ದೀಪದಿಂದ ದೀಪ ಹಚ್ಚಿ....

Update: 2021-11-04 07:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದೆಡೆ ಕೊರೋನ, ಇನ್ನೊಂದೆಡೆ ಬೆಲೆಯೇರಿಕೆ, ಮಗದೊಂದೆಡೆ ಲಾಕ್‌ಡೌನ್‌ನ ಬಿಸಿ...ಇವೆಲ್ಲ ಕತ್ತಲೆಗಳ ನಡುವೆ ಮತ್ತೆ ಬಂದಿದೆ ದೀಪಾವಳಿ. ಈ ಹಬ್ಬಕ್ಕೆ ಇರುವ ಪೌರಾಣಿಕ ಕತೆಯ ಹಿನ್ನೆಲೆ ಏನೇ ಇರಲಿ, ದೀಪಾವಳಿಯನ್ನು ಭಾರತದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ಹಿನ್ನೆಲೆಗಳಲ್ಲಿ ಆಚರಿಸುತ್ತಾರೆ. ಜಾತಿ, ಧರ್ಮಗಳನ್ನು ಮೀರಿ ಬೆಳಕನ್ನು ಸಂಭ್ರಮಿಸುತ್ತಾರೆ. ‘ತಮಸೋಮಾ ಜ್ಯೋತಿರ್ಗಮಯಾ...’ ಎನ್ನುವ ಸಾಲು ದೀಪಾವಳಿಯ ಉದ್ದೇಶವನ್ನು ಹೇಳುತ್ತದೆ. ದೀಪಾವಳಿ ಎಂದಲ್ಲ, ಎಲ್ಲ ಹಬ್ಬಗಳು ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಯಲು ನಮಗೆ ಸ್ಫೂರ್ತಿಯನ್ನು ನೀಡುತ್ತವೆ. ಹಳೆಯ ನೋವು, ದುಮ್ಮಾನಗಳನ್ನು ಮರೆತು ಬದುಕನ್ನು ಹೊಸದಾಗಿ ನವೀಕರಿಸಿಕೊಳ್ಳುವುದಕ್ಕೆ ಈ ಹಬ್ಬಗಳು ಮನುಷ್ಯರ ಪಾಲಿಗೆ ಒಂದು ನೆಪ. ಕಳೆದ ಒಂದೆರಡು ವರ್ಷಗಳಿಂದ ದೇಶ ಅನುಭವಿಸುತ್ತಿರುವ ಕಷ್ಟ ನಷ್ಟಗಳು ಅತ್ಯಂತ ಭೀಕರವಾದುದು. ಕಳೆದ ಮೂರು ದಶಕಗಳಲ್ಲಿ ಈ ದೇಶ ಈ ಮಟ್ಟಿನ ನಾಶ, ನಷ್ಟಗಳನ್ನು ಎದುರಿಸಿರಲಿಲ್ಲ. ಈ ಬಾರಿಯ ದೀಪಾವಳಿಯಾದರೂ ಈ ದೇಶದ ಕಷ್ಟ ನಷ್ಟಗಳನ್ನು ದೂರ ಮಾಡಲಿ, ಕತ್ತಲು ಕವಿದ ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸಲಿ ಎನ್ನುವುದು ದೇಶವಾಸಿಗಳ ನಿರೀಕ್ಷೆಯಾಗಿದೆ.

 ಸಂತೋಷ ಮತ್ತು ಬೆಳಕು ಹಂಚಿದಷ್ಟು ಹೆಚ್ಚುತ್ತವೆ. ದೀಪಾವಳಿಯ ಈ ದಿನಗಳಲ್ಲಿ ಸಂತೋಷ ಮತ್ತು ಬೆಳಕನ್ನು ಹಂಚುವ ಕೆಲಸ ನಡೆದಾಗ ಮಾತ್ರ, ಹಬ್ಬ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಬಹುದು. ಈ ಬಾರಿ ಬಹುತೇಕ ರಾಜ್ಯಗಳು ಪಟಾಕಿಗಳನ್ನು ನಿಷೇಧಿಸಿವೆ. ಕೆಲವು ರಾಜ್ಯಗಳು ಹಸಿರು ಪಟಾಕಿಗಳಿಗಷ್ಟೇ ಅವಕಾಶವನ್ನು ನೀಡಿವೆ. ಇದನ್ನು ಮುಂದಿಟ್ಟು, ಕೆಲವರು ‘ಹಿಂದೂಧರ್ಮದ ಹಬ್ಬಗಳನ್ನು ಆಚರಿಸದಂತೆ ಅಡ್ಡಿ ಮಾಡಲಾಗುತ್ತಿದೆ’ ಎಂದು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಪಟಾಕಿಗೂ ದೀಪಾವಳಿಗೂ ಯಾವ ಸಂಬಂಧವೂ ಇಲ್ಲ ಎನ್ನುವುದು ಗೊತ್ತಿದ್ದೂ, ಪಟಾಕಿಯ ಜೊತೆಗೆ ದೀಪಾವಳಿಯನ್ನು ಬೆಸೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಈ ಅಪಪ್ರಚಾರಕ್ಕಾಗಿ ಪಟಾಕಿ ಮಾಫಿಯಾ ದೊಡ್ಡ ಮಟ್ಟದಲ್ಲಿ ಹಣ ಸುರಿಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪಟಾಕಿಗಳು ಬೆಳಕನ್ನು ತರುವುದಿಲ್ಲ. ಪಟಾಕಿ ಸದ್ದಿಗಷ್ಟೇ ಸೀಮಿತ. ದೊಡ್ಡದಾಗಿ ಉರಿದು, ಕೆಲವೇ ಕ್ಷಣಗಳಲ್ಲಿ ಸ್ಫೋಟಿಸಿ ನಮ್ಮ ಮುಂದೆ ಬೂದಿಯನ್ನು, ಗಂಧಕ ವಾಸನೆಯನ್ನು ಮತ್ತು ಗಾಢ ಅಂಧಕಾರವನ್ನು ಉಳಿಸಿ ಹೋಗುತ್ತದೆ. ಆ ಪಟಾಕಿಯ ಜೊತೆಗೆ ಜನಸಾಮಾನ್ಯರ ಸಾವಿರಾರು ರೂಪಾಯಿಯೂ ಉರಿದು ಬೂದಿಯಾಗುತ್ತದೆೆ. ಇದೇ ಸಂದರ್ಭದಲ್ಲಿ ಮನೆಯ ಮುಂದೆ ಸಾಲಾಗಿ ಹಣತೆಗಳನ್ನು ಹಚ್ಚಿದರೆ ಇಡೀ ರಾತ್ರಿ ಮನೆಯಂಗಳವನ್ನು ಆ ಹಣತೆಗಳು ವೌನವಾಗಿ ಬೆಳಗುತ್ತವೆ. ಹಣತೆಯ ಆ ವೌನ ಮತ್ತು ಬೆಳಕು ನಮ್ಮ ಅಂತರಂಗದ ಪರಿವರ್ತನೆಗೆ ಇಂದು ತುರ್ತಾಗಿ ಬೇಕಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಪಟಾಕಿಗಳು ಮಾಡಿದ ಅನಾಹುತಗಳು ಒಂದೆರಡೇನಲ್ಲ. ಒಂದು ಕ್ಷಣದ ಸಂಭ್ರಮ, ಸಾಲುಸಾಲು ಅನಾಹುತಗಳನ್ನು ತಂದು ಹಾಕಿವೆ. ಇಡೀ ಮನೆಗಳೇ ಸುಟ್ಟ ಉದಾಹರಣೆಗಳಿವೆ. ಪಟಾಕಿ ಅಂಗಡಿಗಳಿಗೆ ಬೆಂಕಿ ಬಿದ್ದು ಸಾವುನೋವುಗಳು ಸಂಭವಿಸಿವೆ. ಎಲ್ಲಕ್ಕಿತ ಮುಖ್ಯವಾಗಿ, ಮಕ್ಕಳು ಪಟಾಕಿ ಸುಡಲು ಹೋಗಿ ತಮ್ಮ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಬೆಳಕನ್ನು ನೀಡಲೆಂದು ಬಂದ ದೀಪಾವಳಿ ಎಷ್ಟೋ ಕುಟುಂಬಗಳ ನಡುವೆ ಈ ಕತ್ತಲನ್ನು ಬಿಟ್ಟು ಹೋಗಿದೆ. ಇದಕ್ಕೆ ನಾವು ದೀಪಾವಳಿಯನ್ನು ಹೊಣೆ ಮಾಡುವಂತಿಲ್ಲ. ದೀಪಾವಳಿಯನ್ನು ನಾವು ತಪ್ಪಾಗಿ ಆಚರಿಸುವ ಪರಿಣಾಮವಾಗಿ ಈ ಅನಾಹುತಗಳನ್ನು ಕೈಯಾರೆ ಆಹ್ವಾನಿಸಿಕೊಳ್ಳುತ್ತಿದ್ದೇವೆ. ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಪಟಾಕಿಗಳು ಇಲ್ಲದೆ, ಕೇವಲ ಹಣತೆಯ ಮೂಲಕ ಆಚರಿಸುವುದರಿಂದ ಹಲವು ಪ್ರಯೋಜನಗಳಿವೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡೇ ನ್ಯಾಯಾಲಯವೂ ಪಟಾಕಿಯನ್ನು ನಿಷೇಧಿಸಿದೆ. ಪಟಾಕಿ ನಿಷೇಧಕ್ಕೆ ಧರ್ಮದ ಮೊಹರನ್ನು ಒತ್ತುವವರಿಗೆ ದೀಪಾವಳಿ ಹಬ್ಬ ಪ್ರತಿಪಾದಿಸುವ ವೌಲ್ಯಗಳ ಬಗ್ಗೆ ಅರಿವಿಲ್ಲ ಎಂದು ನಾವು ತಿಳಿದುಕೊಳ್ಳಬೇಕು.

ಭಾರತದ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ದಿಲ್ಲಿಯಲ್ಲಂತೂ ಉಸಿರಾಟವೇ ಕಷ್ಟ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೋನ ಬಂದ ದಿನದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪಟಾಕಿ ಹೊರ ಬಿಡುವ ಗಂಧಕ ಮಾಲಿನ್ಯ ಪರಿಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಕೊಂಡೊಯ್ಯಬಹುದು. ನಗರ ಪ್ರದೇಶದಲ್ಲಿ ನಿರಂತರ ಪಟಾಕಿ ಸಿಡಿಸುವುದರ ಪರಿಣಾಮವನ್ನು ಕೊರೋನ ಬಾಧಿತರು, ಉಸಿರಾಟ ಸಂಬಂಧಿ ರೋಗಿಗಳು ಅನುಭವಿಸಬೇಕಾಗುತ್ತದೆ. ಹಬ್ಬವನ್ನು ನಾವು ಮಾತ್ರ ಸಂಭ್ರಮಿಸಿದರೆ ಸಾಕೆ? ನಮ್ಮ ಸಂಭ್ರಮ ಇತರರಿಗೆ ತೊಂದರೆ ಅನ್ನಿಸಿದರೆ ಆಚರಣೆಯಿಂದ ಪ್ರಯೋಜನವಾದರೂ ಏನು? ಪಟಾಕಿಯ ಮೂಲಕ ಒಂದೇ ಒಂದು ಕ್ಷಣದಲ್ಲಿ ಸಾವಿರಾರು ರೂಪಾಯಿಗಳನ್ನು ಸಾವು ಸುಟ್ಟು ಹಾಕುತ್ತೇವೆ. ಇದು, ಆರ್ಥಿಕವಾಗಿ ತತ್ತರಿಸಿ ಕೂತಿರುವ ಸಂದರ್ಭ. ಲಾಕ್‌ಡೌನ್‌ನ ಕಾರಣದಿಂದಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಡವರು ಇನ್ನೂ ಚೇತರಿಸಿಕೊಂಡಿಲ್ಲ. ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು ತೀರಾ ಸಂಕಷ್ಟದಲ್ಲಿದ್ದಾರೆ. ಪಟಾಕಿಯ ಬದಲು ನಾವು ಬಟ್ಟೆ ಬರೆ, ಸಣ್ಣ ವ್ಯಾಪಾರಿಗಳಿಂದ ಆಹಾರ ಪದಾರ್ಥ ಇತ್ಯಾದಿಗಳನ್ನು ಕೊಂಡು ವ್ಯವಹಾರಗಳನ್ನು ಚುರುಕುಗೊಳಿಸಬಹುದು. ಹೇಗೆ ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚುತ್ತೇವೆಯೋ ಹಾಗೆಯೇ, ನಮ್ಮ ಸಂತೋಷವನ್ನು ಇನ್ನೊಬ್ಬರ ಎದೆಯೊಳಗೆ ಹಚ್ಚುವುದಕ್ಕೂ ಇದೊಂದು ಅವಕಾಶ. ಪಟಾಕಿಗಾಗಿ ವ್ಯಯ ಮಾಡುವ ಹಣವನ್ನು ಸಂಕಷ್ಟದಲ್ಲಿರುವ ಬಡವರ ಮಕ್ಕಳಿಗೆ ಬೇರೆ ಬೇರೆ ರೀತಿಯಲ್ಲಿ ವ್ಯಯ ಮಾಡಬಹುದಾಗಿದೆ. ಗಾಢ ಕತ್ತಲು ಆವರಿಸಿರುವ ಅವರ ಕಣ್ಣುಗಳಲ್ಲಿ ಖುಷಿಯ ದೀಪವನ್ನು ಈ ಮೂಲಕ ಹಚ್ಚಿ, ದೀಪಾವಳಿಯನ್ನು ಇನ್ನಷ್ಟು ಅರ್ಥಪೂರ್ಣೊಳಿಸುವ ಅವಕಾಶ ನಮಗೆ ಬಂದಿದೆ.

ದೇಶದಲ್ಲಿ ಕೊರೋನ ಬಂದ ಬಳಿಕ ಇತರ ರೋಗಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೀಗೆ ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಪಟಾಕಿಗಳಿಗಾಗಿ ಸುರಿಯುವ ಹಣವನ್ನು ಅವರಿಗೆ ಹಂಚಬಹುದು. ಶಾಲೆಗಳೇ ಇಲ್ಲದೆ ಮನೆಯಲ್ಲಿ ಕೂತಿರುವ ಮಕ್ಕಳಿಗಾಗಿ ತಾತ್ಕಾಲಿಕವಾಗಿಯಾದರೂ ನಮ್ಮಲ್ಲಿರುವ ಮೊಬೈಲ್‌ಗಳನ್ನು ಕೊಟ್ಟು ಅವರ ಅವಶ್ಯಕತೆ ಮುಗಿದ ಬಳಿಕ ಮರಳಿ ಪಡೆಯಬಹುದು. ಅಕ್ಷರವೆನ್ನುವುದು ಬೆಳಕು. ನಮ್ಮಿಂದ ಒಂದು ಮಗು ಶಾಲೆ ಕಲಿಯುವಂತಾದರೂ, ಆ ಮಗು ಬೆಳೆದು ಇಡೀ ಸಮಾಜಕ್ಕೆ ಬೆಳಕಾಗಬಹುದು. ಬಟ್ಟೆ ಬರೆಗಳನ್ನು ಹಂಚುವುದು, ಶಾಲೆಯ ಶುಲ್ಕ ಕಟ್ಟಲಾಗದ ಮಕ್ಕಳ ಶುಲ್ಕ ಕಟ್ಟುವುದು, ಪಠ್ಯಗಳಿಲ್ಲದ ಮಕ್ಕಳಿಗೆ ಶಾಲಾ ಪಠ್ಯಗಳನ್ನು ಖರೀದಿಸಿ ಕೊಡುವುದು ಇವೆಲ್ಲವೂ ನಾವು ಹಚ್ಚುವ ಹಣತೆಗಳೇ ಆಗಿವೆ. ಅವು ಕತ್ತಲು ತುಂಬಿದ ಹಲವು ಮಕ್ಕಳ ಭವಿಷ್ಯದ ದಾರಿಯನ್ನು ಬೆಳಗಬಹುದು. ಪಟಾಕಿ ಸದ್ದು ಮಾಡುತ್ತದೆ. ಆದರೆ ಕ್ಷಣಾರ್ಧದಲ್ಲಿ ಅದು ತನ್ನ ಬೆಳಕನ್ನು , ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಹಣತೆ ಸದ್ದು ಮಾಡುವುದಿಲ್ಲ. ಆದರೆ ಅದು ಎಣ್ಣೆ ಹೊಯ್ದಷ್ಟು ಕಾಲ ಮಂದವಾಗಿ ನಮ್ಮ ನಡುವೆ ಬೆಳಗುತ್ತಲೇ ಇರುತ್ತದೆ. ಈ ಬೆಳಕನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ, ನಾವು ಈ ಬಾರಿಯ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗೋಣ. ಸರಕಾರದ ಎಲ್ಲ ಕಾನೂನು, ಮಾರ್ಗಸೂಚಿಗಳನ್ನು ಪಾಲಿಸುತ್ತಾ ಆರೋಗ್ಯಪೂರ್ಣವಾದ ಭವಿಷ್ಯವೊಂದನ್ನು ಈ ದೀಪಾವಳಿಯ ಮೂಲಕ ರೂಪಿಸಿಕೊಳ್ಳೋಣ. ನಾಡಿನ ಜನತೆಗೆ ಬೆಳಕಿನ ಹಬ್ಬದ ಶುಭಾಶಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News