ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿ ಹೋರಾಟ : ಪ್ರಿಯಾಂಕಾ ಗಾಂಧಿ

Update: 2021-11-15 04:08 GMT
ಪ್ರಿಯಾಂಕಾ ಗಾಂಧಿ (ಫೋಟೊ : PTI)

ಮೀರಠ್: ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರವಿವಾರ ಪ್ರಕಟಿಸಿದ್ದಾರೆ.

ಇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ತನ್ನ ಸಮರ್ಪಣಾ ಭಾವದ ಎಲ್ಲ ಕಾರ್ಯಕರ್ತರಿಗೆ ಅವಕಾಶ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬುಲಂದ್‌ ಶಹರ್‌ನಲ್ಲಿ ರವಿವಾರ ಪ್ರತಿಜ್ಞಾ ಸಮ್ಮೇಳನದ ಅಂಗವಾಗಿ ಆಗ್ರಾ, ಅಮೇಥಿ ಮತ್ತು ಅಲೀಗಢ ವಲಯಗಳ 7000 ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಯಾವ ಮುಖಂಡರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಈ ಕಾರಣದಿಂದ ಸರ್ಕಾರ ಜನರ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯದ ಅರ್ಥವನ್ನು ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು. ದೇಶದ ಸಂವಿಧಾನದ ಕರಡು ಸಿದ್ಧಪಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಹೊಗಳಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಇಂದಿರಾಗಾಂಧಿ, ಜವಾಹರಲ್‌ ಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದರು.

ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ವಿಮಾನದಲ್ಲಿ ಭೇಟಿ ಮಾಡಿದ್ದರು ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರ ತಾಯಿ ಮೃತಪಟ್ಟ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಮಾಯಾವತಿಯನ್ನು ಭೇಟಿ ಮಾಡಿದ್ದರು. ಇದು ಈ ಪಕ್ಷಗಳ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News