ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಸಂಪೂರ್ಣ ವಿಫಲ: ಸಿದ್ದರಾಮಯ್ಯ

Update: 2021-11-11 04:40 GMT

ಬೆಂಗಳೂರು: ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಬಿಜೆಪಿ ಸರಕಾರಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ. ಬಿಜೆಪಿಗರು ತಕ್ಷಣವೇ ತಮ್ಮ ಸುಳ್ಳುಗಳನ್ನು ನಿಲ್ಲಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಜನರು ಬಿಜೆಪಿಯನ್ನು ನಿಯಂತ್ರಿಸುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ

 ನಮ್ಮ ದೇಶವು ಹಿಂದೆಂದೂ ಇಲ್ಲದ ಮಟ್ಟಿಗೆ ಬೆಲೆ ಏರಿಕೆಯ ಬಿಸಿಯಲ್ಲಿ ಬೇಯುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಯಾವ ದೇಶವೂ ಅನುಭವಿಸದ ಸಂಕಷ್ಟವನ್ನು ಬಿಜೆಪಿ ಸರಕಾರ ತಂದೊಡ್ಡಿದೆ.ವಿಪರೀತ ಬೆಲೆಏರಿಕೆ ಮಾಡಿ ನಂತರ ತುಸು ಕಡಿಮೆ ಮಾಡಿದ್ದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಂಡು ಬಿಜೆಪಿ ನಾಯಕರು ಓಡಾಡುತ್ತಿದ್ದಾರೆ. ರಾಜಕಾರಣ ಮಾಡುವವರಿಗೂ ಆತ್ಮಸಾಕ್ಷಿ ಎಂಬುದು ಇರಬೇಕಾಗುತ್ತದೆ. ಸರಕಾರಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡರೆ ಜನ ಬದುಕಲಾಗದ ಸನ್ನಿವೇಶ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಮಾತೆತ್ತಿದರೆ ಕೃಷಿ, ರೈತರ ಕಲ್ಯಾಣ, ಆರೋಗ್ಯ, ನೀರಾವರಿ, ರಸ್ತೆ, ರೈಲ್ವೆಗಳನ್ನು ಅಭಿವೃದ್ಧಿ ಮಾಡಲು, ವಿತ್ತೀಯ ಕೊರತೆ ಕಡಿಮೆ ಮಾಡಲು ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹಾಕುತ್ತಿದ್ದೇವೆ ಅನ್ನುತ್ತಾರೆ. ಇದಂತೂ ಅಪ್ಪಟ ಸುಳ್ಳು. ಸುಳ್ಳು ಹೇಳುತ್ತಿದ್ದೇವೆ ಎಂದು ಗೊತ್ತಿದ್ದೂ ಬಿಜೆಪಿಯವರು ಜನರ ದಿಕ್ಕು ತಪ್ಪಿಸಲೆಂದೇ ಹೊಸ ಹೊಸ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲೆ ಸಂಗ್ರಹಿಸಿದ ಹಣದಿಂದಲೇ ದೇಶದ ಆಭಿವೃದ್ಧಿ ಮಾಡುತ್ತಿದ್ದರೆ, 7 ವರ್ಷಗಳಲ್ಲಿ ಮೋದಿಯವರ ಸರಕಾರ ಹೊಸದಾಗಿ 87 ಲಕ್ಷ ಕೋಟಿ ರೂ.ಗಳಷ್ಟು ಸಾಲ ಮಾಡಿದ್ದು ಯಾಕೆ? ಇದಷ್ಟೆ ಅಲ್ಲ. ಎಲ್ಲ ಟೋಲ್ ಗೇಟುಗಳಲ್ಲಿ ಶುಲ್ಕ ಯಾಕೆ ಹೆಚ್ಚಿಸಲಾಗಿದೆ? ರೈಲ್ವೆ ಫ್ಲ್ಯಾಟ್ ಫಾರಂ  ಶುಲ್ಕ 5 ರೂ ನಿಂದ 50 ರೂ.ಗೆ ಯಾಕೆ ಏರಿಕೆಯಾಯಿತು? ಕೊರೋನ ಔಷಗಳ ಮೇಲೂ ಜಿಎಸ್‌ಟಿಯನ್ನು ಯಾಕೆ ವಿಸಲಾಯಿತು? ಎಂದು ಪ್ರಕಟನೆಯಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News