ತಗ್ಗಿದ ತೈಲದ ಅಬಕಾರಿ ಸುಂಕ: ಯಾರಿಗೆ ಯಾರು ಕೊಟ್ಟ ಉಡುಗೊರೆ?

Update: 2021-11-05 08:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಿವಿಧೆಡೆಗಳಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಕೇಂದ್ರ ಸರಕಾರ ತೈಲದ ಅಬಕಾರಿ ಸುಂಕವನ್ನು ಸಣ್ಣ ಪ್ರಮಾಣದಲ್ಲಿ ತಗ್ಗಿಸಿ, ಪೆಟ್ರೋಲ್ ಪ್ರತಿ ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್‌ಗೆ 10 ರೂ. ಕಡಿಮೆಯಾಗುವಂತೆ ಮಾಡಿದೆ. ಬೆನ್ನಿಗೇ ಬಿಜೆಪಿ ಆಡಳಿತ ಹೊಂದಿರುವ ರಾಜ್ಯ ಸರಕಾರಗಳೂ ಅದಕ್ಕೆ ಕೈ ಜೋಡಿಸಿವೆ. ಕಳೆದ ಒಂದು ವರ್ಷದಿಂದ ಪೆಟ್ರೋಲ್ ಬೆಲೆಯೇರಿಕೆ ಯಾವ ಮಟ್ಟವನ್ನು ತಲುಪಿದೆ ಎನ್ನುವುದನ್ನು ನಾವು ನೋಡುತ್ತಾ ಬರುತ್ತಿದ್ದೇವೆ. ಜನರು ಪಕ್ಷಭೇದ ಮರೆತು ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಸಿಡಿಯುತ್ತಿದ್ದಾರೆ. ಅಡುಗೆ ಮನೆಯ ಕುಕ್ಕರ್ ಇನ್ನೇನು ಸ್ಫೋಟಿಸಬೇಕು ಎನ್ನುವಷ್ಟರಲ್ಲಿ ಸಣ್ಣದೊಂದು ವಿಸಿಲ್ ಹೊರ ಬೀಳುವಂತೆ ಮಾಡಿ, ದುರಂತವನ್ನು ಸರಕಾರ ತಪ್ಪಿಸಿದೆ. ಸರಕಾರ ಮಧ್ಯ ಪ್ರವೇಶಿಸದೆ ಇದ್ದಿದ್ದರೆ ಶೀಘ್ರದಲ್ಲೇ ಪೆಟ್ರೋಲ್ ಬೆಲೆ 150 ರೂಪಾಯಿಯನ್ನು ತಲುಪುತ್ತಿತ್ತು. ಸ್ವತಃ ಬಿಜೆಪಿ ನಾಯಕರಿಗೂ ಇದನ್ನು ಸಮರ್ಥಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಅಬಕಾರಿ ಸುಂಕವನ್ನು ಇಳಿಸಿದಂತೆ ಮಾಡಿ, ಬೀಸುವ ದೊಣ್ಣೆಯಿಂದ ಪಾರಾಗುವ ಪ್ರಯತ್ನ ನಡೆಸಿದೆ. ವಿಪರ್ಯಾಸವೆಂದರೆ, ಸುಂಕ ಇಳಿಕೆಯನ್ನು ‘ದೀಪಾವಳಿಯ ಕೊಡುಗೆ’ ಎಂದು ಬಿಜೆಪಿ ಬಿಂಬಿಸುವುದಕ್ಕೆ ಪ್ರಯತ್ನಿಸುತ್ತಿದೆ. ನಮ್ಮದೇ ಕಿಸೆಯಿಂದ ಒಂದು ಸಾವಿರ ರೂಪಾಯಿ ದೋಚಿ, ಬಳಿಕ ಅದರಿಂದ ನೂರು ರೂಪಾಯಿಯನ್ನು ವಾಪಸ್ ಕೊಟ್ಟರೆ, ಅದು ಕೊಟ್ಟವನ ಹೆಗ್ಗಳಿಕೆಯೇ? ಕೊಡುವುದಿದ್ದರೆ ಆತ ಕಿತ್ತುಕೊಂಡ ಅಷ್ಟೂ ಹಣವನ್ನು ಮರಳಿ ಕೊಟ್ಟು ಸಾಚಾ ಅನ್ನಿಸಿಕೊಳ್ಳಬೇಕು. ಜನರ ಹಣವನ್ನು ದೋಚಿ, ಅದರಿಂದ ಐದು ರೂಪಾಯಿ ಅಥವಾ ಹತ್ತು ರೂಪಾಯಿಯನ್ನು ಮರಳಿಕೊಟ್ಟರೆ ಅದು ದೀಪಾವಳಿ ಕೊಡುಗೆ ಹೇಗಾಗುತ್ತದೆ? ಇದು ಜನರಿಗೆ ನೀಡಿದ ಕೊಡುಗೆ ಅಲ್ಲವೇ ಅಲ್ಲ. ಮುಖವಿಲ್ಲದೆ ಓಡಾಡುತ್ತಿದ್ದ ಬಿಜೆಪಿ ನಾಯಕರಿಗೆ ಮೋದಿಯವರು ಕೊಟ್ಟ ಕೊಡುಗೆ ಎಂದಷ್ಟೇ ಕರೆಯಬಹುದೇನೋ?

ಯಾವುದೇ ಮಹತ್ವದ ಚುನಾವಣೆಯನ್ನು ಎದುರಿಸುವ ಮೊದಲು ಕೆಲವು ಉಪಚುನಾವಣೆಗಳನ್ನು ಘೋಷಿಸಿ ಬಿಜೆಪಿ ಜನರ ಮನಸ್ಥಿತಿ ಹೇಗಿದೆ ಎನ್ನುವುದನ್ನು ಪರೀಕ್ಷೆಗೊಡ್ಡುತ್ತದೆ. ಅದರ ಆಧಾರದಲ್ಲೇ ಮುಂದಿನ ಮಹತ್ವದ ಚುನಾವಣೆಗೆ ಬೇಕಾದ ರೂಪುರೇಷೆಗಳನ್ನು ಮಾಡಿ ಗೆಲ್ಲುತ್ತದೆ. ಸದ್ಯ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಗೆ ಸಣ್ಣ ಮಟ್ಟದ ಮುಖಭಂಗವಾಗಿದೆ. ಮೋದಿಯವರ ವರ್ಚಸ್ಸು ಕಳೆಗುಂದಿರುವುದು ಅವರಿಗೆ ಸ್ಪಷ್ಟವಾಗಿದೆ. ಹಲವು ಕೋಮುಗಲಭೆಗಳನ್ನು ಪ್ರಾಯೋಜಿಸಲಾಗಿದೆಯಾದರೂ, ಅವುಗಳಿಂದಲೂ ಬಿಜೆಪಿಯ ಉದ್ದೇಶ ಈಡೇರಿಲ್ಲ. ಬಿಜೆಪಿ ಮುಖಂಡರಿಗೆ ಅತಿ ಹೆಚ್ಚು ಮುಜುಗರವನ್ನು ಉಂಟು ಮಾಡಿರುವುದು ತೈಲ ಬೆಲೆ ಮತ್ತು ಸಿಲಿಂಡರ್ ಬೆಲೆ. ಜನರು ಇದರ ನೇರ ಸಂತ್ರಸ್ತರಾಗಿರುವುದರಿಂದ, ಸುಳ್ಳುಗಳ ಮೂಲಕ ಜನರ ಬಾಯಿಯನ್ನು ಮುಚ್ಚಿಸುವುದು ಅದಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಣ್ಣ ಪ್ರಮಾಣದಲ್ಲಿ ಸುಂಕವನ್ನು ಇಳಿಸಿದಂತೆ ಮಾಡಿ, ಮಾಧ್ಯಮಗಳಲ್ಲಿ ಈ ಬಗ್ಗೆ ‘ಬೋಪರಾಕ್’ ಎಬ್ಬಿಸಿ ಜನರನ್ನು ಮರುಳುಗೊಳಿಸುವುದಕ್ಕೆ ಸರಕಾರ ಮುಂದಾಗಿದೆ. ಆದರೆ ಇದು ಹೆಚ್ಚು ಸಮಯ ನಡೆಯುವುದಿಲ್ಲ. ಯಾಕೆಂದರೆ ಸದ್ಯ 10 ರೂಪಾಯಿ ಇಳಿಕೆಯಾದರೂ, ಪೆಟ್ರೋಲ್ ದರ ಭವಿಷ್ಯದಲ್ಲಿ ಏರುತ್ತಲೇ ಹೊಗುತ್ತದೆ ಹೊರತು, ಇಳಿಕೆಯಾಗುವುದಿಲ್ಲ. ಒಟ್ಟಿನಲ್ಲಿ ಮುಂದಿನ ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಇಳಿಕೆ ನಡೆದಿದೆ.

ನಿಜಕ್ಕೂ ಸರಕಾರಕ್ಕೆ ಜನರ ಯೋಗಕ್ಷೇಮದ ಮೇಲೆ ಕಾಳಜಿಯಿದ್ದಿದ್ದರೆ, ಲಾಕ್‌ಡೌನ್‌ನಿಂದ ತತ್ತರಿಸಿದ್ದ ಸಂದರ್ಭದಲ್ಲಿ ಪೆಟ್ರೋಲ್ ಮೇಲೆ ದೊಡ್ಡ ಮಟ್ಟದಲ್ಲಿ ಅಬಕಾರಿ ಸುಂಕವನ್ನು ಹೇರುತ್ತಿರಲಿಲ್ಲ. ಭಾರತದಲ್ಲಿ ತೈಲ ಬೆಲೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದ ಕಚ್ಚಾ ತೈಲ ಬೆಲೆಯೇ ನಿರ್ಧರಿಸುತ್ತದೆ ಎಂದದ್ದು ಸರಕಾರವೇ. ಆ ಆಧಾರದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿದಂತೆಲ್ಲ, ಭಾರತದಲ್ಲೂ ಏರಿಕೆಯಾಗುತ್ತಿತ್ತು. ಅದನ್ನು ಜನರು ಸಹಿಸುತ್ತಿದ್ದರು ಕೂಡ. ಆದರೆ ಕಳೆದ ವರ್ಷ ಲಾಕ್‌ಡೌನ್‌ನಿಂದ ಕಂಗೆಟ್ಟ ಸಂದರ್ಭದಲ್ಲಿ, ಒಂದು ಆಶಾಕಿರಣವಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಅತಿ ಕನಿಷ್ಠ ಮಟ್ಟಕ್ಕೆ ಇಳಿಯಿತು. ಅದರಂತೆ ಭಾರತದಲ್ಲೂ ಪೆಟ್ರೋಲ್ ಬೆಲೆ ಕನಿಷ್ಟ ಮಟ್ಟಕ್ಕೆ ತಲುಪಬೇಕಾಗಿತ್ತು. ವಿಪರ್ಯಾಸವೆಂದರೆ ಸರಕಾರ ಜನರ ಬೆನ್ನಿಗೆ ಇರಿಯಿತು. ತೈಲ ಬೆಲೆಯಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದಿದ್ದ ಸರಕಾರ, ಅಂತಾರಾಷ್ಟ್ರೀಯಮಟ್ಟದಲ್ಲಿ ತೈಲ ಬೆಲೆ ವಿಪರೀತ ಕುಸಿಯುತ್ತಿದ್ದಂತೆಯೇ ಅಬಕಾರಿ ಸುಂಕವನ್ನು ಏಕಾಏಕಿ ಹೇರಿ ಬಿಟ್ಟಿತು. ಜನರಿಗೆ ಸಿಗಬೇಕಾದ ಲಾಭವನ್ನು ಸರಕಾರ ಮಧ್ಯ ಪ್ರವೇಶಿಸಿ ತನ್ನ ಖಜಾನೆಯನ್ನು ತುಂಬಿಸಿತು. ಇಷ್ಟು ದೊಡ್ಡ ಮೋಸವನ್ನು ಮಾಡಿ, ಇದೀಗ 10 ರೂಪಾಯಿ ಇಳಿಸಿ, ಅದನ್ನು ದೀಪಾವಳಿ ಕೊಡುಗೆಯೆಂದು ಹೇಳಿಕೊಳ್ಳಲು ಜನರನ್ನು ಮೂರ್ಖರೆಂದು ಬಗೆದ ನಾಯಕರಿಗಷ್ಟೇ ಸಾಧ್ಯ. ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಅಂಶವನ್ನು ನಾವು ಗಮನಿಸಬೇಕು. ಪ್ರಧಾನಿ ಮೋದಿಯವರ ಕುರಿತಂತೆ ಕಟ್ಟಿದ ಭ್ರಮಾಲೋಕವನ್ನು ನಂಬಿ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಿದ್ದರೆ ಇಂತಹದೊಂದು ನಿರ್ಧಾರವನ್ನು ಕೇಂದ್ರ ಸರಕಾರ ಮಾಡುತ್ತಿರಲಿಲ್ಲ. ಬಿಜೆಪಿಗೆ ಉಪಚುನಾವಣೆಗಿಂತಲೂ ಮುಖ್ಯವಾದುದು, ಮುಂಬರುವ ಉತ್ತರ ಪ್ರದೇಶ ಮತ್ತು ಇತರ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳು. ಅವುಗಳನ್ನು ಗೆಲ್ಲುವುದಕ್ಕಾಗಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಗರಿಷ್ಠ ಮಟ್ಟದಲ್ಲಿ ಮಾಡುತ್ತಿದೆ.

ಯಾಕೆಂದರೆ, ಚುನಾವಣೆಯಲ್ಲಿ ಜನರ ಮುಂದಿಡಲು ಬೇಕಾದ ಒಂದೇ ಒಂದು ಜನಪರ ಕೆಲಸಗಳೂ ಅದರ ಬಳಿಯಿಲ್ಲ. ಹಿಂದೂ-ಮುಸ್ಲಿಂ ಎಂದು ಬಡಿದಾಡಿಸಿ ಚುನಾವಣೆಯನ್ನು ಗೆಲ್ಲುವ ಉದ್ದೇಶವನ್ನು ಅದು ಹೊಂದಿದೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಅವರ ಪ್ರಚೋದನಾಕಾರಿ ಮಾತುಗಳ ಹಿಂದೆ ಇರುವುದು ಇದೇ ಚುನಾವಣಾ ಅಂಜೆಂಡಾ. ತ್ರಿಪುರ, ಹರ್ಯಾಣ, ಅಸ್ಸಾಂ ಸೇರಿದಂತೆ ಹಲವೆಡೆ ಈಗಾಗಲೇ ಸರಕಾರದ ನೇತೃತ್ವದಲ್ಲೇ ಹಿಂಸಾಚಾರಗಳು ನಡೆಯುತ್ತಿವೆ. ಅಭಿವೃದ್ಧಿ ವಿಷಯಗಳನ್ನು ಮರೆಯುವಂತೆ ಮಾಡಿ, ಭಾವನಾತ್ಮಕವಾಗಿ ಜನರನ್ನು ತನ್ನೆಡೆಗೆ ಸೆಳೆಯುವ ದುಷ್ಟ ರಾಜಕಾರಣಕ್ಕೆ ಬಿಜೆಪಿ ಇಳಿದಿದೆ. ಜನರು ಅಭಿವೃದ್ಧಿಯ ಆಧಾರದಲ್ಲಿ ಮತಗಳನ್ನು ಚಲಾಯಿಸಿದಾಗ ಮಾತ್ರ ಕೇಂದ್ರ ಸರಕಾರ ಜನರ ಪರವಾಗಿ ಕೆಲಸ ಮಾಡಬಹುದು. ಚುನಾವಣೆಯನ್ನು ಗೆಲ್ಲುವುದಕ್ಕೆ ಕೋಮುಗಲಭೆಗಳೇ ಸಾಕು ಎಂದಾದರೆ ಅದು ಜನರ ಹಿತದ ಕುರಿತಂತೆ ಯಾಕೆ ಚಿಂತಿಸಬೇಕು? ಉಪಚುನಾವಣೆಯಲ್ಲಿ ಜನವಿರೋಧಿ ನೀತಿಗಳ ಕಾರಣದಿಂದಲೇ ಬಿಜೆಪಿ ಹಿನ್ನಡೆ ಅನುಭವಿಸಿತು. ಪರಿಣಾಮವಾಗಿ ತಕ್ಕಮಟ್ಟಿಗೆ ಎಚ್ಚೆತ್ತುಕೊಂಡು ತಕ್ಷಣ ಸಣ್ಣಪ್ರಮಾಣದಲ್ಲಾದರೂ ಅಬಕಾರಿ ಸುಂಕವನ್ನು ಇಳಿಸಿತು.

ಉತ್ತರ ಪ್ರದೇಶವೂ ಸೇರಿದಂತೆ ಇತರ ರಾಜ್ಯಗಳ ವಿಧಾನಸಭಾಚುನಾವಣೆಗಳು ಅಭಿವೃದ್ಧಿಯ ಆಧಾರದಲ್ಲಿ ನಡೆದಾಗ ಮಾತ್ರ ಕೇಂದ್ರ ಸರಕಾರ ತನ್ನ ಜನವಿರೋಧಿ ನೀತಿಯಿಂದ ಹಿಂದೆ ಸರಿಯಲು ಸಾಧ್ಯ. ಈ ನಿಟ್ಟಿ ನಲ್ಲಿ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ದೊಡ್ಡ ಪ್ರಮಾಣದಲ್ಲಿ ಇಳಿಯಬೇಕಾದರೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಜನಪರ ಕಾರ್ಯಗಳ ಕುರಿತ ಚರ್ಚೆ ಮುನ್ನೆಲೆಗೆ ಬರಬೇಕು. ಅದರ ಆಧಾರದಲ್ಲಿ ಜನರು ಮತನೀಡಬೇಕು. ರಾಮಮಂದಿರ, ಕಾಶ್ಮೀರ, ಪಾಕಿಸ್ತಾನದ ಹೆಸರಲ್ಲಿ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಎನ್ನುವುದು ಬಿಜೆಪಿಗೆ ಸ್ಪಷ್ಟವಾದರೆ ಈ ದೇಶದ ಜನಸಾಮಾನ್ಯರ ಸಂಕಟಗಳು ಇನ್ನಷ್ಟು ತಾರಕಕ್ಕೇರಲಿದೆ. ಅಲ್ಲ, ಉತ್ತರ ಪ್ರದೇಶದ ಚುನಾವಣೆಯನ್ನು ಗೆದ್ದ ಮರುದಿನವೇ ಬಿಜೆಪಿ ತೈಲಬೆಲೆಯ ಅಬಕಾರಿ ಸುಂಕವನ್ನು ಇನ್ನಷ್ಟು ಹೆಚ್ಚಿಸಲಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News