ದಾವೂದ್ ಸಹಾಯಕನೊಂದಿಗೆ ನಂಟು ಹೊಂದಿರುವ ಫಡ್ನವಿಸ್ ರಿಂದ ನಕಲಿ ನೋಟು ಜಾಲ ರಕ್ಷಣೆ : ನವಾಬ್ ಮಲಿಕ್

Update: 2021-11-10 07:02 GMT

ಮುಂಬೈ: ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜ್ಯದಲ್ಲಿ ನಕಲಿ ಕರೆನ್ಸಿ ದಂಧೆಗಳನ್ನು ರಕ್ಷಿಸುತ್ತಿದ್ದಾರೆ .  ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹಿಂನ ಸಹಾಯಕ ರಿಯಾಝ್ ಭಾಟಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಬುಧವಾರ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲಿಕ್, "ನಾನು ಅಮಾಯಕರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸುವ ವ್ಯಕ್ತಿಯ ವಿರುದ್ಧ ಹೋರಾಡುತ್ತಿದ್ದೇನೆ. ದೇವೇಂದ್ರ ಫಡ್ನವಿಸ್ ನಾನು ಪ್ರಸ್ತಾವಿಸಿರುವ ವಿಚಾರವನ್ನು ಬೇರಡೆಗೆ ತಿರುಗಿಸುವುದಲ್ಲದೆ ಒಬ್ಬ ಅಧಿಕಾರಿಯನ್ನು (ಸಮೀರ್ ವಾಂಖೆಡೆ) ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದರು.

ನಾಗ್ಪುರದ ಕುಖ್ಯಾತ ಕ್ರಿಮಿನಲ್ ಮುನ್ನಾ ಯಾದವ್ ಅವರನ್ನು ತಮ್ಮ  ನೇತೃತ್ವದ ಸರಕಾರದ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯ ಅಧ್ಯಕ್ಷರನ್ನಾಗಿ ಫಡ್ನವಿಸ್ ನೇಮಿಸಿದ್ದರು. ಬಾಂಗ್ಲಾದೇಶಿಯರ ಅಕ್ರಮ ವಲಸೆಯಲ್ಲಿ ಭಾಗಿಯಾಗಿರುವ ಹೈದರ್ ಆಝಮ್ ಎಂಬಾತನನ್ನು ಫಡ್ನವಿಸ್ ಅವರು ಮೌಲಾನಾ ಆಝಾದ್ ಫೈನಾನ್ಸ್ ಕಾರ್ಪೊರೇಷನ್‌ನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಮಲಿಕ್ ಆರೋಪಿಸಿದರು.

ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ರಿಯಾಝ್ ಭಾಟಿಯೊಂದಿಗೆ ಫಡ್ನವಿಸ್ ಗೆ ಸಂಬಂಧವಿತ್ತು ಎಂದು ಆರೋಪಿಸಿದ ಎನ್ ಸಿಪಿ ಮುಖಂಡ ಮಲಿಕ್, ರಿಯಾಝ್ ಭಾಟಿ ಯಾರೆಂದು ಕೇಳಲು ಬಯಸುವೆ? ಈತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್‌ಪೋರ್ಟ್‌ನೊಂದಿಗೆ ಬಂಧಿಸಲಾಗಿತ್ತು. ಆತನಿಗೆ ದಾವೂದ್ ನ ನಂಟಿದೆ. ಆತನಿಗೆ ಕೇವಲ 2 ದಿನಗಳಲ್ಲಿ ಜಾಮೀನು ಮಂಜೂರಾಗಿದೆ. ರಿಯಾಝ್ ಭಾಟಿ ನಿಮ್ಮ (ದೇವೇಂದ್ರ ಫಡ್ನವಿಸ್) ಜೊತೆ ಏಕೆ ನಿಕಟ ಸಂಪರ್ಕದಲ್ಲಿದ್ದ. ಅನೇಕ ಬಿಜೆಪಿ ಕಾರ್ಯಕ್ರಮಗಳಲ್ಲಿ ನಿಮ್ಮೊಂದಿಗೆ ಆತ ಏಕೆ ಕಾಣಿಸಿಕೊಂಡಿದ್ದ" ಎಂದು ಮಲಿಕ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News