ಜಿಲ್ಲಾಧಿಕಾರಿಗಳು ಆದೇಶಿಸಿದರೂ ತಲಕಾವೇರಿಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ: ಗ್ರಾಮಸ್ಥರ ಅಸಮಾಧಾನ

Update: 2021-11-12 13:56 GMT

ಮಡಿಕೇರಿ ನ.12 : ಇತ್ತೀಚೆಗೆ ಭಾಗಮಂಡಲದಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ” ಕಾರ್ಯಕ್ರಮದಲ್ಲಿ ತಲಕಾವೇರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಇಲ್ಲಿಯವರೆಗೆ ಸಂಚಾರ ಆರಂಭಗೊಂಡಿಲ್ಲವೆಂದು ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಇಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ತಕ್ಷಣ ಸರಕಾರಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದರು.   

ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ಪ್ರತಿದಿನ ಭಕ್ತರಿಗೆ, ಈ ಮಾರ್ಗದ ಮೂಲಕ ಸಂಪರ್ಕ ಹೊಂದಿರುವ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಲಾಭ, ನಷ್ಟದ ಲೆಕ್ಕಾಚಾರ ಮಾಡದೆ ಸಾರ್ವಜನಿಕರ ಸೇವೆಗಾಗಿಯೇ ಮೀಸಲಿರುವ ಸರಕಾರಿ ಬಸ್‍ನ್ನು ತಕ್ಷಣ ನಿಯೋಜಿಸಬೇಕೆಂದು ಸ್ಥಳೀಯರಾದ ಸುನಿಲ್ ಪತ್ರಾವೋ ಒತ್ತಾಯಿಸಿದರು.

ಕೋವಿಡ್ ಪರಿಸ್ಥಿತಿಯ ಹಿನ್ನೆಲೆ ನಷ್ಟದ ಭೀತಿಯಿಂದ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ತಲಕಾವೇರಿ ಮಾರ್ಗದಲ್ಲಿ ಇನ್ನೂ ಕೂಡ ಖಾಸಗಿ ಬಸ್ ಸಂಚಾರ ಆರಂಭವಾಗದೆ ಇರುವುದರಿಂದ ಜನರ ಹಿತದೃಷ್ಟಿಯಿಂದ ಸರಕಾರಿ ಬಸ್ ಸಂಚಾರ ಆರಂಭಿಸುವುದು ಸೂಕ್ತವೆಂದು ತಿಳಿಸಿದರು.

ಪವಿತ್ರ ಕ್ಷೇತ್ರಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ಭಕ್ತರಿಗೆ ಖಾಸಗಿ ವಾಹನಗಳಲ್ಲಿ ತಲಕಾವೇರಿಗೆ ತೆರಳಲು ಸಾಧ್ಯವಾಗದೆ ಕಷ್ಟ ಅನುಭವಿಸುವಂತ್ತಾಗಿದೆ. "ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ" ಸಭೆಯಲ್ಲಿ ಬಸ್ ಕೊರತೆಯ ಕುರಿತು ಗಮನ ಸೆಳೆಯಲಾಗಿದೆ. ಜಿಲ್ಲಾಧಿಕಾರಿಗಳು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರೂ ಇಲ್ಲಿಯವರೆಗೆ ಬಸ್ ಸಂಚಾರ ಆರಂಭÀಗೊಂಡಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ತಲಕಾವೇರಿ ಕ್ಷೇತ್ರಕ್ಕೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು. 

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಕೆ.ಯು.ಹ್ಯಾರೀಸ್ ಚೆಟ್ಟಿಮಾನಿ, ಅಬ್ದುಲ್ ಲತೀಫ್ ಭಾಗಮಂಡಲ, ಬಷೀರ್ ಚೇರಂಬಾಣೆ, ತಲಕಾವೇರಿಯ ವಿದ್ಯಾರ್ಥಿಗಳಾದ ಕುಶನ್ ಹಾಗೂ ಪುನೀತ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News