ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಗೋಮಾಂಸ ರಫ್ತು ನಿಲ್ಲಿಸಿ: ಬಿಜೆಪಿಗೆ ಮಾಜಿ ಸಚಿವ ಡಾ. ಮಹದೇವಪ್ಪ ತಿರುಗೇಟು

Update: 2021-10-28 04:57 GMT

ಬೆಂಗಳೂರು, ಅ.28:  'ಗ್ರಾಮೀಣ ಭಾರತದಲ್ಲಿ ಕೃಷಿಯ ಮೂಲಕ ಬದುಕು ಕಂಡು ಕೊಂಡಿರುವ ಎಲ್ಲಾ ರೈತರೂ ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬದ ವೇಳೆ ಹಸುಗಳ ಮೈತೊಳೆದು,  ಅಲಂಕಾರ ಮಾಡಿ, ನಂತರ ಕಿಚ್ಚು ಹಾಯಿಸುವಂತಹ ಆಚರಣೆಯು ಅನಾದಿ ಕಾಲದಿಂದಲೂ ಇದೆ' ಎಂದು ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಈ ಆಚರಣೆಯನ್ನು ನಮ್ಮ ರೈತರು ಬಿಜೆಪಿಗರಿಂದ ಕಲಿಯಬೇಕು. ಬೆಲೆ ಏರಿಕೆಯ ನಡುವೆ ದೀಪಾವಳಿಯೂ ಬೇಡ ಏನೂ ಬೇಡ ಎಂಬ ಪರಿಸ್ಥಿತಿಗೆ ಜನ ಸಾಮಾನ್ಯರನ್ನು ನೂಕಿರುವ ಬಿಜೆಪಿಗರು ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಬೆಳವಣಿಗೆ. ಇವರಿಗೆ ನಿಜವಾಗಲೂ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಇವರು ಮಾಡುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ! ಎಂದು ಡಾ. ಮಹದೇವಪ್ಪ ಆಗ್ರಹಿಸಿದ್ದಾರೆ.

ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋ ಪೂಜೆ ಮಾಡಬೇಕೆಂದು ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ದೀಪಾವಳಿಯ ವೇಳೆ ಸಹಜವಾಗಿ ನಡೆಯುವ ಗೋ ಪೂಜೆ ಆಚರಣೆಗಳಿಗೂ ತನ್ನ ರಾಜಕೀಯ ಬಣ್ಣ ಬಳಿದಿದೆ ಎಂದು ಡಾ. ಮಹದೇವಪ್ಪ ದೂರಿದ್ದಾರೆ.

ನಂತರ ಹೈನುಗಾರಿಕೆಯನ್ನೇ ಉಪ ಕಸುಬಾಗಿಸಿಕೊಂಡಿರುವ ನಮ್ಮೆಲ್ಲಾ ರೈತರ ಕುಟುಂಬಗಳಿಗೆ ತಲಾ 2 ಹಸುಗಳನ್ನು ನೀಡುವ ಮೂಲಕ ಹಸುವಿನ ಮತ್ತು ರೈತರ ಬದುಕಿಗೆ ನೆರವಾಗಲಿ. ಗಗನಕ್ಕೆ ಏರಿರುವ ರಸಗೊಬ್ಬರದ ಬೆಲೆ ಇಳಿಸಲಿ.ವಕೃಷಿ ಉಪಕರಣಗಳ ಬೆಲೆಯನ್ನು ತಗ್ಗಿಸಿ ಕೃಷಿ ಉತ್ಪಾದನೆಯನ್ನು ಉತ್ತೇಜಿಸಲಿ. ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ? ಎಂದು ಡಾ. ಮಹದೇವಪ್ಪ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News