ಮಡಿಕೇರಿ: ಅಶಾಂತಿ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಗತಿಪರ ಹೋರಾಟ ಸಮಿತಿ ಒತ್ತಾಯ

Update: 2021-11-17 14:06 GMT

ಮಡಿಕೇರಿ ನ.17 : ಬಿಜೆಪಿ ಹಾಗೂ ಸಂಘ ಪರಿವಾರ ಸಾಮರಸ್ಯದ ಕೊಡಗಿನಲ್ಲಿ ಅಶಾಂತಿಯನ್ನು ಮೂಡಿಸುತ್ತಿವೆ ಎಂದು ಆರೋಪಿಸಿರುವ ಪ್ರಗತಿಪರ ಹೋರಾಟ ಸಮಿತಿ, ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಸಿದ್ದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ಪಿ.ವಿ.ಜಾನ್ಸನ್, ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಪ್ರಚೋದನೆ ನೀಡಿ ಶಾಂತಿ ಭಂಗ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅಮಾಯಕರ ವಿರುದ್ಧದ ಪ್ರಕರಣ ವಾಪಾಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು. ತಪ್ಪಿದಲ್ಲಿ ಬೃಹತ್ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಶನಿವಾರಸಂತೆ ಠಾಣೆ ಎದುರು ಮಹಿಳೆಯರು ನಡೆಸಿದ ಪ್ರತಿಭಟನೆ ಸಂದರ್ಭ ಕೂಗಿದ ಘೋಷಣೆಯನ್ನು ತಿರುಚಿ ವೈರಲ್ ಮಾಡಿದವರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಬಂಧಿಸಬೇಕೆಂದು ಹೇಳಿದರು. 

ಸಮಿತಿಯ ಪ್ರಮುಖ ಎಂ.ಬಿ.ಜೋಯ್ ಮಾತನಾಡಿ ಠಾಣೆ ಎದುರಿನಲ್ಲೇ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರೆ ತಪ್ಪಿತಸ್ಥರನ್ನು ಪೊಲೀಸರು ತಕ್ಷಣ ಬಂಧಿಸುತ್ತಿದ್ದರು. ಪೊಲೀಸರು ಬಂಧಿಸಿಲ್ಲವೆಂದಾದರೆ ಘೋಷಣೆಯನ್ನು ತಿರುಚಿ ವೈರಲ್ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

 ಪೊಲೀಸರು ತಾರತಮ್ಯ ಮಾಡದೆ ನೈಜ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಪ್ರಮುಖರಾದ ಎಸ್.ಬಿ.ಪ್ರತೀಶ ಮಾತನಾಡಿ, ಜಿಲ್ಲೆಯ ಅಧಿಕಾರಿಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 ಎಂ.ಎ.ಯಮುನಾ ಮಾತನಾಡಿ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಅಶಾಂತಿಯ ವಾತಾವರಣವನ್ನು ಮೂಡಿಸಲಾಗುತ್ತಿದೆ. ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯವಾಗಿದ್ದು, ಪೊಲೀಸರು ಯಾರ ಒತ್ತಡಕ್ಕೂ ಮಣಿಯದೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಅಸ್ಕರ್, ಅಶ್ರಫ್ ಹಾಗೂ ಬಶೀರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News