ದಲಿತರ ಬಗ್ಗೆ ಅವಹೇಳನಕಾರಿಯಾಗಿ ನಾನು ಎಲ್ಲಿಯೂ ಮಾತನಾಡಿಲ್ಲ: ಸಿದ್ದರಾಮಯ್ಯ

Update: 2021-11-03 14:43 GMT

ಬೆಂಗಳೂರು, ನ.3: ದಲಿತರ ಬಗ್ಗೆ ನಾನು ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸಿಂದಗಿಯ ಮಾದಿಗ ದಂಡೋರ ಸಮುದಾಯದ ಸಮಾವೇಶದಲ್ಲಿ ನಾನು ನೀಡಿದ ಹೇಳಿಕೆಗೆ ಇಂದು ರಾಜಕೀಯ ಪ್ರೇರಿತವಾಗಿ ಬಣ್ಣಕಟ್ಟಿ ಬಿಂಬಿಸಲಾಗುತ್ತಿದೆ ಅಷ್ಟೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯದ ಸಮಾನತೆಯನ್ನು ಪ್ರತಿಪಾದನೆ ಮಾಡಲಾಗಿದೆ. ಅಂತಹ ಸಂವಿಧಾನವನ್ನೇ ಬದಲಾವಣೆ ಮಾಡಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಅಂತಹ ಪಕ್ಷಕ್ಕೆ ಗೋವಿಂದ ಕಾರಜೋಳ, ಜಿಗಜಿಣಗಿ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ದಲಿತ ನಾಯಕರು ಹೋದರು ಎಂದರು. 

ಅಲ್ಲೀಗ ಎಂಎಲ್‍ಎ, ಎಂಪಿಗಳೂ ಆಗಿದ್ದಾರೆ. ಇವರೆಲ್ಲರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸುವ, ಸಂವಿಧಾನಕ್ಕೆ ಬೆಲೆ ಕೊಡದ ಪಕ್ಷಕ್ಕೆ ಅದು ಕೂಡ ಅವರ ಸ್ವಾರ್ಥಕ್ಕಾಗಿ ಹೋಗಿದ್ದಾರೆ ಎಂದು ಆ ಸಮಾವೇಶದಲ್ಲಿಯೇ ಹೇಳಿದ್ದೆ. ದಲಿತರ ವಿರುದ್ಧ ಮಾತನಾಡಿದ್ದರೆ, ಅವರು ಅಂದೇ, ಅಲ್ಲೇ ಪ್ರತಿಭಟನೆ ನಡೆಸಬಹುದಿತ್ತು. ಅಂದು ಸಮಾವೇಶದಲ್ಲಿ ನೂರಾರು ಜನರಿದ್ದರು. ಅಂದು ನಾನು ನೀಡಿದ ಹೇಳಿಕೆಗೆ ನೆರೆದವರೆಲ್ಲರೂ ಸಹಮತ ವ್ಯಕ್ತಪಡಿಸಿದ್ದರು. ಚಪ್ಪಾಳೆ ತಟ್ಟಿದ್ದರು. ಇಂದು ರಾಜಕೀಯ ಪ್ರೇರಿತವಾಗಿ ನನ್ನ ಹೇಳಿಕೆಗೆ ಬಣ್ಣಕಟ್ಟಿ ಹೇಳಲಾಗುತ್ತಿದೆ ಅಷ್ಟೇ ಎಂದು ಅವರು ಹೇಳಿದರು.

ದಲಿತರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಾಗಬೇಕು ಅನ್ನುವುದರಲ್ಲಿ ನಾನು ಮೊದಲಿಗ. ಈ ದೇಶಕ್ಕೆ ಅಂಬೇಡ್ಕರ್ ಅನ್ನುವ ಒಬ್ಬ ಮಹಾನುಭಾವ ಸಂವಿಧಾನ ಕೊಡದೆ ಹೋಗಿದ್ದರೆ ದಲಿತರಿಗೆ ಇಷ್ಟು ರಕ್ಷಣೆ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಸಂವಿಧಾನವನ್ನೇ ಅಗೌರವದಿಂದ ಕಾಣುವ ಪಕ್ಷದಲ್ಲಿ ಇದ್ದುಕೊಂಡು ಕೆಲವರು ಈ ಕುರಿತು ಮಾತನಾಡುತ್ತಾರೆ. ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕು ಇಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.  

ಸ್ವಾತಂತ್ರ್ಯ ಬಂದ ನಂತರ ಕಾರ್ಮಿಕ ಮಂತ್ರಿ ಎಂಬ ಹುದ್ದೆ ಸೃಷ್ಟಿಸಿದ್ದೇ ಕಾಂಗ್ರೆಸ್ ಪಕ್ಷ. ಆಗ ಬಿಜೆಪಿ ಅನ್ನುವುದೊಂದು ಪಕ್ಷ ಆದರೂ ಇತ್ತೇ. ಅಂಬೇಡ್ಕರ್‍ರವರು ರಿಪಬ್ಲಿಕನ್ ಪಾರ್ಟಿಯಲ್ಲಿದ್ದರು, ಆದರೂ ಅವರನ್ನು ಕಾನೂನು ಮಂತ್ರಿಯನ್ನಾಗಿ ಮಾಡಲಾಗಿತ್ತು. ಸಂವಿಧಾನ ಮೀಸಲಾತಿಯನ್ನು ಕೊಟ್ಟಿದೆ ನಿಜ. ಅದನ್ನು ಅನುಷ್ಠಾನಕ್ಕೆ ತಂದದ್ದು ಕಾಂಗ್ರೆಸ್. ಈಗ ಅದನ್ನು ಬದಲಾವಣೆ ಮಾಡಬೇಕು ಅನ್ನುತ್ತಿರುವವರು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋದರು ಎಂಬುದನ್ನು ನಾನು ಎಲ್ಲಿಯೂ ಹೇಳಿಯೇ ಇಲ್ಲ. ಇದನ್ನು ರಾಜಕೀಯವಾಗಿ ಬಿಜೆಪಿಯವರು ಸೃಷ್ಟಿಮಾಡಿದ್ದಾರೆ. ದಲಿತರಿಗೆ ಅವಮಾನ ಮಾಡುವ ಕೆಲಸವನ್ನು ನನ್ನ ಜೀವಮಾನದಲ್ಲೇ ನಾನು ಮಾಡಲ್ಲ ಎಂದು ಅವರು ಹೇಳಿದರು.

ಸಮಾಜದಲ್ಲಿ ಚಾತುರ್ವರ್ಣ ವ್ಯವಸ್ಥೆ, ಅಸ್ಪೃಶ್ಯತೆ ಸೃಷ್ಟಿಸಿದ ಬಿಜೆಪಿ, ಆರೆಸ್ಸೆಸ್‍ನಿಂದ ಕಾಂಗ್ರೆಸ್‍ನವರು ಪಾಠ ಕಲಿಯುವ ಅವಶ್ಯಕತೆಯಿಲ್ಲ. ದಲಿತರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು. ಜನರಿಗೆ ಅರ್ಥಮಾಡಿಕೊಳ್ಳುವ ಶಕ್ತಿಯಿದೆ. ಇವರು ಮಾಡುತ್ತಿರುವುದೆಲ್ಲವನ್ನು ಅವರು ವೀಕ್ಷಿಸುತ್ತಿದ್ದಾರೆ. ಮಹದೇವಪ್ಪ ಅವರನ್ನು ಲೋಕೋಪಯೋಗಿ ಮಂತ್ರಿಯನ್ನಾಗಿ, ಶ್ರೀನಿವಾಸ ಪ್ರಸಾದ್ ಅವರನ್ನು ಕಂದಾಯ ಮಂತ್ರಿಯನ್ನಾಗಿ, ಎಚ್.ಆಂಜನೇಯ ಅವರನ್ನು ಸಮಾಜ ಕಲ್ಯಾಣ ಮಂತ್ರಿಯನ್ನಾಗಿ, ಡಾ.ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಸಿದ್ದರಾಮಯ್ಯ ಹೇಳಿದರು. 

ಈಗಾಗಲೆ ಪಕ್ಷ ಬಿಟ್ಟು ಹೋದವರನ್ನು ಏನೂ ಮಾಡಲಾಗದು. ದಲಿತರಿಗೆ ಅವರ ಜನಸಂಖ್ಯೆಗನುಗುಣವಾಗಿ ಯೋಜನೆ ನೀಡಿದ್ದು ಕಾಂಗ್ರೆಸ್. ಭಡ್ತಿ ಮೀಸಲಾತಿಗೆ ಕಾನೂನು ಮಾಡಿಕೊಟ್ಟಿದ್ದು ಕಾಂಗ್ರೆಸ್. ಗುತ್ತಿಗೆ ಆಧಾರದ ಕೆಲಸಗಳಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಬಿಜೆಪಿ ಈ ಕುರಿತಾಗಿ ಏನು ಮಾಡಿದೆ ಸ್ವಲ್ಪ ಹೇಳಲಿ. ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‍ನಲ್ಲಿದ್ದಾಗ ಕಾಂಗ್ರೆಸ್ಸನ್ನು ಹೊಗಳುತ್ತಿದ್ದರು. ಈಗ ಬಿಜೆಪಿಯಲ್ಲಿದ್ದಾರೆ ಹಾಗಾಗಿ ಅಲ್ಲಿ ಹೊಗಳುತ್ತಾರೆ ಅಷ್ಟೇ. ಅವರ ಮಾತಿಗೆಲ್ಲ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ಬಿಜೆಪಿಯವರು ಮೀಸಲಾತಿಯನ್ನೇ ವಿರೋಧ ಮಾಡಿದ ಗಿರಾಕಿಗಳು. ಇದಕ್ಕಾಗಿ ರಥಯಾತ್ರೆ ಮಾಡಿದರು, ಮಂಡಲ್ ಕಮಿಷನ್ ವರದಿ ವಿರೋಧಿಸಿದರು, ರಾಮಾಜೋಯಿಸ್ ಸುಪ್ರೀಂಕೋರ್ಟ್‍ಗೆ ಹೋಗಿ ಸ್ಥಳೀಯ ಸಂಸ್ಥೆಗಳಲ್ಲಿ, ಪಂಚಾಯಿತಿಗಳಲ್ಲಿ ಮೀಸಲಾತಿ ಕೊಟ್ಟಿದ್ದನ್ನು ವಿರೋಧಿಸಿದರು ಇಷ್ಟೆಲ್ಲ ಮಾಡಿದ ಬಿಜೆಪಿಯವರಿಂದ ಈ ಕುರಿತಾಗಿ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ತಳ ಸಮುದಾಯದ ಜನರಲ್ಲಿ, ದಲಿತರಾಗಲಿ, ಹಿಂದುಳಿದವರಾಗಲಿ, ಅಲ್ಪಸಂಖ್ಯಾತರಾಗಲಿ, ಮುಂದುವರಿದ ಜಾತಿಯಾದರೂ ಅದರಲ್ಲಿ ಬಡವರು ಇದ್ದಾರೆ. ಅವಕಾಶದಿಂದ ವಂಚಿತಗೊಂಡ ಜನರು ಯಾರೇ ಇದ್ದರೂ ಅವರ ಪರವಾಗಿ ನಮ್ಮ ಪಕ್ಷ ಕೆಲಸ ಮಾಡುತ್ತದೆ. ಸಂತ ಸೇವಾಲಾಲ್ ಲಂಬಾಣಿ ಜನಕ್ಕೆ ಮಾತ್ರ ಗುರುಗಳಲ್ಲ ಇಡೀ ಸಮಾಜಕ್ಕೆ ಗುರುಗಳು. ಅವರ ಜಯಂತಿ ಆಚರಣೆಗೆ ಅನುವು ಮಾಡಿಕೊಟ್ಟದ್ದು ನಾವು. ಬಂಜಾರ ಅಭಿವೃದ್ಧಿ ನಿಗಮಕ್ಕೆ ನನ್ನ ಅಧಿಕಾರಾವಧಿಯಲ್ಲಿ 200 ಕೋಟಿ ನೀಡಲಾಗಿತ್ತು. ಈಗ 30 ಕೋಟಿ ಮಾತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು. 

ಬಿಟ್‍ಕಾಯಿನ್: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಟ್‍ಕಾಯಿನ್ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಹಗರಣದಲ್ಲಿ ಕೆಲವು ರಾಜಕೀಯ ಪ್ರಭಾವಿಗಳು ಇದ್ದಾರೆ ಎಂಬ ಮಾಹಿತಿ ಇದೆಯಷ್ಟೇ. ಇದರ ಬಗ್ಗೆ ಮಾಹಿತಿ ನೀಡಬೇಕು. ಈ ಕುರಿತಾಗಿ ಸರಕಾರ ಸರಿಯಾದ ತನಿಖೆ ಮಾಡಿಸಲಿ, ಅಲ್ಲಿ ಯಾವ ಪಕ್ಷದ ಪ್ರಭಾವಿಗಳಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಸತ್ಯ ಜನರಿಗೆ ತಿಳಿಯಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ ಅನ್ನುವುದಷ್ಟು ನನ್ನ ಕಾಳಜಿ ಎಂದರು.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ, ಈಗ ಬಿಟ್ ಕಾಯಿನ್ ಹಗರಣ, ಇವುಗಳೆಲ್ಲ ಇರುವಾಗ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇನ್ನೇನು ತಾನೇ ಮಾಡಲು ಸಾಧ್ಯ, ಅವರ ಬಳಿ ಮಾತನಾಡಲು ಯಾವುದೇ ವಿಷಯಗಳಿಲ್ಲ. ದಲಿತರಿಗೆ ಬಿಜೆಪಿ ಸರಕಾರದಿಂದ ಸಿಕ್ಕಿರುವ ಅಭಿವೃದ್ಧಿ ಕಾರ್ಯಕ್ರಮಗಳು ಏನು ಎಂಬುದರ ಪಟ್ಟಿಯನ್ನು ಮೊದಲು ಕೊಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಎಸ್ಸಿ ಎಸ್ಟಿಗೆ 2018ರ ಬಜೆಟ್‍ನಲ್ಲಿ 30 ಸಾವಿರ ಕೋಟಿ ಮೀಸಲಿಡಲಾಗಿತ್ತು. ಇಂದು ಅದು 24 ಸಾವಿರ ಕೋಟಿಗೆ ಇಳಿದಿದೆ. ದಿನಗಳೆದಂತೆ ಬಜೆಟ್ ಹೆಚ್ಚಾಗುತ್ತಾ ಹೋಗಬೇಕು. ಆದರೆ ಇದು ಇಳಿಕೆಯಾಗುತ್ತಾ ಇದೆ. ಎಷ್ಟೋ ಯೋಜನೆಗಳನ್ನು ಮೊಟಕುಗೊಳಿಸಲಾಗಿದೆ. ಅಕ್ಕಿಯನ್ನು 5 ಕೆಜಿಗೆ ಇಳಿಸಲಾಗಿದೆ. ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ, ಶೂ ಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ ನಿಲ್ಲಿಸಲಾಗಿದೆ. ಜನರಿಗೆ ಬಿಜೆಪಿ ಬಳಿ ತಲುಪಿಸುವಂತದ್ದೇನಿದೆ ಎಂದು ಅವರು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇರುವಂತೆ ಮಾತನಾಡುವ ಬಿಜೆಪಿಯವರು ಮೂರುವರೆ ವರ್ಷದಲ್ಲಿ ಒಂದು ಬಾರಿಯಾದರೂ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿಲ್ಲ. ಈ ಬಾರಿ ಚಳಿಗಾಲದ ಅಧಿವೇಶನ ಅಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಲಾಗಿದೆ. ಈ ಬಗ್ಗೆ ಅಲ್ಲಿಯೇ ನಾನು ಸೂಕ್ತವಾದ ಉತ್ತರ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂವಿಧಾನ ಬದಲಾವಣೆ ಮಾಡುವುದಕ್ಕೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡುವಾಗ ಬಿಜೆಪಿಯಲ್ಲಿರುವ ದಲಿತ ನಾಯಕರೆಲ್ಲ ಎಲ್ಲಿ ಹೋಗಿದ್ದರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News