ಹಾನಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸಮಾನೆ ಗೆಲುವು ನಿಶ್ಚಿತ: ಸಿದ್ದರಾಮಯ್ಯ

Update: 2021-10-27 16:56 GMT

ಹಾನಗಲ್, ಅ.27: 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಅವರು 74,000 ಮತಗಳನ್ನು ಪಡೆದು ಕೇವಲ 6,000 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕೊನೆ ಘಳಿಗೆಯಲ್ಲಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ಕಾರಣಕ್ಕಾಗಿ ಕಳೆದ ಬಾರಿ ಸೋಲುವಂತಾಯ್ತು. ಮೊದಲೇ ಘೋಷಿಸಿದ್ದರೆ ನೂರಕ್ಕೆ ನೂರರಷ್ಟು ಗೆಲ್ಲುತ್ತಿದ್ದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬುಧವಾರ ಹಾನಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಜನರ ಜೊತೆಗಿದ್ದು, ಅವರ ಕಷ್ಟ ಸುಖಗಳನ್ನು ಕೇಳಿ ತಮ್ಮ ಕೈಲಾದ ಸಹಾಯ ಮಾಡಿರುವ ಶ್ರೀನಿವಾಸ್ ಮಾನೆ ಅವರನ್ನು ಕ್ಷೇತ್ರದ ಜನ ಅಪದ್ಭಾಂದವ ಎಂದು ಕರೆಯುತ್ತಾರೆ ಎಂದರು.

ಇವರ ಎದುರಾಳಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಜನರ ಕಷ್ಟಕ್ಕೆ ಸಹಾಯ ಮಾಡುವುದು ಬದಿಗಿರಲಿ, ಸಂಗೂರು ಸಕ್ಕರೆ ಕಾರ್ಖಾನೆಯನ್ನೇ ನುಂಗಿ ನೀರು ಕುಡಿದು ಬಿಟ್ಟರು. ಇದೇ ಕಾರಣಕ್ಕೆ ಸಜ್ಜನರ್ ಅವರ ಒಡಹುಟ್ಟಿದ ತಮ್ಮನೇ ಅಣ್ಣನಿಗೆ ಮತ ಹಾಕಬೇಡಿ, ಆತ ದುರ್ಜನ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಂಗೂರು ಸಕ್ಕರೆ ಕಾರ್ಖಾನೆ ಲೂಟಿ ಹೊಡೆದ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಜ್ಜನರ್ ಲೂಟಿ ಮಾಡಿದ ಅಷ್ಟೂ ಹಣವನ್ನು ಕಟ್ಟಬೇಕಾಗುತ್ತದೆ. ಹಾಗಾಗಿ ಕ್ಷೇತ್ರದ ಜನ ತಮಗೆ ಅಪದ್ಭಾಂದವ ಬೇಕೋ? ದುರ್ಜನ ಬೇಕೋ? ಎಂದು ತೀರ್ಮಾನ ಮಾಡಿ, ನಾಡಿದ್ದು ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.

ನಾವು ಅಧಿಕಾರದಲ್ಲಿ ಇದ್ದಾಗ ಜನರಿಗೆ ನೀಡಿದ್ದ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರೈತರ ಸಾಲಮನ್ನಾ, ಕ್ಷೀರಧಾರೆ, ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮ ಸರಕಾರ. ಈಗಿನ ಬಿಜೆಪಿ ಸರಕಾರದ ಯಾವುದಾದ್ರೂ ಒಂದು ಜನಪರ ಯೋಜನೆ ಹೇಳಲಿ ನೋಡಣ. ಈ ಸರಕಾರ ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ. ಹಾಗಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆಗೆ ಚರ್ಚೆಗೆ ಬರಲು ಹೆದರಿದ್ದು ಎಂದು ಸಿದ್ದರಾಮಯ್ಯ ಟೀಕಿಸಿದರು.

ಈ ಹಿಂದೆ ವಿಧಾನ ಪರಿಷತ್ ನಲ್ಲಿ ನಮ್ಮ ಪಕ್ಷದ ಸದಸ್ಯರೊಬ್ಬರು ರೈತರ ಸಾಲಮನ್ನಾ ವಿಚಾರವಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನೆ ಕೇಳಿದ್ದಾಗ, ಅವರು ಸಾಲ ಮನ್ನಾ ಸಾಧ್ಯವಿಲ್ಲ, ಕಾರಣ ನಮ್ಮ ಸರಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದು ಉತ್ತರಿಸಿದ್ದರು. ಮನಮೋಹನ್ ಸಿಂಗ್ ಅವರ ಸರಕಾರ ಸಾಲ ಮನ್ನಾ ಮಾಡಿದಾಗ ಅವರ ಸರಕಾರದಲ್ಲಿ ನೋಟ್ ಪ್ರಿಂಟ್ ಮಾಡೋ ಮೆಷಿನ್ ಇತ್ತಾ? ಮನಮೋಹನ್ ಸಿಂಗ್ ಅವರಿಗೆ ರೈತರ ಬಗ್ಗೆ ಬದ್ಧತೆ ಇತ್ತು, ಆ ಬದ್ಧತೆ ಬಿಜೆಪಿ ನಾಯಕರಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾವು ಅಧಿಕಾರದಲ್ಲಿ ಇದ್ದಾಗ ಐದು ವರ್ಷಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿದ್ದೆವು. ಈಗಿನ ಸರಕಾರ ಒಂದು ಕನೆ ಕಟ್ಟಿಸಿಕೊಟ್ಟ ಉದಾಹರಣೆ ಇದ್ದರೆ ತೋರಿಸಿ. ನಿನ್ನೆ ಬಸವರಾಜ ಬೊಮ್ಮಾಯಿ ಹಾನಗಲ್ ಗೆ 7400 ಮನೆಗಳನ್ನು ಮಂಜೂರು ಮಾಡಿ ಆದೇಶ ಪತ್ರ ಹಿಡಿದುಕೊಂಡು ಮತ ಕೇಳುತ್ತಿದ್ದಾರೆ. ಇದು ಬರೀ ಚುನಾವಣಾ ಗಿಮಿಕ್ ಅಷ್ಟೇ. ಚುನಾವಣೆ ಮುಗಿದ ನಂತರ ಒಂದು ಮನೆಯನ್ನು ಕಟ್ಟಿಸಿಕೊಡಲ್ಲ, ಕಾರಣ ಈ ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಅವರು ಹೇಳಿದರು.

ಕೊರೋನದಿಂದ ಜನ ಹಾದಿ ಬೀದಿಗಳಲ್ಲಿ ಸಾಯುತ್ತಿದ್ದರೆ, ಸರಕಾರ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿ ದುಡ್ಡು ಹೊಡೆಯುವುದರಲ್ಲಿ ಬ್ಯುಸಿಯಾಗಿತ್ತು. ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿಯವರು ಅಂಜುಮನ್ ಸಂಸ್ಥೆಯವರಿಗೆ 5 ಲಕ್ಷ ರೂಪಾಯಿ ಹಣ ಕೊಟ್ಟು ನಿಮ್ಮ ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿಗೆ ಮತ ಹಾಕಲ್ಲ ಅಂತ ಗೊತ್ತು, ನಮಗೆ ಕೊಡದಿದ್ರು ಪರವಾಗಿಲ್ಲ ಜೆಡಿಎಸ್ ಗೆ ಹಾಕಿ ಎಂದು ಹೇಳಿದ್ದಾರೆ. ಕೊನೆಗೆ ನಮ್ಮ ಶಾಸಕ ಝಮೀರ್ ಅಹ್ಮದ್ ಅಂಜುಮನ್ ಸದಸ್ಯರ ಮನವೊಲಿಸಿ, ಕಾಂಗ್ರೆಸ್ ಗೆ ಮತ ನೀಡಲು ಒಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಜನಪರ ಕಾಳಜಿ ಇರುವ ಶ್ರೀನಿವಾಸ್ ಮಾನೆ ಅವರಿಗೆ ಕ್ಷೇತ್ರದ ಮತದಾರರು ಆಶಿರ್ವಾದ ಮಾಡಿ ವಿಧಾನಸಭೆ ಕಳುಹಿಸಿಕೊಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಪ್ರಚಾರ ಸಭೆಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಝಮೀರ್ ಅಹ್ಮದ್ ಖಾನ್, ಶಾಸಕ ರಹೀಮ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News