ಪ್ರಯೋಗಾಲಯದಲ್ಲಿ ಕಾಫಿ ಬೀಜ: ಫಿನ್ಲ್ಯಾಂಡಿನ ವಿಜ್ಞಾನಿಗಳ ಸಾಧನೆ

Update: 2021-10-27 17:04 GMT
ಸಾಂದರ್ಭಿಕ ಚಿತ್ರ

ಹೆಲ್ಸಿಂಕಿ, ಅ.27: ಪರಿಸರಕ್ಕೆ ಸಂಬಂಧಿಸಿದ ಯಾವುದೇ ಅಪಾಯಗಳಿಗೆ ತಲೆಕೆಡಿಸಿಕೊಳ್ಳದೆ, ಪ್ರಯೋಗಾಲಯದಲ್ಲೇ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಸುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿರುವುದಾಗಿ ಫಿನ್ಲ್ಯಾಂಡ್‌ನ ವಿಜ್ಞಾನಿಗಳು ಹೇಳಿದ್ದಾರೆ.

ಈ ಕಾಫಿಹುಡಿಯನ್ನು ಕಾಫಿಬೀಜಗಳಿಂದ ಉತ್ಪಾದಿಸುವುದಿಲ್ಲ, ಬದಲು ನಿಕಟವಾಗಿ ನಿಯಂತ್ರಿಸಿದ ತಾಪಮಾನ, ಬೆಳಕು ಮತ್ತು ಆಮ್ಲಜನಕದ ಪರಿಸ್ಥಿತಿಯಲ್ಲಿ ಬೆಳೆಸಲಾದ ಕಾಫಿ ಸಸ್ಯಗಳ ಜೀವಕೋಶದ ಸಮೂಹದಿಂದ ಕಾಫಿಪುಡಿ ತಯಾರಿಸಲಾಗುತ್ತದೆ. ಇದನ್ನು ಹುರಿದಾಗ ಸಾಂಪ್ರದಾಯಿಕ ಕಾಫಿಹುಡಿಯ ಸ್ವಾದವನ್ನೇ ಹೋಲುವ ಕಾಫಿಹುಡಿ ಲಭ್ಯವಾಗುತ್ತದೆ. ಇದು ನಿಜವಾದ ಕಾಫಿಯಾಗಿದೆ. ಯಾಕೆಂದರೆ ಈ ಉತ್ಪನ್ನದಲ್ಲಿ ಕಾಫಿ ವಸ್ತು ಬಿಟ್ಟು ಬೇರೇನೂ ಇರುವುದಿಲ್ಲ ಎಂದು ವಿಜ್ಞಾನಿಗಳ ತಂಡದ ಸದಸ್ಯ ಹೆಲಿಕೊ ರೀಶರ್ ಹೇಳಿದ್ದಾರೆ.

ಕಾಫಿ ಬೆಳೆ ಖಂಡಿತವಾಗಿಯೂ ಅತ್ಯಂತ ಸಮಸ್ಯೆ ಎದುರಿಸುವ ಕೃಷಿಯಾಗಿದ್ದು ಜಾಗತಿಕ ತಾಪಮಾನ ಹೆಚ್ಚಳದ ಸಮಸ್ಯೆಯಿಂದ ಹಾಲಿ ಕಾಫಿತೋಟಗಳಲ್ಲಿ ಬೆಳೆಯ ಪ್ರಮಾಣ ಕುಂಠಿತಗೊಂಡಿದೆ. ಆದ್ದರಿಂದ ಕೃಷಿಕರು ಮಳೆ ಕಾಡುಗಳನ್ನು ಕಡಿದು ಅಲ್ಲಿ ಕಾಫಿ ತೋಟ ಮಾಡುವಂತಾಗಿದೆ. ಆ ಬಳಿಕ ಕಾಫಿ ಬೀಜವನ್ನು ಮಾರುಕಟ್ಟೆಗೆ ಸಾಗಿಸುವ ಸಮಸ್ಯೆ, ದಾಸ್ತಾನಿಡುವ ಸಮಸ್ಯೆಯಿದೆ. ಆದ್ದರಿಂದ ಕಾಫಿ ಬೀಜಕ್ಕೆ ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ ಎಂದವರು ಹೇಳಿದ್ದಾರೆ.

ವಿಶ್ವದ ಅತ್ಯಂತ ಅಚ್ಚುಮೆಚ್ಚಿನ ಪೇಯಗಳಲ್ಲಿ ಒಂದೆನಿಸಿರುವ ಕಾಫಿ ಬೆಳೆಗೆ ಎದುರಾಗುವ ಹಲವು ಪರಿಸರ ಸಂಬಂಧಿ ಸಮಸ್ಯೆಗಳಿಗೆ ಈ ನೂತನ ಆವಿಷ್ಕಾರ ಪರಿಹಾರ ರೂಪಿಸಲಿದೆ ಎಂದವರು ಹೇಳಿದ್ದಾರೆ. ಫಿನ್ಲ್ಯಾಂಡ್‌ನ ವಿಟಿಟಿ ತಾಂತ್ರಿಕ ಸಂಶೋಧನಾ ಕೇಂದ್ರದಲ್ಲಿ ಈ ನೂತನ ಆವಿಷ್ಕಾರ ನಡೆಸಲಾಗಿದೆ. ಪ್ರಯೋಗಾಲಯದಲ್ಲಿ ಮಾಂಸ ಉತ್ಪಾದಿಸುವ ಜೀವಕೋಶ ಕೃಷಿ ನಿಯಮವನ್ನು ಕಾಫಿ ಪುಡಿ ಆವಿಷ್ಕಾರದಲ್ಲೂ ಬಳಸಲಾಗಿದೆ. ಸಾಂಪ್ರದಾಯಿಕ ಕಾಫಿಗಿಂತ ಇದು ಸ್ವಲ್ಪ ಕಹಿಯಾಗಿರುತ್ತದೆ. ಆದರೆ ಕಾಫಿಬೀಜ ಹುರಿಯುವ ಸಂದರ್ಭ ಇದಕ್ಕೆ ಕೆಲವೊಂದು ಪೂರಕ ವಸ್ತು ಸೇರಿಸಿ ಕಹಿಯನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಬಹುದು ಎಂದವರು ಹೇಳಿದ್ದಾರೆ.

ಪ್ರಯೋಗಾಲಯದಲ್ಲಿ ಬೆಳೆದ ಕಾಫಿಹುಡಿಗೆ ‘ನವೀನ ಆಹಾರ’ದ ಸ್ಥಾನಮಾನ ನೀಡಿರುವುದರಿಂದ ಸದ್ಯಕ್ಕೆ ಇದು ಜನಸಾಮಾನ್ಯರ ಬಳಕೆಗೆ ಲಭ್ಯವಿರುವುದಿಲ್ಲ. ವಿಶೇಷವಾಗಿ ತರಬೇತಿ ಪಡೆದ ರುಚಿ ತಜ್ಞರು ಮಾತ್ರ ಈಗ ಇದರ ರುಚಿಯನ್ನು ಪರೀಕ್ಷಿಸಿದ್ದಾರೆ. ಆದರೆ ಇವರೂ ಈ ಪೇಯವನ್ನು ಸೇವಿಸುವಂತಿಲ್ಲ, ರುಚಿ ನೋಡಿ ಉಗುಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News