ಮೈಸೂರು: ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ

Update: 2021-11-17 08:50 GMT

ಮೈಸೂರು, ನ.17: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ  ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದಿಂದ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಜಲದರ್ಶಿನಿಯಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಬಳಿ ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು ಸಂಸದ ಪ್ರತಾಪ್ ಸಿಂಹರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಾಪ್ ಸಿಂಹ ಈ ಬಗ್ಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಘೇರಾವ್ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸಂಸದ ಪ್ರತಾಪ್ ಸಿಂಹರಿಗೆ ಖರ್ಗೆ ಕುಟುಂಬದ ಬಗ್ಗೆ ಏನು ಗೊತ್ತು ಮಲ್ಲಿಕಾರ್ಜುನ ಖರ್ಗೆ ಶೋಷಿತ ಸಮುದಾಯದಿಂದ ಬಂದು ದೇಶದ ಎತ್ತರಕ್ಕೆ ಬೆಳೆದು  ಎಲ್ಲಾ ವರ್ಗಗಳ ಏಳ್ಗೆಗೆ ಶ್ರಮಿಸಿದ್ದಾರೆ. ಗುಲ್ಬರ್ಗಾದಲ್ಲಿ ಬುದ್ಧ ವಿಹಾರ, ಇಎಸ್.ಐ ಆಸ್ಪತ್ರೆ, ಪ್ರತಿಷ್ಠಿತ ವಿಶ್ವವಿದ್ಯಾನಿಲಯ, ರೈಲು ಸೇವೆ, ವಿಮಾನ ಸೇವೆ, ದಲಿತರು ಹಿಂದುಳಿದವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡುವುದರ ಜೊತೆಗೆ ಹೈದರಬಾದ್ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಂತಹದರಲ್ಲಿ ಅವರ ಪುತ್ರ ಶಾಸಕ ಪ್ರಿಯಾಂಕ್ ಖರ್ಗೆ ಕುರಿತು ಅವಹೇಳನಕಾರಿಯಾಗಿ ಟೀಕಿಸಿರುವುದು ಇಡೀ ದಲಿತ ಸಮುದಾಯಗಳಿಗೆ ಅವಮಾನ ಮಾಡಿದಂತೆ. ಪ್ರಿಯಾಂಕ್ ಎಂದು ಹೆಸರಿಟ್ಟಿರುವ ಉದ್ದೇಶ ಏನು ಎಂದು  ತಿಳಿಯಬೇಕಾದರೆ ಬಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಿ ಅದು ಬಿಟ್ಟು ಅರೆ ಹುಚ್ಚರಂತೆ, ಅಜ್ಞಾನಿಯಂತೆ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಅಪಯಾಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ಮಾಡಿರುವಷ್ಟು ಪ್ರತಾಪ್ ಸಿಂಹರಿಗೆ ವಯಸ್ಸಾಗಿಲ್ಲ, ಆದರೂ ಸಿದ್ದರಾಮಯ್ಯರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಮೊದಲು ಪ್ರತಾಪ್ ಸಿಂಹ ಅವರಿಗೆ ನಿಮಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯ ಇದೆ. ಇವರ ಪೂರ್ಣ ಚಿಕಿತ್ಸಾ ವೆಚ್ಚವನ್ನು ದಲಿತ ಸಂಘಟನೆಗಳು ಭರಿಸಲಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನರೇಂದ್ರ, ದಲಿತ ಸಂಘರ್ಷ ಸಮಿತಿಯ ಮುರುಡಗಳ್ಳಿ ಮಹದೇವ್, ಮೈಸೂರು ವಿ.ವಿ. ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಸೋಸಲೆ, ಮರಿದೇವಯ್ಯ, ಮಹದೇವ್, ಕಾಳಯ್ಯ, ನಂಜುಂಡಸ್ವಾಮಿ, ರಮೇಶ್, ಭಾಗ್ಯರಾಜ್, ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News