ಕೆ.ಆರ್.ಪೇಟೆ: ಕರ್ತವ್ಯನಿರತ ಆಸ್ಪತ್ರೆ ವೈದ್ಯ, ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ; ನಾಲ್ವರು ಆರೋಪಿಗಳ ಬಂಧನ

Update: 2021-11-17 14:31 GMT

ಮಂಡ್ಯ, ನ.17: ಕೆ.ಆರ್.ಪೇಟೆ ಸಾರ್ವಜನಿಕರ ಆಸ್ಪತ್ರೆಯ ಕರ್ತವ್ಯನಿರತ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಕ್ಷುಲ್ಲಕ ವಿಷಯಕ್ಕೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಯ ನಿವಾಸಿಗಳಾದ ಪರಮೇಶ್(22), ಕೆ.ಆರ್.ವಿನೋದ್(23), ಕೆ.ಎಸ್.ದರ್ಶನ್(21) ಹಾಗೂ ವಿಜಯ್ ಅಲಿಯಾಸ್ ಪ್ರೇಮ್(22) ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ: ಬಂಧಿತ ಆರೋಪಿಗಳು ಮಂಗಳವಾರ ತಡರಾತ್ರಿ ಕವಿತಾ ಎಂಬ ಯುವತಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಡಾ.ಶ್ರೀಕಾಂತ್ ಅವರು ಯುವತಿಗೆ ಸೂಕ್ತ ಚಿಕಿತ್ಸೆ ನೀಡಿ ಯಾವುದೇ ತೊಂದರೆ ಇಲ್ಲ ಕರೆದುಕೊಂಡು ಹೋಗಬಹುದು ಎಂದು ಹೇಳಿದರು ಎನ್ನಲಾಗಿದೆ.

ಕವಿತಾ ಅವರಿಗೆ ಬಿ.ಪಿ. ಚೆಕ್ ಮಾಡಿ ವೈದ್ಯರು ಹೇಳಿದ ಇಂಜಕ್ಷನ್ ನೀಡಿ, ಗ್ಲೂಕೋಸ್ ಬಾಟಲ್ ಹಾಕಿ ಆರೈಕೆ ಮಾಡಿದ ಸ್ಟಾಫ್ ನರ್ಸ್ ರಂಗನಾಥ್ ಅವರಿಗೆ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದೀಯ ಎಂದು ಆರೋಪಿಗಳು ಏಕಾಏಕಿ ಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೆ ಆಸ್ಪತ್ರೆಯ ಹೊರಗಡೆ ಎಳೆದುಕೊಂಡು ಹೋಗಿ ಮರದ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ರಂಗನಾಥ್ ಅವರ ಸಹಾಯಕ್ಕೆ ಬಂದ ವೈದ್ಯ ಡಾ.ಶ್ರೀಕಾಂತ್ ಅವರ ಮೇಲೂ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. 

ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲಿಸರಿಗೆ ಕರೆ ಮಾಡಿದಾಗ 112 ಪೊಲೀಸ್ ವಾಹನದಲ್ಲಿ ಬಂದ ಪೊಲೀಸರು ಸ್ಟಾಫ್ ನರ್ಸ್ ರಂಗನಾಥ್ ಮತ್ತು ವೈದ್ಯರನ್ನು ರಕ್ಷಣೆ ಮಾಡಿ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರೂ ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ನಾಲ್ವರೂ ಆರೋಪಿಗಳನ್ನು ಮಂಡ್ಯ ಜೈಲಿಗಟ್ಟಿದ್ದಾರೆ. 

ಸಾರ್ವಜನಿಕರ ಪ್ರತಿಭಟನೆ: ಹಲ್ಲೆ ವಿಚಾರ ತಿಳಿದ ಕನ್ನಡಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಕಾರ್ಯಕರ್ತರು ಹಾಗೂ ಬಂಡಿಹೊಳೆ ಗ್ರಾಮಸ್ಥರು ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ವೈದ್ಯರು, ಸಿಬ್ಬಂದಿಗೆ ರಕ್ಷಣೆ ನೀಡಬೇಕು, ಆಸ್ಪತ್ರೆ ಆವರಣದಲ್ಲಿ ಹೊರ ಪೊಲೀಸ್ ಠಾಣೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ರವಿ ಅವರೊಂದಿಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ, ಹಲ್ಲೆ ನಡೆಸಿದವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಪಿಐ ದೀಪಕ್ ಅವರು ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಚೌಕಿ ನಿರ್ಮಿಸಲು ಭರವಸೆ ನೀಡಿದ್ದಾರೆ ಎಂದರು. ನಂತರ, ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು.

ಮುಖಂಡರಾದ ಮಂಜೇಗೌಡ, ಸಾಧುಗೋನಹಳ್ಳಿ ಲೋಕಿ, ದಯಾನಂದ್,  ಯೋಗೇಶ್, ದಿಲೀಪ್, ಎ.ಸಿ.ಕಾಂತರಾಜು, ಸಮೀರ್, ಮೆಡಿಕಲ್ ಕಾಂತರಾಜು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News