ಏಕಕಾಲಕ್ಕೆ 10 ಲಕ್ಷಕ್ಕೂ ಅಧಿಕ ಮಂದಿಯಿಂದ ಮೊಳಗಿದ ಕನ್ನಡ ಕಲರವ: ‘ಕನ್ನಡ ಉಳಿಸಿ-ಬೆಳೆಸುವ ಪ್ರತಿಜ್ಞೆ'

Update: 2021-10-28 13:22 GMT

ಬೆಂಗಳೂರು, ಅ. 28: 66ನೆ ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಸಮೂಹ ಕನ್ನಡ ಗೀತೆಗಳ ಗಾಯನದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಕರುನಾಡಿನ ದಶದಿಕ್ಕುಗಳಲ್ಲೂ ಕನ್ನಡದ ಕಹಳೆಯನ್ನು ಮೊಳಗಿಸುವ ಮೂಲಕ ಹೊಸ ದಾಖಲೆ ಬರೆದರು.

ಗುರುವಾರ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ, 31 ಜಿಲ್ಲೆ, ತಾಲೂಕು ಕೇಂದ್ರಗಳು, ಶಾಲೆ-ಕಾಲೇಜುಗಳು ಸೇರಿದಂತೆ ಒಟ್ಟು 1 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಳಗ್ಗೆ 11 ಗಂಟೆಗೆ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲ ವರ್ಗದ ಜನರು, ನಾಡಗೀತೆಯ ಜೊತೆಗೆ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ', ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ' ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಎಂಬ ಮೂರು ಗೀತೆಗಳನ್ನು ಏಕಕಾಲಕ್ಕೆ ಹಾಡಿದರು.

ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ-ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ‘ಕನ್ನಡಕ್ಕಾಗಿ ನಾವು' ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.

ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು, ದೇಶ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿದರು. ಇವರಿಗಾಗಿ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಹಾಡುವ ತಾಂತ್ರಿಕ ಸಂಯೋಜನೆ ರೂಪಿಸಲಾಗಿತ್ತು. ಎಲ್ಲ ಸರಕಾರಿ ಕಚೇರಿಗಳು, ಶಾಲೆ-ಕಾಲೇಜುಗಳ ಆವರಣ, ವಿಶ್ವವಿದ್ಯಾಲಯಗಳ ಆವರಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕನ್ನಡ ಗೀತೆಗಳ ಸಮೂಹ ಗಾಯನ ನಡೆಯಿತು.

ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ‘ಮಾತಾಡ್ ಮಾತಾಡ್ ಕನ್ನಡ' ಹೆಸರಿನಲ್ಲಿ ಏಳು ದಿನಗಳ ಕಾಲ ‘ಕನ್ನಡಕ್ಕಾಗಿ ನಾವು' ಅಭಿಯಾನ ನಡೆಸುತ್ತಿದ್ದು, ಆ ಹಿನ್ನೆಲೆಯಲ್ಲಿ ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಲಕ್ಷಾಂತರ ಮಂದಿ ಕನ್ನಡ ಗೀತ ಗಾಯನದ ಮೂಲಕ ಕನ್ನಡ ಉಳಿಸಿ-ಬೆಳೆಸುವ ಸಂಕಲ್ಪ ಮಾಡಿದರು. ಸ್ವಯಂ ಸ್ಫೂರ್ತಿಯಿಂದ ಜನತೆ ಈ ಸಾಮೂಹಿಕ ಗೀತ ಗಾಯನದಲ್ಲಿ ಹಾಡುವ ಮೂಲಕ ಕನ್ನಡದ ಬಗ್ಗೆ ತಮ್ಮ ಅಭಿಮಾನ, ಪ್ರೀತಿಯನ್ನು ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಕನ್ನಡದ ಕಹಳೆ: ‘ಮಾತಾಡ್ ಮಾತಾಡ್ ಕನ್ನಡ' ಹೆಸರಿನ ಕನ್ನಡಕ್ಕಾಗಿ ನಾವು ಅಭಿಯಾನದ ಸಮೂಹ ಗೀತೆಗಳ ಗಾಯನ ಕಾರ್ಯಕ್ರಮದ ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಡೆಯಿತು. ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಸಮ್ಮುಖದಲ್ಲಿ ವಿಧಾನಸೌಧ, ವಿಕಾಸಸೌಧದ ಎಲ್ಲ ಅಧಿಕಾರಿಗಳು, ನೌಕರರು ಈ ಗೀತೆ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡ ಬಗೆಗಿನ ತಮ್ಮ ಪ್ರೀತಿ, ಅಭಿಮಾನವನ್ನು ತೋರಿಸಿದರು.

ಮೊದಲಿಗೆ ನಾಡಗೀತೆ ‘ಜಯಕರ್ನಾಟಕ ಮಾತೆಯಿಂದ ಗಾಯನ ಆರಂಭವಾಗಿ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡುಗಳನ್ನು ಹಾಡುವ ಮೂಲಕ ವಿಧಾನಸೌಧ ಸೇರಿದಂತೆ ನಾಡಿನ ಎಲ್ಲೆಡೆ ಕನ್ನಡ ಧ್ವನಿ ಮೊಳಗಿತು. ವಿಧಾನಸೌಧದ ಮುಂದೆ ನಡೆದ ಈ ಅಪೂರ್ವ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೆ ವಿಧಾನಸೌಧ ಹಾಗೂ ವಿಕಾಸಸೌಧದ ನೌಕರರು ಅದರಲ್ಲೂ ಮಹಿಳಾ ನೌಕರರು ವಿಶೇಷ ಅಲಂಕಾರಗಳನ್ನು ಮಾಡಿಕೊಂಡು ರೇಶ್ಮೆ, ಜರತಾರಿ ಸೀರೆಗಳನ್ನು ಉಟ್ಟು ಗಾಯನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರತಿಜ್ಞಾ ವಿಧಿ ಬೋಧನೆ: ಕನ್ನಡದ ಗೀತೆಗಳ ಸಮೂಹ ಗಾಯನದ ನಂತರ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‍ಕುಮಾರ್ ಅವರು, ಎಲ್ಲರಿಗೂ ಕನ್ನಡ ಉಳಿಸಿ ಬೆಳೆಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧರಾಗಿರುತ್ತೇನೆ' ಎಂಬ ಸಂಕಲ್ಪವನ್ನು ತೊಟ್ಟರು.

ಬಿಸಿಲಿನ ಝಳಕ್ಕೆ ಬಸವಳಿದ ವಿದ್ಯಾರ್ಥಿಗಳು: ರಾಜ್ಯಾದ್ಯಂತ ನಡೆದ ಲಕ್ಷ ಕಂಠಗಳ ಗಾಯನ ಕಾರ್ಯಕ್ರಮ ಕೊಪ್ಪಳದಲ್ಲಿ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಲೆ ಸುತ್ತಿ ಕೆಳಗೆ ಬಿದ್ದರು. ಸಾರ್ವಜನಿಕ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ಬಿಸಿಲಿನ ತಾಪಮಾನ ಹೆಚ್ಚಾದ ಪರಿಣಾಮ ವಿದ್ಯಾರ್ಥಿಗಳು ತಲೆ ಸುತ್ತಿ ಬೀಳುವ ದೃಶ್ಯ ಕಂಡುಬಂತು. ಕೂಡಲೇ ಶಿಕ್ಷಕರು ಮತ್ತು ಸಿಬ್ಬಂದಿ ರಕ್ಷಿಸಿ, ಅವರಿಗೆ ನೀರು ಕುಡಿಸಿ ಸುಧಾರಿಸಿಕೊಳ್ಳಲು ನೆರಳಿಗೆ ಕರೆದುಕೊಂಡು ಹೋದರು.

ಕನ್ನಡ ಕಲರವ: ಇಲ್ಲಿನ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಕನ್ನಡ ಗೀತೆಗಳ ಸಮೂಹ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ್, ಜಿ.ಪಂ. ಸಿಇಓ ದರ್ಶನ್ ಸೇರಿದಂತೆ ಇನ್ನಿತರು ಕೆಂಪು ಮತ್ತು ಹಳದಿ ಬಣ್ಣ ಬಲೂನ್‍ಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಂಪು-ಹಳದಿ ಬಣ್ಣದ ಉಡುಪು ತೊಟ್ಟ ಮಹಿಳೆಯರ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸಿದವು.

ಧ್ವನಿಗೂಡಿಸಿದ ಜನತೆ: ವಿಶ್ವವಿಖ್ಯಾತ ಗೋಲ್ ಗುಂಬಝ್ ಮುಂಭಾಗದಲ್ಲಿ 50 ಕಲಾತಂಡಗಳು 250 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಪಾಲ್ಗೊಂಡಿದ್ದರು. ಉಡುಪಿಯ ಶ್ರೀಕೃಷ್ಣ ದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳ ಮಾರ್ದನಿಸಿದವು. ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 1,61.232 ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು.

ಮೈಸೂರು ವಿಭಾಗದಲ್ಲಿ 96 ಸ್ಥಳಗಳಲ್ಲಿ 5,41,365 ಮಂದಿ ಸಮೂಹ ಗೀತ ಗಾಯನದಲ್ಲಿ ಪಾಲ್ಗೊಂಡರು. ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 10,74,418 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಬುರ್ಗಿ ವಿಭಾಗದ 60 ಸ್ಥಳಗಳಲ್ಲಿ 77,125 ಜನ ಈ ಗೀತ ಗಾಯನದ ಮಾಧುರ್ಯಕ್ಕೆ ಜೊತೆಯಾದರು. ದಿಲ್ಲಿ, ಮುಂಬೈ, ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಈ ಗೀತ ಗಾಯನದ ಸಂಭ್ರಮಕ್ಕೆ ಜೊತೆಯಾದರು. ಒಟ್ಟಾರೆ ಇದು ದಾಖಲೆಯ ಮೇಲೆ ದಾಖಲೆ ಬರೆದ ಕಾರ್ಯಕ್ರಮವಾಗಿ ಕನ್ನಡ ಸಂಸ್ಕೃತಿಯ ಅಧ್ಯಾಯದಲ್ಲಿ ಅಚ್ಚಳಿಯದೆ ಉಳಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News