ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಶಾಫಿ ಸಅದಿ ಆಯ್ಕೆ

Update: 2021-11-17 12:14 GMT

ಬೆಂಗಳೂರು, ನ.17: ರಾಜ್ಯ ವಕ್ಫ್ ಬೋರ್ಡ್‍ನ ನೂತನ ಅಧ್ಯಕ್ಷರಾಗಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಆಯ್ಕೆಯಾಗಿದ್ದಾರೆ. ಬುಧವಾರ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಫಿ ಸಅದಿ ಪರ 6 ಮತ ಹಾಗೂ ಅವರ ಪ್ರತಿಸ್ಪರ್ಧಿ ಆಸಿಫ್ 4 ಮತಗಳನ್ನು ಪಡೆದರು.

ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, 2011ರಲ್ಲಿ ನಾನು ವಕ್ಫ್ ಬೋರ್ಡ್‍ಗೆ ಸದಸ್ಯನಾಗಿ ಬಂದಿದ್ದೆ. ಅಲ್ಲಿಂದ ಈವರೆಗೆ ಸಮುದಾಯದ ಸಾಕಷ್ಟು ಸಮಸ್ಯೆಗಳನ್ನು ಗಮನಿಸಿದ್ದೇನೆ. ವಕ್ಫ್ ಬೋರ್ಡ್ ಮೂಲಕ ಮುಸ್ಲಿಮ್ ಸಮುದಾಯದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಬಹುದು. ಅಲ್ಲದೆ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದರು.

ಮುಸ್ಲಿಮ್ ಸಮುದಾಯದ ಪ್ರಾಥಮಿಕ ಶಿಕ್ಷಣದ ಪ್ರಮಾಣ ಶೇ.54ರಷ್ಟಿದ್ದರೆ, ಉನ್ನತ ಶಿಕ್ಷಣದ ಪ್ರಮಾಣ ಕೇವಲ ಶೇ.6ರಷ್ಟಿದೆ. ಸರಕಾರಿ ಉದ್ಯೋಗಗಳಲ್ಲಿ ಶೇ.4ರಷ್ಟು ಮಾತ್ರ ಪ್ರಾತಿನಿಧ್ಯ ಇದೆ. ಇದನ್ನು ಶೇ.15ರಷ್ಟು ಮಾಡಬೇಕಾದ ಅಗತ್ಯವಿದೆ. ಸಮುದಾಯದ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿ ನಮ್ಮ ಬಳಿಯಿದೆ. ಅದರ ಆಧಾರದಲ್ಲಿ ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಬಹುಕೋಟಿ ಮೌಲ್ಯದ ವಕ್ಫ್ ಆಸ್ತಿಗಳಿವೆ. ಆದರೆ, ಅವುಗಳನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಬೇಕಿದೆ. ರಾಜ್ಯದಲ್ಲಿ 90 ಲಕ್ಷ ಮುಸ್ಲಿಮರಿದ್ದಾರೆ. ಖಾಲಿಯಿರುವ ವಕ್ಫ್ ಆಸ್ತಿಗಳಲ್ಲಿ ಶಾಲೆ, ಕಾಲೇಜುಗಳನ್ನು ಆರಂಭಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ಗಮನ ಹರಿಸಿದರೆ ಮುಸ್ಲಿಮ್ ಸಮುದಾಯದ ಶೇ.50ರಷ್ಟು ಸಮಸ್ಯೆಗಳನ್ನು ಬಗೆಹರಿಸಿದಂತಾಗುತ್ತದೆ ಎಂದು ಶಾಫಿ ಸಅದಿ ತಿಳಿಸಿದರು.

ನಮ್ಮ ಆದ್ಯತೆ ಶಿಕ್ಷಣ, ಆರೋಗ್ಯ ಹಾಗೂ ವಕ್ಫ್ ಆಸ್ತಿಗಳನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸುವುದಾಗಿದೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್, ಬೆಳ್ಳಳಿ, ಮೇಡಿ ಅಗ್ರಹಾರ, ಬೆಳಗಾವಿಯ ಕುಡಚಿಯಲ್ಲಿ ವಕ್ಫ್‍ಗೆ ಸಂಬಂಧಿಸಿದ ದೊಡ್ಡ ಆಸ್ತಿಗಳಿವೆ. ಇವುಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಆದಷ್ಟು ಬೇಗ ಬಗೆಹರಿಸುವ ಕುರಿತು ಕಾನೂನು ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ, ಸರಕಾರದ ವಶದಲ್ಲಿರುವ ವಕ್ಫ್ ಆಸ್ತಿಗಳ ಪಟ್ಟಿ ಮಾಡಿ, ಅದಕ್ಕೆ ಸಂಬಂಧಿಸಿದ ನಷ್ಟ ಭರಿಸಲು ಸರಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.

ವಕ್ಫ್ ಬೋರ್ಡ್‍ನಲ್ಲಿ ಎಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಮಾಧ್ಯಮಗಳು ಗಮನ ಸೆಳೆಯಲಿ. ನಾವು ಸದಸ್ಯರಾಗಿ ಒಂದು ಸಭೆಗೆ ಹಾಜರಾದರೆ ನಮಗೆ 2000 ರೂ.ನೀಡುತ್ತಾರೆ. ಆ ಹಣವನ್ನು ನಮ್ಮ ಬಹುತೇಕ ಸದಸ್ಯರು ತೆಗೆದುಕೊಳ್ಳುವುದಿಲ್ಲ. ನನ್ನ ಒಂದು ಶಿಕ್ಷಣ ಸಂಸ್ಥೆಯಿದೆ. ಅದರಲ್ಲಿ ನೂರಾರು ಮಂದಿ ಬಡ, ಸ್ಲಂನಲ್ಲಿ ವಾಸಿಸುವಂತಹ ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸರಕಾರದಿಂದ ಆ ಸಂಸ್ಥೆಗೆ 19 ಲಕ್ಷ ರೂ.ಅನುದಾನ ಮಂಜೂರಾಯಿತು, ಬಿಡುಗಡೆಯಾಗಿಲ್ಲ. ಆದರೆ, ಒಬ್ಬ ವ್ಯಕ್ತಿ ಇದೊಂದು ದೊಡ್ಡ ಹಗರಣವೆಂಬಂತೆ ಬಿಂಬಿಸಿದರು. ಮಾಧ್ಯಮಗಳು ಅದಕ್ಕೆ ವ್ಯಾಪಕ ಪ್ರಚಾರ ನೀಡಿದವು. ಬಿಡುಗಡೆಯಾಗದೆ ಇರುವ ಹಣದಲ್ಲಿ ಹಗರಣ ನಡೆಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.

ನಮ್ಮ ಕಾನೂನು ಘಟಕವನ್ನು ಬಲಪಡಿಸಲು ಎಲ್ಲ ಸದಸ್ಯರು, ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ವಕ್ಫ್ ನ್ಯಾಯಾಧೀಕರಣಕ್ಕೆ ಅಗತ್ಯವಿರುವ ನ್ಯಾಯಾಧೀಶರನ್ನು ನೇಮಕ ಮಾಡಲು ಸರಕಾರದ ಜೊತೆ ಚರ್ಚೆ ಮಾಡುತ್ತೇನೆ. ವಕ್ಫ್ ಬೋರ್ಡ್‍ನ ಎಲ್ಲ ಸದಸ್ಯರು ಒಗ್ಗಟ್ಟಾಗಿ ಸಮುದಾಯದ ಸೇವೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಶಾಫಿ ಸಅದಿ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News