ಬೆಲೆ ಏರಿಕೆಗೆ ಕಡಿವಾಣವಿಲ್ಲವೇ?

Update: 2021-11-03 05:00 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯ ಈ ದಿನಗಳಲ್ಲಿ ಹಬ್ಬಗಳಾದರೂ ಯಾಕೆ ಬರುತ್ತವೋ ಎಂದು ಜನಸಾಮಾನ್ಯರು ಹಣೆ ಚಚ್ಚಿಕೊಳ್ಳುವಂತಾಗಿದೆ. ಇಂಧನ ಬೆಲೆ ಲಂಗು ಲಗಾಮಿಲ್ಲದೆ ಏರುತ್ತಲೇ ಹೊರಟಿದೆ. ಇದರ ಪರಿಣಾಮವಾಗಿ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ ಬೆಳಕಿನ ಹಬ್ಬ ದೀಪಾವಳಿ ಎಂಬುದು ಜನರ ಪಾಲಿಗೆ ಕತ್ತಲ ರಾತ್ರಿಯಂತಾಗಿದೆ. ಏರುತ್ತಿರುವ ಬೆಲೆಗೆ ತಕ್ಕಂತೆ ಕೆಲಸಗಾರರ ಸಂಬಳವೇನೂ ಹೆಚ್ಚಾಗಿಲ್ಲ. ಜೊತೆಗೆ ಕೋವಿಡ್ ಮತ್ತು ಲಾಕ್‌ಡೌನ್ ಪರಿಣಾಮವಾಗಿ ಭಾರತದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ.

 ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಸಿಲಿಂಡರ್‌ಗಳ ಬೆಲೆಗಳು ಪ್ರತಿ ನಿತ್ಯವೂ ಏರುತ್ತಿವೆ. ಮೂರು ತಿಂಗಳ ಹಿಂದೆ ಲೀಟರ್‌ಗೆ 85 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ಈಗ 115 ರೂಪಾಯಿಗೆ ಏರಿದೆ. ಡೀಸೆಲ್ ಬೆಲೆ ಲೀಟರ್‌ಗೆ 67 ರೂಪಾಯಿ ಇದ್ದುದು ಈಗ ನೂರರ ಗಡಿ ದಾಟಿದೆ. ಅಡಿಗೆ ಅನಿಲ ಸಿಲಿಂಡರ್ ಬೆಲೆ 1,000 ರೂಪಾಯಿ ದಾಟಿದೆ. ವಾಣಿಜ್ಯ ಉದ್ದೇಶದ ಸಿಲಿಂಡರ್ ಬೆಲೆ 2,000 ರೂಪಾಯಿ ತಲುಪಿದೆ. ಡೀಸೆಲ್ ದರ ಏರಿಕೆಯಿಂದಾಗಿ ಎಲ್ಲಾ ಜೀವನಾವಶ್ಯಕ ಪದಾರ್ಥಗಳ ಸರಕು ಸಾಗಣೆ ವೆಚ್ಚ ಶೇಕಡಾ 40ರಿಂದ 50ರಷ್ಟು ಹೆಚ್ಚಾಗಿದೆ.
ಈ ಬೆಲೆ ಏರಿಕೆಯ ಪರಿಣಾಮವಾಗಿ ಹೊಟೇಲ್ ತಿಂಡಿ ತಿನಿಸುಗಳ ಬೆಲೆಗಳೂ ದುಬಾರಿಯಾಗಿವೆ. ಟ್ಯಾಕ್ಸಿ ಬಾಡಿಗೆ ದರ ಕಿ.ಮೀ.ಗೆ 20ರಿಂದ 25ರೂಪಾಯಿ ಹೆಚ್ಚಾಗಿದೆ.ಎಲ್ಲಾ ದಿನಸಿ ಪದಾರ್ಥಗಳ ಬೆಲೆಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ಬಡವರು, ಮಧ್ಯಮವರ್ಗದ ಜನರು ಈ ದುಬಾರಿ ವೆಚ್ಚಗಳನ್ನು ನಿಭಾಯಿಸಲಾಗದೆ ಪರದಾಡುತ್ತಿದ್ದಾರೆ. ಇದರ ಜೊತೆ ಮನೆ ಬಾಡಿಗೆ, ವಿದ್ಯುತ್ ಶುಲ್ಕ, ನೀರಿನ ದರದ ಬಾಕಿ ಎಲ್ಲವೂ ಜನರನ್ನು ಹಿಂಡಿ ಹಿಪ್ಪೆಮಾಡಿವೆ.
ಕೊರೋನ ಪರಿಣಾಮವಾಗಿ ದೇಶದಲ್ಲಿ ಅನೇಕ ಕೈಗಾರಿಕೆಗಳು ಬಿಕ್ಕಟ್ಟಿನ ಸುಳಿಗೆ ಸಿಲುಕಿವೆ. ಜನಸಾಮಾನ್ಯರ ಕೈಯಲ್ಲಿ ಹಣವೂ ಖಾಲಿಯಾಗಿರುವುದರಿಂದ ಯಾವುದೇ ವ್ಯಾಪಾರ, ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ವಿಶೇಷವಾಗಿ ಹೊಟೇಲ್ ಉದ್ಯಮ ಲಾಕ್‌ಡೌನ್ ನಂತರವೂ ಇನ್ನೂ ಚೇತರಿಕೆ ಕಂಡಿಲ್ಲ. ಮುಂಚಿನಂತೆ ಜನರು ಹೊಟೇಲ್‌ಗಳಿಗೆ ಬರುವುದಿಲ್ಲ. ಜೊತೆಗೆ ಎಲ್ಲಾ ವಸ್ತುಗಳ ಸಾಗಾಟ ದರ ಹೆಚ್ಚಾಗಿರುವುದರಿಂದ ಅವರು ಒದಗಿಸುವ ಆಹಾರದ ಬೆಲೆ ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ. ತರಕಾರಿ ದರಗಳು ಕೂಡ ಜನಸಾಮಾನ್ಯರ ಕೈಗೆ ನಿಲುಕದಷ್ಟು ಏರಿಕೆ ಕಂಡಿವೆ. ಆದರೆ ಬೆಲೆ ನಿಯಂತ್ರಣ ಮಾಡಬೇಕಾದ ಸರಕಾರ ಜನಸಾಮಾನ್ಯರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ತನಗೇನೂ ಸಂಬಂಧವಿಲ್ಲ ಎಂಬಂತೆ ತನ್ನ ಪಾಡಿಗೆ ತಾನಿದೆ ಎಂಬುದು ವಿಷಾದಕರ ಸಂಗತಿಯಾಗಿದೆ.
ಒಂದೆಡೆ ಜನಸಾಮಾನ್ಯರ ಬದುಕು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರೆ, ಇನ್ನೊಂದು ಕಡೆ ಅಂಬಾನಿ, ಅದಾನಿಯವರಂತಹ ಭಾರೀ ಕಾರ್ಪೊರೇಟ್ ಉದ್ಯಮ ಪತಿಗಳ ಸಂಪತ್ತು ಕೋವಿಡ್ ಕಾಲದಲ್ಲೇ ಹಲವಾರು ಪಟ್ಟು ಹೆಚ್ಚಾಗಿದೆ. ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿರುವ ಲಕ್ಷಾಂತರ ಜನರಿದ್ದಾರೆ.ಇನ್ನೊಂದು ಕಡೆ ಕೆಲ ಉದ್ಯಮಗಳ ನೌಕರರು ಅರ್ಧ ಸಂಬಳ ಪಡೆಯುತ್ತಿದ್ದಾರೆ.ಜನ ಸಾಮಾನ್ಯರನ್ನು ಆರ್ಥಿಕ ಬಿಕ್ಕಟ್ಟಿನಿಂದ ಮೇಲೆತ್ತುವ ಸರಕಾರದ ಕಣ್ಣೊರೆಸುವ ಕೋಟ್ಯಂತರ ರೂಪಾಯಿ ಪ್ಯಾಕೇಜ್‌ಗಳು ನಿಷ್ಪ್ರಯೋಜಕವಾಗಿವೆ. ಅಧಿಕಾರ ದಲ್ಲಿರುವವರಿಗೆ ಇದೆಲ್ಲ ಗೊತ್ತಿಲ್ಲವೆಂದಲ್ಲ. ಅವರಿಗೆ ಎಲ್ಲವೂ ಗೊತ್ತಿದೆ. ಆದರೆ ಈ ಬಿಕ್ಕಟ್ಟನ್ನು ನಿವಾರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ.
ವಾಸ್ತವವಾಗಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ಮೂಲ ಬೆಲೆ ಲೀಟರ್ ಗೆ 35ರೂ. ಮಾತ್ರ ಇದೆ. ಇದಕ್ಕೆ ಶೇಕಡಾ 65ರಷ್ಟು ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ವ್ಯಾಟ್, ಸೆಸ್ ಇತ್ಯಾದಿಗಳು ಸೇರಿ ಲೀಟರ್‌ಗೆ 115 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ತೈಲ ಬೆಲೆ ಹೆಚ್ಚಳದ ಸುಲಭ ಮಾರ್ಗವನ್ನು ಹಿಡಿದಿವೆ. ಇದು ಸರಕಾರ ನಡೆಸುವ ರೀತಿಯಲ್ಲ.
ಅಭಿವೃದ್ಧಿ ಯೋಜನೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ತೈಲ ದರ ಏರಿಕೆ ಅನಿವಾರ್ಯ ಎಂಬ ಒಕ್ಕೂಟ ಸರಕಾರದ ವಾದದಲ್ಲಿ ಹುರುಳಿಲ್ಲ.ಜನಸಾಮಾನ್ಯರನ್ನು ಬೆಲೆ ಏರಿಕೆಯ ಬೆಂಕಿಗೆ ತಳ್ಳುವ ಇಂತಹ ಜನ ವಿರೋಧಿ ಮಾರ್ಗಗಳ ಬದಲಾಗಿ ಕೊರೋನ ಕಾಲದಲ್ಲೂ ಲಕ್ಷಾಂತರ ಕೋಟಿ ರೂಪಾಯಿ ಲಾಭ ಮಾಡಿಕೊಂಡ ಕಾರ್ಪೊರೇಟ್ ಕಂಪೆನಿಗಳಿಂದ ಸರಕಾರ ಕೋವಿಡ್ ತೆರಿಗೆ ಎಂದು ವಿಶೇಷ ತೆರಿಗೆಯನ್ನು ಹೇರಿ ತನ್ನ ಖಜಾನೆಯನ್ನು ಭರ್ತಿ ಮಾಡಿಕೊಂಡು ಅದನ್ನು ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲಭೂತ ಸೌಕರ್ಯಗಳ ಸಲುವಾಗಿ ಬಳಸಿಕೊಳ್ಳಲಿ.
ಪೆಟ್ರೋಲ್, ಡೀಸೆಲ್ ಮತ್ತು ಮದ್ಯಗಳು ರಾಜ್ಯ ಸರಕಾರಗಳ ಪ್ರಮುಖ ಆದಾಯ ಮೂಲಗಳಾಗಿವೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರವೂ ಈ ಉತ್ಪನ್ನಗಳನ್ನು ಅದರ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳ ವರಮಾನ ಮೂಲಗಳಿಗೆ ಹೊಡೆತ ಬೀಳುತ್ತದೆ.
ಹೀಗಾಗಿ ರಾಜ್ಯಗಳು ಈ ಪ್ರಸ್ತಾವನೆಯನ್ನು ವಿರೋಧಿಸುತ್ತ ಬಂದಿವೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಅದು ಯಾವುದೆಂದರೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡದಿದ್ದರೆ ಇಂಧನ ಬೆಲೆ ಕಡಿಮೆ ಮಾಡಲು ಸಾಧ್ಯವಿಲ್ಲ. ಇಂಧನ ಬೆಲೆ ಕಡಿಮೆಯಾಗದಿದ್ದರೆ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ.
ಈ ಎಲ್ಲ ಅಂಶಗಳ ಬಗ್ಗೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ಒಮ್ಮತದ ಸೂತ್ರ ರೂಪಿಸಬೇಕು. ರಾಜ್ಯ ಸರಕಾರಗಳ ವರಮಾನಕ್ಕೆ ಪೆಟ್ಟು ಬೀಳದಂತೆ ಏಕರೂಪದ ತೆರಿಗೆಯನ್ನು ನಿಗದಿಪಡಿಸಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.
ಸಾಲುಸಾಲಾಗಿ ಬರುತ್ತಿರುವ ಈ ಹಬ್ಬಗಳ ಸಂದರ್ಭದಲ್ಲಾದರೂ ಸರಕಾರ ಜೀವನಾವಶ್ಯಕ ಪದಾರ್ಥಗಳ ಬೆಲೆಗಳನ್ನು ಇಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News