ಮಾಜಿ ಸಿಎಂ ಒಬ್ಬರಿಂದ ಜೆಡಿಎಸ್ ನಾಯಕರ ಹೈಜಾಕ್ ಕಾರ್ಯಾಚರಣೆ: ಕುಮಾರಸ್ವಾಮಿ ಆರೋಪ

Update: 2021-11-17 16:04 GMT

ಬೆಂಗಳೂರು, ನ. 17: ಮುಂದಿನ ಚುನಾವಣೆ ಒಳಗೆ ಜೆಡಿಎಸ್ ಪಕ್ಷವನ್ನು ಮುಗಿಸಲೇಬೇಕೆಂದು ದುಷ್ಟ ಯತ್ನ ನಡೆಸುತ್ತಿರುವ ಮಾಜಿ ಸಿಎಂವೊಬ್ಬರು ನಮ್ಮ ಪಕ್ಷದ ಮುಖಂಡರು, ಶಾಸಕರನ್ನು ಹೈಜಾಕ್ ಮಾಡಲು ಬ್ರೈನ್ ವಾಶ್ ಮಾಡುತ್ತಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂದಿಲ್ಲಿ ಸಿದ್ದರಾಮಯ್ಯನವರ ಹೆಸರು ಉಲ್ಲೇಖಿಸದೆ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ನಗರದಲ್ಲಿ 9 ದಿನಗಳ ಜನತಾ ಸಂಗಮ ಕಾರ್ಯಾಗಾರದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪಕ್ಷವನ್ನು ದುರ್ಬಲಗೊಳಿಸಲು ಅವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರಗಳಲ್ಲಿ ಕೊಂಚ ಬಲ ಇಟ್ಟುಕೊಂಡಿರುವ ಶಾಸಕರನ್ನು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಅಂಥವರ ಬ್ರೈನ್ ವಾಶ್ ಮಾಡುತ್ತಿದ್ದಾರೆ' ಎಂದು ದೂರಿದರು.

`ಮುಖ್ಯಮಂತ್ರಿ ಆಗಿದ್ದವರೊಬ್ಬರು ನಮ್ಮ ಶಾಸಕರು, ಮುಖಂಡರಿಗೆ ದೂರವಾಣಿ ಕರೆ ಮಾಡಿ ಸತತವಾಗಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಸಿಎಂ ಆಗಿದ್ದವರು, ಪುನಃ ಸಿಎಂ ಆಗಲು ಕನಸು ಕಾಣುತ್ತಿರುವವರು ಈ ಕೆಲಸ ಮಾಡುತ್ತಿದ್ದಾರೆ. ಪದೇ ಪದೆ ಕರೆ ಮಾಡಿ, ಅವರ ತಲೆ ಕೆಡಿಸಲು ಯತ್ನ ಮಾಡುತ್ತಿದ್ದಾರೆ. ಅಲ್ಲದೆ, ಒಬ್ಬರಿಗೆ ಹನ್ನೊಂದು ಸಲ ಕರೆ ಮಾಡಿ ಏನು ತೀರ್ಮಾನ ಮಾಡಿದ್ರಿ ಎಂದು ಕೇಳುತ್ತಿದ್ದಾರೆ. ಇದನ್ನು ಸ್ವತಃ ನನ್ನ ಆತ್ಮೀಯ ಶಾಸಕರೊಬ್ಬರು ನನಗೆ ಆ ಮಾಜಿ ಮುಖ್ಯಮಂತ್ರಿ ಮಾಡಿರುವ ದೂರವಾಣಿ ಕರೆಯ ಲಿಸ್ಟ್ ಅನ್ನು ತೋರಿಸಿದ್ದಾರೆ' ಎಂದು ಕುಮಾರಸ್ವಾಮಿ ಬಹಿರಂಗಪಡಿಸಿದರು.

`ಕಾಂಗ್ರೆಸ್ ಜತೆ ನಾವು ಸರಕಾರ ಮಾಡಿದ ಬಳಿಕ ನಮ್ಮವರ ಬ್ರೈನ್ ವಾಷ್ ಮಾಡಲಾಗುತ್ತಿದೆ. ಇದರ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಮುಖ್ಯವಾಗಿ ಹಳೆಯ ಮೈಸೂರು ಭಾಗದಲ್ಲಿ ನಮ್ಮ ಮುಖಂಡರು ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದ ಅವರು, `ನಮಗೆ ನಮ್ಮ ಪಕ್ಷದ ಶಾಸಕರು ಇದ್ದಾರೆ. ಕಾರ್ಯಕರ್ತರ ಪಡೆ ಇದೆ. ಆದರೆ, ಆ ಪಕ್ಷಕ್ಕೆ ನಾಯಕರ ಕೊರತೆ ಇದೆ. ಬೇರೆ ಗತಿ ಇಲ್ಲದೆ ನಮ್ಮ ಪಕ್ಷದವರಿಗೆ ಗಾಳ ಹಾಕುತ್ತಿದ್ದಾರೆ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷ-ನಮ್ಮ ಬಗ್ಗೆ ಲಘು ಮಾತು ಬೇಡ: `ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವರು ಅಲ್ಲಿಗೆ ಹೋಗಲಿ. ಆದರೆ, ಹೋಗುವ ಮುನ್ನ ಅಥವಾ ಹೋದ ಮೇಲೆ ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಬೇಡ. ಇಲ್ಲಿಂದ ಎಲ್ಲ ಶಕ್ತಿ ಪಡೆದುಕೊಂಡು ನಮ್ಮ ಬಗ್ಗೆ ಮಾತನಾಡವುದು ಬೇಡ. ಯಾರು ಪಕ್ಷ ಬಿಡಲು ಒಂದು ಹೆಜ್ಜೆ ಇಟ್ಟಿದ್ದಾರೆಯೋ ಅಥವಾ ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆಯೋ? ಅವರಿಗೆ ಎಲ್ಲಿ ಭವಿಷ್ಯ ಇದೆ ಎಂದು ಅನ್ನಿಸುವುದೋ ಅಲ್ಲಿಗೆ ಹೋಗಲಿ. ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ನಾವು ಅಳುತ್ತ ಕೂರಲು ಆಗಲ್ಲ. ಆದರೂ ಕೆಲವರನ್ನು ಮನವೊಲಿಸಲು ಸಾಧ್ಯವಿದ್ದರೆ ಮಾಡುತ್ತೇವೆ. ಆ ಪ್ರಯತ್ನವನ್ನು ನಾವು ಬಿಟ್ಟಿಲ್ಲ' ಎಂದು ಕುಮಾರಸ್ವಾಮಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News