ಬೈಪಾಸ್ ನಿರ್ಮಾಣಕ್ಕೆ ವಿರೋಧ; ಬೆಂಕಿ ಹಚ್ಚಿಕೊಂಡು, ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ರೈತರು

Update: 2021-11-11 11:40 GMT

ಬೆಳಗಾವಿ, ನ. 11: ನಗರದ ಹೊರವಲಯದಲ್ಲಿ `ಹಲಗಾ-ಮಚ್ಛೆ' ಬೈಪಾಸ್ ರಸ್ತೆ ಕಾಮಗಾರಿಗೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ರೈತರ ಮೇಲೆ ಪೊಲೀಸರು ಮಕ್ಕಳು, ಮಹಿಳೆಯರೆಂದು ನೋಡದೆ ದೌರ್ಜನ್ಯ ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಬೆಳಗ್ಗೆ ದೊಡ್ಡ ಸಂಖ್ಯೆಯಲ್ಲಿ ಪೊಲೀಸರೊಂದಿಗೆ ಹೆದ್ದಾರಿ ಕಾಮಗಾರಿ ಜೆಸಿಬಿ ಯಂತ್ರಗಳ ಜೊತೆಗೆ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ರೈತರು ಮತ್ತು ರೈತ ಮಹಿಳೆಯರು ಆಕ್ಷೇಪಿಸಿದ್ದಾರೆ. ದೌರ್ಜನ್ಯ ಖಂಡಿಸಿ ಇದೇ ವೇಳೆ ರೈತ ಕುಟುಂಬದ ಯುವಕ ಮರವೇರಿದರೆ, ಮತ್ತೋರ್ವ ರೈತ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದರೆ, ಇನ್ನೋರ್ವ ರೈತ ಕೈಯಲ್ಲಿ ಕುಡುಗೋಲು ಹಿಡಿದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ್ದು ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

`ಹಲಗಾ-ಮಚ್ಛೆ' ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದ ವೇಳೆ ರೈತರು ಕಾಮಗಾರಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣಕ್ಕೆ ಈ ಮೊದಲು ಸರ್ವೇ ಮಾಡಿದ ಜಮೀನು ಮಾತ್ರವಲ್ಲದೆ, ಫಲವತ್ತಾದ ಕೃಷಿ ಭೂಮಿಯನ್ನೂ ಬಲವಂತವಾಗಿ ವಶಕ್ಕೆ ಪಡೆಯಲು ಮುಂದಾಗಿದ್ದು, ರೈತರು ಎಲ್ಲಿಗೆ ಹೋಗಬೇಕು ಎಂದು ರೈತರು ಪ್ರಶ್ನಿಸಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಈ ಮೊದಲು ನಡೆಸಿದ ಸರ್ವೇಯಲ್ಲಿ ನಮ್ಮ ಜಮೀನು ಇರಲಿಲ್ಲ. ಇದೀಗ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ರಸ್ತೆ ನಿರ್ಮಾಣ ಕೈಬಿಡಬೇಕು ಎಂದು ಆಗ್ರಹಿಸಿ ರೈತರು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ರೈತರನ್ನು ರಕ್ಷಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರತಿಭಟನೆ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರು ಮಧ್ಯೆ ಮಾತಿನ ವಾಗ್ವಾದ, ಚಕಮಕಿ ನಡೆದಿದ್ದು, ಕಣ್ಣೀರಿಡುತ್ತಲೇ ಚಿಕ್ಕ ಮಕ್ಕಳನ್ನು ಎತ್ತಿಕೊಂಡಿದ್ದ ರೈತ ಮಹಿಳೆಯರು ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೂರಾರು ಪೊಲೀಸರ ಭದ್ರತೆ ಪಡೆದುಕೊಂಡು ರೈತರ ವಿರೋಧದ ಮಧ್ಯೆ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರ ವಿರುದ್ಧ ರೈತರು, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಆದರೂ ಪೊಲೀಸರು, ಎರಡು ಪ್ರತ್ಯೇಕ ವಾಹನದಲ್ಲಿ ರೈತರನ್ನು ವಶಕ್ಕೆ ಪಡೆದಿದ್ದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ.

`ಬೆಳಗಾವಿಯಲ್ಲಿ ರಸ್ತೆ ಕಾಮಗಾರಿ ಸಂದರ್ಭದಲ್ಲಿ ರಾಜ್ಯ ಸರಕಾರ ಪೊಲೀಸರು ಮೂಲಕ ರೈತ ಮಹಿಳೆಯರು ಸೇರಿದಂತೆ ರೈತರ ಮೇಲೆ ನಡೆಸಿದ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಖಾಕಿ ಪಡೆ ದೌರ್ಜನ್ಯ ಖಂಡನೀಯ. ಬಿಜೆಪಿ ಅವಧಿಯಲ್ಲಿ ರೈತರ ಮೇಲೆ ದೌರ್ಜನ್ಯ ಮೀತಿ ಮೀರಿದ್ದು, ಪ್ರತಿಭಟನಾನಿರತ ರೈತರನ್ನು ಕೊಂದ ನೆನಪು ಇನ್ನೂ ಮಾಸಿಲ್ಲ. ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾಕಿದ್ದ ಜನರೇ ಇಂದು ಬೆಳಗಾವಿಯಲ್ಲಿ ದೌರ್ಜನ್ಯ ನಡೆಸಿದ್ದಾರೆ. ಆದರೆ, ಗೃಹ ಸಚಿವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಕೂಡಲೇ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ಸಿಎಂ ರೈತರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಇಲ್ಲವಾದರೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ'

-ಸಚಿನ್ ಮೀಗಾ ಅಧ್ಯಕ್ಷ ಕರ್ನಾಟಕ ಕಿಸಾನ್ ಕಾಂಗ್ರೆಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News