ದುರ್ಬಲ ವರ್ಗದ ಮಹಿಳೆಯರ ಉದ್ಯಮಕ್ಕೆ ಅಗತ್ಯ ಸೌಲಭ್ಯದ ನೆರವು: ಸಚಿವ ಮುರುಗೇಶ್ ನಿರಾಣಿ

Update: 2021-11-17 15:46 GMT

ಬೆಂಗಳೂರು, ನ. 17: `ಸ್ವಂತ ಉದ್ದಿಮೆ ಆರಂಭಿಸುವ ದುರ್ಬಲ ವರ್ಗದ ಮಹಿಳೆಯರಿಗೆ ರಿಯಾಯಿತಿ ಸೇರಿದಂತೆ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಸಾಧ್ಯವಿರುವ ಎಲ್ಲ ಅಗತ್ಯ ಸವಲತ್ತುಗಳನ್ನು ನೀಡುವುದು' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಬುಧವಾರ ಇಲ್ಲಿನ ಎಡಿಎ ರಂಗಮಂದಿರದಲ್ಲಿ ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘದ (ಅವೇಕ್) 38ನೆ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳಾ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, `ರಾಜ್ಯದಲ್ಲಿ ಮಹಿಳಾ ಉದ್ಯಮಿಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದು. ಮಹಿಳೆಯರು ಸಬಲೀಕರಣಗೊಳ್ಳಬೇಕು ಎಂಬುದು ಸರಕಾರದ ಆಶಯವಾಗಿದೆ. ರಾಜ್ಯದಲ್ಲಿ ಅನೇಕ ಮಹಿಳೆಯರು ಯಶಸ್ವಿ ಉದ್ಯೋಗದಾತರಾಗಿ ಬದಲಾಗುತ್ತಿದ್ದಾರೆ. ಜೊತೆಗೆ ಅನೇಕ ಮಹಿಳೆಯರಿಗೆ ಉದ್ಯೋಗಗಳನ್ನು ನೀಡುತ್ತಿದ್ದಾರೆ. ಮಹಿಳಾ ಒಡೆತನದ ಉದ್ಯಮಗಳು ಗಣನೀಯವಾಗಿ ಬೆಳೆಯುತ್ತಿದ್ದು, ಅವರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿವೆ. ಇದು ಬದಲಾವಣೆಯ ಸಂಕೇತ' ಎಂದು ಸಂತಸ ವ್ಯಕ್ತಪಡಿಸಿದರು. 

`ಇಂದು ಭಾರತವು 13.5-15.7 ಮಿಲಿಯನ್ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು ಹೊಂದಿದೆ, ಇದು ಎಲ್ಲ ಉದ್ಯಮಗಳಲ್ಲಿ ಶೇ.20ರಷ್ಟನ್ನು ಪ್ರತಿನಿಧಿಸುತ್ತದೆ. ಇಂತಹ ಮಾನದಂಡಗಳ ಕಡೆಗೆ ಉದ್ಯಮಶೀಲತೆಯ ಪ್ರಮಾಣ ಮತ್ತು ಗುಣಮಟ್ಟವನ್ನು ವೇಗಗೊಳಿಸುವುದರಿಂದ 30 ಮಿಲಿಯನ್ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು ರಚಿಸಬಹುದು, ಅದರಲ್ಲಿ ಶೇ.40ರಷ್ಟು ಸ್ವಯಂ ಉದ್ಯೋಗಕ್ಕಿಂತ ಹೆಚ್ಚಾಗಿರುತ್ತದೆ. ಮಹಿಳಾ ಉದ್ಯಮಿಗಳು ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುವ ಉದ್ಯಮಗಳನ್ನು ಪ್ರಾರಂಭಿಸಲು ಇತರ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತಾರೆ' ಎಂದು ಅವರು ಹೇಳಿದರು.

`ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರಕಾರವು ಮುದ್ರಾ ಯೋಜನೆ, ಅನ್ನಪೂರ್ಣ ಯೋಜನೆ, ದೀನ ಶಕ್ತಿ ಯೋಜನೆ ಮತ್ತು ಟ್ರೇಡ್(ವ್ಯಾಪಾರ-ಸಂಬಂಧಿತ ಉದ್ಯಮಶೀಲತೆ ನೆರವು ಮತ್ತು ಅಭಿವೃದ್ಧಿ) ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಉದ್ಯಮಿಗಳು ಹೊಸ ಯೋಜನೆಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲು ಇದು ಅನುಕೂಲ ಕಲ್ಪಿಸಲಿದೆ ಎಂದು ಮುರಗೇಶ್ ನಿರಾಣಿ ಅಭಿಪ್ರಾಯಪಟ್ಟರು.

`ನಮ್ಮ ಸರಕಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಕೌಶಲ್ಯ ತರಬೇತಿ ಕಾರ್ಯಕ್ರಮ, ದೇವದಾಸಿಯರ ಪುನರ್ವಸತಿ ಕಾರ್ಯಕ್ರಮ, ದೇವದಾಸಿ ಪಿಂಚಣಿ ಯೋಜನೆ, ಮಾಜಿ ದೇವದಾಸಿಯರಿಗೆ ವಸತಿ, ತೃತೀಯ ಲಿಂಗಿಗಳ ಪುನರ್ವಸತಿ ಯೋಜನೆ, ಮಹಿಳಾ ಉದ್ಯಮಿಗಳಿಗೆ ಬಡ್ಡಿ ಸಹಾಯಧನ ಯೋಜನೆ, ಸಮೃದ್ಧಿ ಯೋಜನೆಗಳಂತಹ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಇದು ಮಹಿಳೆಯರ ಉನ್ನತಿಗಾಗಿ ಮಾರುಕಟ್ಟೆ ನೆರವು ಒದಗಿಸುತ್ತದೆ' ಎಂದು ಅವರು ತಿಳಿಸಿದರು.

`ಮೈಸೂರು, ಧಾರವಾಡ, ಕಲಬುರಗಿ ಮತ್ತು ಹಾರೋಹಳ್ಳಿಯಲ್ಲಿ ಮಹಿಳೆಯರಿಗೆ ಮೀಸಲಾದ ವಿಶೇಷ ಕೈಗಾರಿಕಾ ಪಾರ್ಕ್ ಅನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ಉದ್ಯಮಶೀಲತೆಯ ಅವಕಾಶಗಳನ್ನು ಅನ್ವೇಷಿಸಿ, ಉದ್ಯೋಗದಾತರಾಗಲು ಮತ್ತು ರಾಜ್ಯದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಮಹಿಳೆಯರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು' ಎಂದು ಸಚಿವ ನಿರಾಣಿ ಮನವಿ ಮಾಡಿದರು.

`ಕೈಗಾರಿಕೆಗಳಲ್ಲಿ ಕರ್ನಾಟಕವನ್ನು ಅಗ್ರಸ್ಥಾನದಲ್ಲಿ ಇರಬೇಕು ಎಂಬುದು ನಮ್ಮ ಸರಕಾರದ ಮಹತ್ವಾಕಾಂಕ್ಷೆಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಯುವಜನರು ಯಶಸ್ವಿ ಉದ್ಯಮಿಗಳಾಗಲು ವೇದಿಕೆಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗ ಒದಗಿಸುವವರಾಗಿರಬೇಕೆಂದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿಗೆ ನಡೆದ `ಉದ್ಯಮಿಯಾಗು, ಉದ್ಯೋಗ ನೀಡು'(ಉದ್ಯಮಿಯಾಗಿ ಉದ್ಯೋಗದಾತರಾಗಿ) ಕಾರ್ಯಕ್ರಮವು ವೃತ್ತಿಪರ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಆಕರ್ಷಿಸುವ ಗುರಿಯನ್ನು ಹೊಂದಿದೆ. ನೀವು ಉದ್ಯೋಗದಾತರಾಗಿ, ಜನಸಾಮಾನ್ಯರಿಗೆ ಉದ್ಯೋಗವನ್ನು ನೀಡುವಂತಹ ಉದ್ಯಮಿಗಳಾಗಬೇಕು. ಮುಂದಿನ ವರ್ಷ ನವೆಂಬರ್ 2ರಿಂದ 4ರ ವರೆಗೆ `ಜಾಗತಿಕ ಹೂಡಿಕೆದಾರರ ಸಭೆ'ಯ ಮುಂದಿನ ಆವೃತ್ತಿಯನ್ನು ಆಯೋಜಿಸುತ್ತಿದ್ದು, ವಿಶೇಷವಾಗಿ ಮಹಿಳಾ ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News