ಇವರ ಅಧಿಕಾರಾವಧಿಯ ತರಾತುರಿ ವಿಸ್ತರಣೆಯೇಕೆ?

Update: 2021-11-16 05:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಕ್ಕೂಟ ಸರಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಈ.ಡಿ.) ಮುಖ್ಯಸ್ಥರ ಅಧಿಕಾರಾವಧಿಯನ್ನು ಎರಡು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಿದೆ. ಇನ್ನೆರಡು ವಾರಗಳಲ್ಲಿ ಸಂಸತ್ ಅಧಿವೇಶನ ನಡೆಯಲಿದ್ದು ಅದನ್ನು ಕಡೆಗಣಿಸಿ ಸುಗ್ರೀವಾಜ್ಞೆ ಮೂಲಕ ಅಧಿಕಾರಾವಧಿ ವಿಸ್ತರಣೆ ಮಾಡಿರುವದರ ಔಚಿತ್ಯದ ಬಗ್ಗೆ ಪ್ರತಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಬಿಐ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಗಾಗಿ ದಿಲ್ಲಿ ವಿಶೇಷ ಪೊಲೀಸ್ ವ್ಯವಸ್ಥೆ-2021 ಮತ್ತು ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಗಾಗಿ ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ)ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ.

ರಾಜಕೀಯ ಎದುರಾಳಿಗಳನ್ನು ಮತ್ತು ಪಕ್ಷದೊಳಗಿನ ಭಿನ್ನಮತೀಯರನ್ನು ಹಣಿಯಲು ಮತ್ತು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತ ಬಂದ ಸರಕಾರದ ನಡೆ ಸಹಜವಾಗಿ ಸಂದೇಹಕ್ಕೆ ಕಾರಣವಾಗಿರುವುದರಲ್ಲಿ ಅಚ್ಚರಿಯಿಲ್ಲ.

ಭಾರತವನ್ನು ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುವುದಾಗಿ ಬಹಿರಂಗವಾಗಿ ಹೇಳುತ್ತಾ ಪ್ರತಿಪಕ್ಷ ಮುಕ್ತ ಭಾರತವನ್ನಾಗಿ, ಪ್ರಜಾಪ್ರಭುತ್ವ ಮುಕ್ತ ಭಾರತವನ್ನಾಗಿ ಮಾಡಲು ಹೊರಟಿರುವ ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದಿರುವ ಪಕ್ಷ ಅದಕ್ಕಾಗಿ ಸ್ವಾಯತ್ತ ಸಂಸ್ಥೆಗಳನ್ನು ಅತ್ಯಂತ ಜಾಣತನದಿಂದ ಬಳಸಿಕೊಳ್ಳುತ್ತಾ ಬಂದಿದೆ. ಯಾವುದೇ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆದು ಅಲ್ಲಿ ಪ್ರತಿಪಕ್ಷಗಳು ಬಹುಮತ ಗಳಿಸಿದರೆ ಅದನ್ನು ಕ್ರೀಡಾ ಮನೋಭಾವದಿಂದ ಸ್ವಾಗತಿಸುವ ಬದಲಾಗಿ ಚುನಾಯಿತ ಶಾಸಕರನ್ನು ಬ್ಲಾಕ್‌ಮೇಲ್ ಮಾಡಿ ಪಕ್ಷಾಂತರ ಮಾಡಿಸಲು ಸಿಬಿಐ, ಜಾರಿ ನಿರ್ದೇಶನಾಲಯಗಳಂತಹ ಸಂಸ್ಥೆಗಳನ್ನು ಸರಕಾರ ಬಳಸಿಕೊಳ್ಳುತ್ತಾ ಬಂದಿದೆ.ಮಧ್ಯಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಶಾಲಿಯಾಗಿ ಸರಕಾರ ರಚನೆ ಮಾಡಿತು. ಆದರೆ ಮುಂದೆ ಕೆಲವೇ ತಿಂಗಳುಗಳಲ್ಲಿ ಅಲ್ಲಿನ ಚುನಾಯಿತ ಸರಕಾರವನ್ನು ಇದೇ ಕುತಂತ್ರದ ಮೂಲಕ ಬುಡಮೇಲು ಮಾಡಿ ಶಿವರಾಜ್‌ಸಿಂಗ್ ಚವ್ಹಾಣರನ್ನು ಮುಖ್ಯಮಂತ್ರಿ ಸ್ಥಾನದ ಮೇಲೆ ಕೂರಿಸಿತು. ಇದಕ್ಕೆಲ್ಲ ಸಹಕರಿಸಿದವರ ಅಧಿಕಾರ ವಿಸ್ತರಣೆಗೆ ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತಂದಿರುವುದು ಜನತಾಂತ್ರಿಕ ತತ್ವಗಳಿಗೆ ಮಾಡಿದ ಅಪಚಾರವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.

ಜನರಿಂದ ಚುನಾಯಿತವಾದ ಸಂಸತ್ತನ್ನು ಕಡೆಗಣಿಸಿ ತನ್ನ ಮನ ಬಂದಂತೆ ಕಾನೂನಿಗೆ ಹಿಂಬಾಗಿಲ ಮೂಲಕ ತಿದ್ದುಪಡಿ ತರುವುದು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಬುಡಮೇಲು ಮಾಡಿದಂತಲ್ಲದೆ ಬೇರೇನೂ ಅಲ್ಲ. ಈ ಎರಡೂ ಸ್ವಾಯತ್ತ ಸಂಸ್ಥೆಗಳಲ್ಲಿ ತನ್ನ ಮಾತು ಕೇಳುವ ಕೈಗೊಂಬೆಗಳನ್ನು ಕೂರಿಸಿ ಅವರ ಮೂಲಕ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ತಂತ್ರ ಅಧಿಕಾರ ದುರುಪಯೋಗ ಅಲ್ಲದೇ ಬೇರೇನೂ ಅಲ್ಲ. ರಾಜಕೀಯ ವಿರೋಧಿಗಳ ಮೇಲೆ ಮತ್ತು ಪಕ್ಷದೊಳಗಿನ ಭಿನ್ನಮತೀಯರ ಮೇಲೆ ನಡೆಯುವ ದಿಢೀರ್ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದಾಳಿಗಳು ಆಕಸ್ಮಿಕವಲ್ಲ ಹಾಗೂ ಸಹಜ ಕಾನೂನು ಪ್ರಕ್ರಿಯೆ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿ ಕೂಡ ಸಂದೇಹಾಸ್ಪದ ಎಂದರೆ ತಪ್ಪಿಲ್ಲ. ಇದನ್ನೆಲ್ಲ ಸುಗಮವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗಲೆಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಅಧಿಕಾರಾವಧಿಯನ್ನು ತರಾತುರಿಯಲ್ಲಿ ವಿಸ್ತರಿಸಲಾಗಿದೆ.
ಸಂಸತ್ ಅಧಿವೇಶನದ ದಿನಾಂಕ ನಿಗದಿಯಾಗಿ ಪ್ರಕಟಿಸಿದ ನಂತರ ಮೋದಿ ನೇತೃತ್ವದ ಒಕ್ಕೂಟ ಸರಕಾರ ಸಂಸತ್ತಿನ ಮುಂದೆ ಈ ವಿಷಯವನ್ನು ತಂದು ಕಾನೂನಿಗೆ ತಿದ್ದುಪಡಿ ತರುವ ಬದಲು ಹಿತ್ತಲ ಬಾಗಿಲಿನಿಂದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ವಿಸ್ತರಿಸಿರುವ ಔಚಿತ್ಯವೇನು?

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ತನ್ನ ರಾಜಕೀಯ ಹಿತಾಸಕ್ತಿಯ ರಕ್ಷಣೆಗಾಗಿ ಮನ ಬಂದಂತೆ ಬಳಸಿಕೊಳ್ಳುತ್ತಿರುವ ಬಗ್ಗೆ ಕೆಲವು ರಾಜ್ಯ ಸರಕಾರಗಳೂ ಆಕ್ಷೇಪಿಸಿವೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳು ತಮ್ಮ ರಾಜ್ಯದಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡುವುದಿಲ್ಲ ಎಂದು ತೀರ್ಮಾನಿಸಿವೆ. ಈ ವಿವಾದ ಈಗ ಸುಪ್ರೀಂ ಕೋರ್ಟಿನ ಮುಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಮತ್ತು ಶಿಸ್ತು ಪಾಲನೆ ಸಂವಿಧಾನದ ಪ್ರಕಾರ ರಾಜ್ಯಗಳ ಪಟ್ಟಿಗೆ ಸೇರಿದೆ. ಹೀಗಾಗಿ ಯಾವುದೇ ರಾಜ್ಯದಲ್ಲಿ ಸಿಬಿಐ ಇಲ್ಲವೇ ಜಾರಿ ನಿರ್ದೇಶನಾಲಯ ನೇರವಾಗಿ ಕಾರ್ಯಾಚರಣೆ ನಡೆಸುವಂತಿಲ್ಲ. ಯಾವುದೇ ನಿರ್ದಿಷ್ಟ ಪ್ರಕರಣದ ತನಿಖೆಗೆ ಆಯಾ ರಾಜ್ಯಗಳಿಗೆ ಮನವಿ ಮಾಡಬಹುದು. ಆ ರಾಜ್ಯಗಳು ಒಪ್ಪಿದರೆ ಮಾತ್ರ ತನಿಖೆ ನಡೆಸಬಹುದಾಗಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಂತೆ ಕೇಂದ್ರ ಸರಕಾರ ತನ್ನ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿರುವ ಇನ್ನೊಂದು ಸಂಸ್ಥೆ ರಾಷ್ಟ್ರೀಯ ತನಿಖಾ ಆಯೋಗ. ಇದರ ಮೂಲಕ ಮಹಾರಾಷ್ಟ್ರದಲ್ಲಿ ಪ್ರಗತಿಪರ, ದಲಿತ ಪರ ಚಿಂತಕರಾದ ಆನಂದ ತೇಲ್ತುಂಬ್ಡೆೆ, ಕವಿ ವರವರರಾವ್, ನ್ಯಾಯವಾದಿ ಸುಧಾ ಭಾರದ್ವಾಜ್, ಗೌತಮ ನವ್ಲಾಖ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿ ಎರಡು ವರ್ಷ ದಾಟಿದರೂ ನಿರ್ದಿಷ್ಟ ಆರೋಪ ಪಟ್ಟಿ ಸಲ್ಲಿಸದೆ ಅವರನ್ನು ಜೈಲಿನಲ್ಲಿ ಹಾಕಿ ಹಿಂಸಿಸಲಾಗುತ್ತಿದೆ.

 ಈ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ವಿವಾದಾಸ್ಪದವಾಗಿದೆ. ಇದನ್ನೇ ಸಂಸತ್ತಿನ ಉಭಯ ಸದನಗಳ ಮುಂದೆ ತಂದು ಮುಕ್ತ ಚರ್ಚೆ ನಡೆಸಿ ಪಾರದರ್ಶಕವಾಗಿ ಸಂಸತ್ತಿನ ಸಮ್ಮತಿ ಪಡೆದು ಮಾಡಿದ್ದರೆ ಸರಕಾರದ ನಡೆಯ ಬಗ್ಗೆ ಯಾವುದೇ ಸಂಶಯ ಬರುತ್ತಿರಲಿಲ್ಲ. ಈ ನ್ಯಾಯ ಸಮ್ಮತ ಮಾರ್ಗವನ್ನು ಬಿಟ್ಟು ವಿವಾದಾಸ್ಪದ ಮಾರ್ಗದ ಮೂಲಕ ಸಂಬಂಧಿಸಿದ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಿಸಲು ಹೊರಟಿರುವುದು ಸರಿಯಲ್ಲ. ಇನ್ನು ಮುಂದೆ ಇಂತಹ ಪ್ರಮಾದಗಳಾಗದಂತೆ ಸರಕಾರ ಎಚ್ಚರ ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News