ಲಂಚ-ಮಂಚದ ಮಧ್ಯೆ ಕೊಂಚ ಧ್ಯಾನ

Update: 2021-11-11 19:30 GMT

ಹೊಟ್ಟೆ ತುಂಬಿದವ ವೇದಿಕೆಯ ಮೇಲೆ ನಿಂತು ಲಂಚ, ಭ್ರಷ್ಟಾಚಾರದ ವಿರುದ್ಧ ಭಾಷಣ ಬಿಗಿಯುವುದು ಸುಲಭದ ಕೆಲಸ. ಆದರೆ ಹಸಿದವನ ವೈಯಕ್ತಿಕ ಬದುಕಿನಲ್ಲಿ 'ಮಾಡು ಇಲ್ಲವೆ ಮಡಿ' ಎನ್ನುವಂತಹ ಸನ್ನಿವೇಶ ಎದುರಾದಾಗ, 'ನೀತಿ ತತ್ವವೋ? ಬದುಕೋ?' ಎಂದು ಕೇಳಿದರೆ ಉತ್ತರಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ.


ವಿಧಾನಸೌಧದ ಸಿಬ್ಬಂದಿಗೆ ರಾಜ್ಯದ ಮುಖ್ಯಕಾರ್ಯದರ್ಶಿ ಗಳು ಇತ್ತೀಚೆಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ಬೋಧಿಸಿದ ಘಟನೆಯ ಹಿನ್ನೆಲೆಯಲ್ಲಿ ಖ್ಯಾತ ಹಿರಿಯ ಪತ್ರಕರ್ತರೊಬ್ಬರು ವಿಧಾನಸೌಧದ ಮೊಗಸಾಲೆಯಲ್ಲಿ ಕಂಡುಬರುತ್ತಿರುವ ಲಂಚದ ಹೊಸ ಹೊಸ ರೂಪಗಳ ಕುರಿತು ರಾಜ್ಯದ ಜನತೆಯ ಗಮನ ಸೆಳೆದರು. ಇದನ್ನು ಗಮನಿಸುತ್ತಿದ್ದಂತೆ ನನಗೆ ಕೌಟಿಲ್ಯ ನೆನಪಾದ.

ಯಾಕೆಂದರೆ ನಾವು ಕೌಟಿಲ್ಯನ ಬಗ್ಗೆ, ಆತ ಚಿತ್ರಿಸುವ ಸಮಾಜದ ಬಗ್ಗೆ ಹಾಗೂ ಭಾರತೀಯ ಸಂಸ್ಕೃತಿಯ ಪ್ರಾಚೀನತೆಯ ಬಗ್ಗೆ ಹೆಮ್ಮೆ ಪಡಬಹುದಾದಲ್ಲಿ ಈ ದೇಶದಲ್ಲಿ ಲಂಚದ, ಭ್ರಷ್ಟಾಚಾರದ ಪ್ರಾಚೀನತೆಯ ಬಗ್ಗೆ ಕೂಡ ನಾವು ಧಾರಾಳವಾಗಿ ಹೆಮ್ಮೆಪಡಬಹುದು: ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ಕೌಟಿಲ್ಯ ತನ್ನ ವಿಶ್ವವಿಖ್ಯಾತ ಕೃತಿಯಾಗಿರುವ ಅರ್ಥಶಾಸ್ತ್ರದಲ್ಲಿ ಲಂಚಕ್ಕೆ ಹಾದಿಮಾಡುವ ಭ್ರಷ್ಟಾಚಾರದ ನಲ್ವತ್ತು ರೀತಿಗಳ ಉದ್ದವಾದ ಒಂದು ಪಟ್ಟಿಯನ್ನೇ ನೀಡಿದ್ದ. ಕಾಲ ಬದಲಾದಂತೆ ಲಂಚದ ರೂಪ, ಸ್ವರೂಪ ಬದಲಾಗುತ್ತಾ ಬಂದಿದೆ. ಗುಲ್ವಾಡಿ ವೆಂಕಟರಾಯರ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ 'ಇಂದಿರಾಬಾಯಿ' (1899)ಯಲ್ಲಿ ಬ್ರಿಟಿಷ್ ಆಡಳಿತದ ಕರ್ನಾಟಕದಲ್ಲಿ ಸರಕಾರದ ಯಾವ್ಯಾವ ಅಧಿಕಾರಿಗಳಿಗೆ ಎಷ್ಟೆಷ್ಟು ಪವನ್ ಚಿನ್ನ ಲಂಚ ನೀಡಬೇಕಾಗುತ್ತಿತ್ತು ಎಂಬ ವಿವರಣೆಗಳಿವೆ. ಲಂಚ ಎನ್ನುವುದು ಎಂತಹ ಒಂದು ಅದ್ಭುತ ರೂಪಾಂತರಿ ಎಂದರೆ ಎಷ್ಟೋ ಸಂದರ್ಭಗಳಲ್ಲಿ ಲಂಚ ಯಾವುದು? ಕೊಡುಗೆ (ಗಿಫ್ಟ್) ಯಾವುದು? ಕಾಣಿಕೆ ಯಾವುದು? ಕಮಿಷನ್ ಯಾವುದು? ಕಿಕ್‌ಬ್ಯಾಕ್ ಯಾವುದು? ಟಿಪ್ಸ್ ಯಾವುದು? ಎಂದು ಪತ್ತೆ ಹಚ್ಚುವುದೇ ಸಾಧ್ಯವಾಗುವುದಿಲ್ಲ. ಲಂಚ ಕೊಟ್ಟವರು ಯಾರು, ತೆಗೆದುಕೊಂಡವರು ಯಾರು? ಅಂತ ಕೇಳಿದರೆ ಅಲ್ಲಿ ಕೊಟ್ಟವರೂ ಕಾಣಿಸುವುದಿಲ್ಲ, ತೆಗೆದುಕೊಂಡವರೂ ಕಾಣಿಸುವುದಿಲ್ಲ!

ಕಳೆದ ಸುಮಾರು ನಾಲ್ಕು, ಐದು ದಶಕಗಳಲ್ಲಿ ನನ್ನ ಗಮನಕ್ಕೆ ಬಂದ ಲಂಚದ ಕೆಲವು ರೂಪಾಂತರಗಳು, ಅವಸ್ಥಾಂತರಗಳು, ಸ್ಥಿತ್ಯಂತರಗಳು ನೆನಪಾಗುತ್ತವೆ. ಕಾಲೇಜೊಂದರ ಆರು ಮಂದಿ ಶಿಕ್ಷಕರು ಒಟ್ಟಾಗಿ ಮನೆ ನಿವೇಶನಗಳಿಗಾಗಿ ಒಂದಷ್ಟು ಜಮೀನು ಕೊಂಡುಕೊಂಡರು. ಆ ಜಮೀನು ಪ್ಲಾಟಿಂಗ್ ಆಗಿ ಕನ್ವರ್ಷನ್ ಆಗಬೇಕಾಗಿತ್ತು. ಆರು ಮಂದಿಯಲ್ಲಿ ಸಾಹಸಿಯಾದ ಒಬ್ಬರು ಅಗತ್ಯವಿದ್ದ ದಾಖಲೆಗಳೊಂದಿಗೆ ಸಂಬಂಧಿತ ಅಧಿಕಾರಿಯ ಕಚೇರಿಗೆ ಅಲೆದರು. ಅಲ್ಲೊಬ್ಬ 'ಪರೋಪಕಾರಿ'ಯಾದ 'ಸಹಾಯಕ' ಅವರ 'ನೆರವಿ'ಗೆ ಬಂದ. ವ್ಯಾಪಾರ ಕುದುರಿಸಿದ. ನಿಗದಿತ ದಿನದಂದು ನಿಗದಿತ ವೇಳೆಗೆ ಅಧಿಕಾರಿ ನಗರದ ಪೂರ್ವ ನಿರ್ಧರಿತ ಜವುಳಿ ಮಳಿಗೆಯೊಂದಕ್ಕೆ ಕುಟುಂಬ ಸಮೇತ ಆಗಮಿಸಿದ. ನಿಗದಿತ ಮೊತ್ತದ ವಿವಿಧ ಜವುಳಿ ಸೆಲೆಕ್ಷನ್ ಮುಗಿಯಿತು. ಪಕ್ಕದಲ್ಲೇ ನಿಂತಿದ್ದ ಶಿಕ್ಷಕ ಮಹಾಶಯರು ಮುಂದಕ್ಕೆ ನುಗ್ಗಿ ಕ್ಯಾಶ್‌ಬಿಲ್ ತೆಗದುಕೊಂಡರು. ಜವುಳಿ ಖರೀದಿಸಿದ ಕುಟುಂಬ ತಾನು ಬಂದಿದ್ದ ವಾಹನ ಏರಿ ಹೊರಟು ಹೋಯಿತು. ಬಿಲ್ ತೆಗೆದುಕೊಂಡವರು ಕ್ಯಾಶ್ ಪಾವತಿಸಿ ಮನೆಗೆ ಬಂದರು. ಕೆಲವೇ ದಿನಗಳಲ್ಲಿ, ಅವರಿಗೆ ಬೇಕಾಗಿದ್ದ ಆದೇಶ ಪತ್ರವೂ ಬಂತು!

1970ರ ದಶಕದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿ ಒಂದು ನಿಯಮವಿತ್ತು. ಒಂದು ಶೈಕ್ಷಣಿಕ ವರ್ಷದಲ್ಲಿ 120 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಸೇವೆ ಸಲ್ಲಿಸಿದ ತಾತ್ಕಾಲಿಕ ಕಾಲೇಜು ಶಿಕ್ಷಕರಿಗೆ ಬೇಸಿಗೆ ರಜೆಯ ವೇತನ ನೀಡಬಹುದೆನ್ನುವುದೇ ಆ ನಿಯಮದ ತಿರುಳಾಗಿತ್ತು. ಈ ನಿಯಮದ ಪ್ರಕಾರ, ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ನನ್ನ ಕಾಲೇಜು ದಿನಗಳ ಸಹಪಾಠಿಯೊಬ್ಬರಿಗೆ ಆ ವೇತನ ಬರಬೇಕಾಗಿತ್ತು. ಅಂದಿನ ದಿನಗಳಲ್ಲಿ ಅದು ಸುಮಾರು 1,200-1,500 ರೂಪಾಯಿ ಇದ್ದಿರಬಹುದು. ಅವರು ಸಂಬಂಧಿತ ಕೇಸ್ ವರ್ಕರನ್ನು ಭೇಟಿಯಾದರು. ಆತ ಮಧ್ಯಾಹ್ನದ ಲಂಚ್‌ಗೆ ಹೊಟೇಲೊಂದರಲ್ಲಿ ಅವರನ್ನು ಕೂಡಿಕೊಂಡ. ಲಂಚ್ ಮುಗಿಯಿತು. ಲಂಚದ ಮಾತೇ ಇಲ್ಲ! ಆಗಿನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ ಸರಕಾರದ ಆಜ್ಞೆ ಬಂದಿರಲಿಲ್ಲ. ಊಟವಾದ ಮೇಲೆ ಸಿಗರೇಟ್ ಸೇದುವ ಅಭ್ಯಾಸವಿದ್ದ ನನ್ನ ಗೆಳೆಯ ಪ್ಯಾಕ್‌ನಿಂದ ಸಿಗರೇಟೊಂದನ್ನು ತೆಗೆದು ''ಸ್ಮೋಕ್ ಮಾಡ್ತೀರಾ'' ಎಂದ. ಇವನಿಗೆ 'ಸಹಕರಿಸಲು' ಬಂದ ಆತ ಹೌದೆಂದು ಒಂದು ಸಿಗರೇಟ್ ತೆಗೆದುಕೊಂಡ. ಆತ ಮ್ಯಾಚ್‌ಬಾಕ್ಸ್ ಮುಂದುಮಾಡಿದ. ಈತ ಕಡ್ಡಿಗೀರಿ ಸಿಗರೇಟು ಹಚ್ಚಿದ. ಬೆಂಕಿ ಪೆಟ್ಟಿಗೆಯೊಳಗೆ ಬೆರಳೆಣಿಕೆಯ ಕಡ್ಡಿಗಳಷ್ಟೇ ಇದ್ದವು. ಈತ ಪೆಟ್ಟಿಗೆಯನ್ನು ಹಿಂದಕ್ಕೆ ಕೊಡುವ ಮೊದಲು ಅದಾಗಲೇ ನಾಲ್ಕು ಮಡಿಕೆ ಮಾಡಿ ಇಟ್ಟಿದ್ದ ಏನನ್ನೋ ಅದರ ಒಳಗಿಟ್ಟು ಮರಳಿಸಿದ. ಆತ ಅದನ್ನು ಅರ್ಧ ತೆರೆದು ನೋಡಿ ಖಚಿತಪಡಿಸಿಕೊಂಡ. ಆ ಪೆಟ್ಟಿಗೆಯೊಳಗೆ ಮಡಚಿ ಮಡಚಿ ಇಟ್ಟ ನೂರು ರೂಪಾಯಿಯ ಒಂದು ನೋಟು ಮುದುಡಿ ಮಲಗಿತ್ತು! ಮುಂದೆ ನನ್ನ ಗೆಳೆಯನ ಕೆಲಸವಾಯಿತೆಂದು ಬೇರೆ ಹೇಳಬೇಕಾಗಿಲ್ಲ!

ನಯನುಡಿಯ ಪರಿಭಾಷೆಯಲ್ಲಿ ಲಂಚ ಅನೂಹ್ಯ ರೂಪಗಳನ್ನು, ಬಾಹ್ಯವಾಗಿ ಗುರುತಿಸಲಾಗದ ಸಾಂಸ್ಥೀಕರಣವನ್ನು ಪಡೆಯಬಹುದು.
ಉದಾಹರಣೆಗೆ ಬೃಹತ್ ಕಂಪೆನಿಯೊಂದು ಗೊತ್ತುಪಡಿಸುವ ದೊಡ್ಡ ಮಟ್ಟದ (ಕೆಲವು ಕೋಟಿ ರೂಪಾಯಿಯ) 'ಬಿಸಿನೆಸ್ ಟಾರ್ಗೆಟ್' 'ರೀಚ್' ಮಾಡಿದ ಅಧಿಕಾರಿಗೆ ವಿದೇಶದ ವಿಲಾಸಿ ರಿಸಾರ್ಟ್‌ವೊಂದರಲ್ಲಿ ಒಂದು ವಾರದ 'ಹಾಲಿಡೇ' ಮತ್ತು ಅಲ್ಲಿ ವಿಮಾನ ನಿಲ್ದಾಣದಲ್ಲಿ ಆತನನ್ನು 'ರಿಸೀವ್' ಮಾಡಲು ಬರುವ ಚೆಲುವೆ ಆತನನ್ನು ರಿಸಾರ್ಟಿಗೆ ಕರೆದುಕೊಂಡು ಹೋಗಿ ಅಲ್ಲಿ ಒಂದು ವಾರ ಪೂರ್ತಿ ಆತನ ಜೊತೆಗೆ ಉಳಿದುಕೊಂಡು ಆತನಿಗೆ ಹಾಸಿಗೆ ಸುಖ ನೀಡುವ ಖಾತರಿ! ಇದನ್ನು 'ಬ್ರೈಬರಿ' ಎನ್ನಲಾದೀತೆ? ಮಧ್ಯವರ್ತಿಗೆ ಲಂಚ, ನಿಕಟವರ್ತಿಗೆ ಮಂಚ, ಸಹವರ್ತಿಗೆ ಕೊಂಚ ಎನ್ನುವ ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಷ್ಟರನ್ನು ಸುಲಭವಾಗಿ ಹಿಡಿಯಲಾದೀತೇ? ಅಥವಾ ಸಾಕಷ್ಟು ದೊಡ್ಡ ಮೊತ್ತದ ಟಿ.ಎ., ಡಿ.ಎ., ವಿಮಾನಯಾನದ ಸವಲತ್ತು ಹಾಗೂ ಪಂಚತಾರಾ ಹೋಟೆಲ್ ವಾಸ್ತವ್ಯದ ಸುಖ ನೀಡುವ ಸೆಮಿನಾರುಗಳ, ಸಮ್ಮೇಳನಗಳ ರೂಪದಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆಯನ್ನು ಲಂಚ, ಭ್ರಷ್ಟಾಚಾರ ಎನ್ನಲಾದಿತೇ? ಆದರೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುವ 'ಪರಸ್ಪರ ಭಾವಯಂತ' ಇಂತಹ ಹಲವು ರೂಪಗಳಲ್ಲಿ ಪ್ರಕಟವಾಗುತ್ತಿರುತ್ತದೆ. ''ನೀನು ನನ್ನನ್ನು ಕರೆ, ನಾನು ನಿನ್ನನ್ನು ಕರೆಯುತ್ತೇನೆ'' ಎನ್ನುವ ತತ್ವಕ್ಕೆ ಅನುಗುಣವಾಗಿ ಉನ್ನತ ಮಟ್ಟದ ಬಹಳಷ್ಟು ವಿಚಾರಗೋಷ್ಠಿಗಳು, ತತಾಕಥಿತ ವಿಚಾರಸಂಕಿರಣಗಳು ನಡೆಯುತ್ತಿರುತ್ತವೆ. ಇವು 'ಹೈಲೀ ಎಜುಕೇಟೆಡ್' ಮಾತಾಯಿತು. ಆದರೆ ಅಷ್ಟೊಂದು ಶಿಕ್ಷಣವಿಲ್ಲದವರ ಪಾಡೇನು?

ಈ ದೇಶದ ರಾಜ್ಯವೊಂದರಲ್ಲಿ ನಡೆದ ನೂರಾರು ಕೋಟಿ ರೂ.ಗಳ ಹಗರಣದ ಬಗ್ಗೆ ಮಾತನಾಡುತ್ತಾ ಖ್ಯಾತ ರಾಜಕೀಯ ಮನಃಶಾಸ್ತ್ರಜ್ಞ, ಸಮಾಜ ವಿಮರ್ಶಕ ಪ್ರೀತೀಶ್ ನಂದಿ ಹೇಳಿದ ಮಾತುಗಳು ಇಲ್ಲಿ ಉಲ್ಲೇಖಾರ್ಹ. ರಾಜಕಾರಣಿಯೊಬ್ಬನ ಕುಟುಂಬದಲ್ಲಿ, ಆಪ್ತರಲ್ಲಿ ಉನ್ನತ ಅಧ್ಯಯನ ನಡೆಸಿದವರಿದ್ದಲ್ಲಿ ಆತ ಅವರನ್ನು ವಿದೇಶದಲ್ಲಿ ರಾಯಭಾರಿಯಾಗಿಯೋ, ದೇಶದೊಳಗೆ ಯಾವುದೋ ಉನ್ನತ ಸಂಸ್ಥೆ ಅಥವಾ ಅಕಾಡಮಿಯಲ್ಲಿ ಸೂಕ್ತ ಸ್ಥಾನವನ್ನು ನೀಡಿಯೋ ಅವರಿಗೆ 'ಸ್ವಜನಪಕ್ಷಪಾತ' ತೋರಿಸಬಲ್ಲ; 'ಸಹಾಯ' ಮಾಡಬಲ್ಲ.

ಆದರೆ ತನ್ನವರೆಲ್ಲ ನಾಲ್ಕನೇ ತರಗತಿ ಅಥವಾ ಏಳನೇ ತರಗತಿವರೆಗೆ ಮಾತ್ರ ಓದಿದವರಾಗಿದ್ದಲ್ಲಿ...?! ಆಗ ಆತ ಅವರಿಗೆ ಹಣದ ಮೂಲಕವಷ್ಟೇ 'ನೆರವಾಗ'ಬಲ್ಲ. ಆಗ ಆತನಿಗೆ ಬೃಹತ್ ಮೊತ್ತದ ನೇರ ಭ್ರಷ್ಟಾಚಾರಕ್ಕೆ ಮೊರೆ ಹೋಗುವುದಲ್ಲದೆ ಬೇರೆ ದಾರಿ ಇರುವುದಿಲ್ಲ.
ಲಂಚವನ್ನು ಸಮರ್ಥಿಸುವುದು ರಾಜಕೀಯವಾಗಿ ಸರಿಯಲ್ಲ; ಅದು 'ಪೊಲಿಟಿಕಲಿ ಇನ್‌ಕರೆಕ್ಟ್'. ಅಂದರೆ, ನೈತಿಕವಾಗಿಯೂ ತಪ್ಪು. ಆದರೆ ಲಂಚದ ವಿಷಯದಲ್ಲಿ ಪೊಲಿಟಿಕಲಿ ಇನ್‌ಕರೆಕ್ಟ್ ಆದ ಒಂದು ವಾದವನ್ನು ಕೂಡಾ ನಾವು ಒಪ್ಪಬೇಕಾಗಬಹುದು- ಲಂಚ, ಇತಿಹಾಸದ ಉದ್ದಕ್ಕೂ ನಡೆದು ಬಂದ ಹಾದಿಯನ್ನು ಗಮನಿಸಿದರೆ.

ಯಾಕೆಂದರೆ ಯಾವುದೇ ಸರಕಾರದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೇಸ್ ವರ್ಕರ್ ನಿಜವಾದ ಸುಪ್ರೀಂಕೋರ್ಟ್. ಆತ ತನ್ನ ಹಂತದಲ್ಲಿ ಒಂದು ಅರ್ಜಿಗೆ ಕುಟ್ಟಿ ಇಟ್ಟು ಕುಳಿತನೆಂದರೆ ಅರ್ಜಿದಾರ ಸತ್ತಂತೆಯೇ. ಒಂದು ಪ್ರಕರಣದಲ್ಲಿ ಒಬ್ಬರ ಒಂದು ಅರ್ಜಿ ಆರು ಮೇಜುಗಳನ್ನು ದಾಟಿ ಏಳನೆಯ ಮೇಜನ್ನು ತಲುಪಬೇಕಾಗಿತ್ತು. ಒಂದರಿಂದ ಐದು ಮೇಜುಗಳವರೆಗೆ ಅರ್ಜಿ ಸಲೀಸಾಗಿ ಸಾಗುವಂತೆ ಅವರು 'ನೋಡಿಕೊಂಡ'ರಾದರೂ, ಆರನೆಯ ಮೇಜು ಅವರ ಪಾಲಿಗೆ ಚೀನಾದ ಮಹಾಗೋಡೆಯಾಯಿತು. ಆ ಮೇಜಿನ ಮಹಾ ಸರದಾರ ಅವನದೇ ಆದ ಯಾವುದೋ ಕಾರಣಕ್ಕಾಗಿ ಅರ್ಜಿಯನ್ನು ಮುಂದಕ್ಕೆ ಕಳುಹಿಸಲು ಜಪ್ಪೆಂದರೂ ಒಪ್ಪಲಿಲ್ಲ. ಆಗ ಅವರ ನೆರವಿಗೆ ಬಂದದ್ದು ಚಾಣಕ್ಯನ 'ಅರ್ಥ'ಶಾಸ್ತ್ರ. ಈ ನೆರವು ಅವರಿಗೆ ದೊರಕದೇ ಹೋಗಿದ್ದಲ್ಲಿ ಅವರ ಕುಟುಂಬ ಬೀದಿಪಾಲಾಗಬಹುದಾಗಿತ್ತು.
ಹೊಟ್ಟೆ ತುಂಬಿದವ ವೇದಿಕೆಯ ಮೇಲೆ ನಿಂತು ಲಂಚ, ಭ್ರಷ್ಟಾಚಾರದ ವಿರುದ್ಧ ಭಾಷಣ ಬಿಗಿಯುವುದು ಸುಲಭದ ಕೆಲಸ. ಆದರೆ ಹಸಿದವನ ವೈಯಕ್ತಿಕ ಬದುಕಿನಲ್ಲಿ 'ಮಾಡು ಇಲ್ಲವೆ ಮಡಿ' ಎನ್ನುವಂತಹ ಸನ್ನಿವೇಶ ಎದುರಾದಾಗ, 'ನೀತಿ ತತ್ವವೋ? ಬದುಕೋ?' ಎಂದು ಕೇಳಿದರೆ ಉತ್ತರಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ.

bhaskarrao599@gmail.com

Writer - ಡಾ. ಬಿ. ಭಾಸ್ಕರರಾವ್

contributor

Editor - ಡಾ. ಬಿ. ಭಾಸ್ಕರರಾವ್

contributor

Similar News