ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆ ಶಂಕೆ: ಹೆಚ್.ಡಿ.ಕುಮಾರಸ್ವಾಮಿ

Update: 2021-11-11 13:07 GMT

ಬೆಂಗಳೂರು: ಜನಧನ್ ಖಾತೆಗಳಿಂದ ತಲಾ 2 ರೂಪಾಯಿ ಲೆಕ್ಕದಲ್ಲಿ ಸುಮಾರು 6,000 ಕೋಟಿ ರೂಪಾಯಿಯಷ್ಟು ಹಣವನ್ನು ಅಕ್ರವಾಗಿ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಜನತಾ ಪರ್ವ 1.0 ಎರಡನೇ ಹಂತದ ಕಾರ್ಯಗಾರ ' ಜನತಾ ಸಂಗಮದ ನಾಲ್ಕನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಷ್ಟು ಹಣದ ಅಕ್ರಮ ವರ್ಗಾವಣೆ ಹಿಂದೆ ಯಾರು ಇದ್ದಾರೆ ಎನ್ನುವ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ ಎಂದರು.

ಬಹುಶಃ ಈ ಎಲ್ಲ ಮಾಹಿತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆನ್ನಾಗಿ ಗೊತ್ತಾಗಿದೆ. ಅವರ ಬಳಿ ಎಲ್ಲ ಮಾಹಿತಿ ಇದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಿಟ್ ಕಾಯಿನ್ ಆರೋಪಿಗೆ ಜಾಮೀನು ಸಿಕ್ಕಿದ್ದು ಹೇಗೆ?

ಬಿಟ್ ಕಾಯಿನ್ ಹಗರಣದ ಮುಖ್ಯ ಆರೋಪಿಗೆ ಜಾಮೀನು ಸಿಕ್ಕಿದ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು, ಆರೋಪಿಗೆ ಜಾಮೀನು ಕೊಡಲು ಖಾತರಿ ಕೊಟ್ಟಿದ್ದು ಯಾರು? ಆತನ ಪರ ವಾದ ಮಂಡಿಸಿದ ವಕೀಲರು ಯಾರು? ಎಂದು ಪ್ರಶ್ನಿಸಿದರು.

ಆರೋಪಿ ಜೈಲಿನಿಂದ ಹೊರಬಂದ ನಂತರ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದಾನೆ. ಮಾಧ್ಯದವರ ಜತೆ ಆ ವ್ಯಕ್ತಿ ಮಾತನಾಡುತ್ತಾನೆ, ನಂತರ ಆಟೋ ಹತ್ತಿ ಹೋಗುತ್ತಾನೆ. ಇದೆಲ್ಲ ನೋಡಿದರೆ ಅದರ ಹಿಂದೆ ಯಾರೋ ಇರುವುದು ಸ್ಪಷ್ಟ ಎಂದರು ಅವರು.

ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಸರ್ಕಾರದ ಪರ ವಕೀಲರು ಎಷ್ಟರ ಮಟ್ಟಿಗೆ ವಾದ ಮಂಡಿಸಿದ್ದಾರೆ ಎನ್ನುವುದೂ ಮುಖ್ಯ. ಇಲ್ಲಿ ಯಾರಿಂದ  ಯಾರ ರಕ್ಷಣೆ ಆಗಿದೆ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಗರಣ ತನಿಖೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; ಸೂಕ್ತ ತನಿಖೆ ಆಗಲಿ ಅಂತ ಅವರು ಪತ್ರ ಬರೆದಿರಬಹುದು. ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಒಳಗೊಂಡಿದ್ದಾರೆ ಎನ್ನುವ ಮಾತೂ ಇದೆ. ಪದೇ ಪದೆ ಹೀಗಾದರೆ ಜನ ಯಾರನ್ನು ನಂಬಬೇಕು. ಒಬ್ಬರಿಂದ ಜನರು ಎಲ್ಲಾ ರಾಜಕಾರಣಿಗಳ ಕಡೆ ಕೈ ತೋರಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭಾರತದ ಮಾನ ಹರಾಜು ಆಗಬಾರದು ಅಂತ ಒಂದಿಷ್ಟು ಜನರ ಮಾಹಿತಿಯನ್ನು ಹೊರಬಿಟ್ಟಿಲ್ಲ ಅಂತ ಕಾಣುತ್ತೆ. ಆದಷ್ಟು ಬೇಗ ಜನತೆಗೆ ಸತ್ಯ ತಿಳಿಯಲಿ. ಪ್ರಧಾನ ಮಂತ್ರಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಅವರಿಗೆ ಮುಜುಗರ ಅಗಿರುವ ಕಾರಣಕ್ಕೆ ಇಡೀ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News