ಹೊಟೇಲ್-ರೆಸಾರ್ಟ್ ಗಳಿಗೆ ಆಸ್ತಿ ತೆರಿಗೆಯಲ್ಲಿ ಶರತ್ತುಬದ್ಧ ಶೇ.50ರಷ್ಟು ರಿಯಾಯಿತಿ: ರಾಜ್ಯ ಸರಕಾರ ಆದೇಶ

Update: 2021-11-06 15:36 GMT

ಬೆಂಗಳೂರು, ನ.6: 2021-22ನೇ ಹಣಕಾಸು ವರ್ಷದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳು ಪಾವತಿಸುವ ಆಸ್ತಿ ತೆರಿಗೆಯಿಂದ(ಬಿಬಿಎಂಪಿ ಹೊರತುಪಡಿಸಿ) ಶರತ್ತುಬದ್ಧ ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಶರತ್ತುಗಳು: ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ ಮಾಲಕರು ಶೇ.50ರಷ್ಟು ಆಸ್ತಿ ತೆರಿಗೆಯನ್ನು ಪಾವತಿಸಬೇಕು ಹಾಗೂ ಶೇ.50ರಷ್ಟು ಆಸ್ತಿ ತೆರಿಗೆಯಿಂದ ರಿಯಾಯಿತಿಯನ್ನು ನೀಡಲು ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಈ ಅರ್ಜಿಗಳನ್ನು ವರ್ಗವಾರು ಕಂದಾಯ ನಿರೀಕ್ಷಕರಿಂದ ಪರಿಶೀಲನೆಗೊಳಿಸಬೇಕು, ಈ ರಿಯಾಯಿತಿ ನೀಡಲು ಸಲ್ಲಿಸಿದ ವಿವರವಾದ ವರದಿಯನ್ನು ಡಿಯುಡಿಸಿ ಅಥವಾ ಯುಎಲ್‌ಬಿ ಯೋಜನಾ ನಿರ್ದೇಶಕರು ಪರಿಶೀಲಿಸಬೇಕು. ಜಿಲ್ಲಾ ಮಟ್ಟದ ಸಮಿತಿಯು ಈ ಕ್ಲೇಮ್, ಬಿಲ್ಲುಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕು.

ಆಸ್ತಿ ತೆರಿಗೆಯಲ್ಲಿ ನೀಡಿರುವ ರಿಯಾಯಿತಿ ಮೊತ್ತವನ್ನು ಸರಕಾರದಿಂದ ಹಿಂಭರಿಸಲು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಶೇ.50ರಷ್ಟು ಆಸ್ತಿ ತೆರಿಗೆಯಿಂದ ರಿಯಾಯಿತಿಯನ್ನು ಪಡೆಯಲಿಚ್ಛಿಸುವ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ರವು ಕೆಟಿಟಿಎಫ್ ಕಾಯ್ದೆ 8/1ರ ಅನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಬೇಕು. ಈ ಸಂಬಂಧ ವೆಬ್‌ಸೈಟಿನಲ್ಲಿ ನೋಂದಣಿಯಾದ ಸದಸ್ಯರಿಗೆ ಈ ರಿಯಾಯಿತಿಯನ್ನು ನೀಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News