನಾಯ್ಡು ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಾದ ಅಭಿನಂದನ್, ಶಶಾಂಕ್, ನಿರ್ಮಲ್, ರಾಕೇಶ್ ಹಾಗೂ ಗಣೇಶ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂವರು ವಕೀಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಅ.19ರ ರಾತ್ರಿ ಆರ್ ಎಂವಿ ಬಡಾವಣೆಯ ಸಪ್ತಗಿರಿ ಅಪಾರ್ಟ್‍ಮೆಂಟ್ ಕೆಳಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರು ಧಗಧಗನೇ ಹೊತ್ತಿ ಉರಿದಿತ್ತು. ಮುಸುಕು ಹಾಕಿಕೊಂಡು ಬೈಕ್‍ನಲ್ಲಿ ಬಂದಿದ್ದ ಕಿಡಿಗೇಡಿಗಳು ಕಾರಿಗೆ ಪೆಟ್ರೋಲ್ ಎರಚಿ ಬೆಂಕಿಯಿಟ್ಟು ಪರಾರಿಯಾಗಿದ್ದರು.

ಇದೇವೇಳೆ ಬೆಂಕಿಯ ಹೊಗೆ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಆವರಿಸಿಕೊಂಡು, ಕೆಲಕಾಲ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು. ಈ ಸಂಬಂಧ ಸದಾಶಿವನಗರ ಪೊಲೀಸರಿಗೆ ಉದ್ಯಮಿ ಶ್ರೀನಿವಾಸ್ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಇದೀಗ ಐವರನ್ನು ಬಂಧಿಸಿದ್ದಾರೆ. 

ಸದ್ಯಕ್ಕೆ ಬಂಧಿತ ಆರೋಪಿಗಳಿಗೂ ಉದ್ಯಮಿಗೂ ಯಾವುದೇ ಪರಿಚಯವಿಲ್ಲ ಎಂದು ತಿಳಿದುಬಂದಿದೆ. ಯಾವ ಕಾರಣಕ್ಕಾಗಿ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬರಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಪ್ರಮುಖ ಆರೋಪಿ ಸಿಕ್ಕಿಬಿದ್ದರೆ ಘಟನೆಗೆ ಕಾರಣ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News