ಇರಾನ್‌ಗೆ ಭೇಟಿ ನೀಡಲಿರುವ ಐಎಇಎ ಮುಖ್ಯಸ್ಥ

Update: 2021-11-17 17:47 GMT
photo:twitter/@rafaelmgrossi

ಟೆಹ್ರಾನ್, ನ.17: ವಿಶ್ವಸಂಸ್ಥೆಯ ಪರಮಾಣು ಕಾವಲುಪಡೆಯ ಮುಖ್ಯಸ್ಥರು ನವೆಂಬರ್ 22ರಂದು ಇರಾನ್‌ಗೆ ಭೇಟಿ ನೀಡಿ ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಇರಾನ್‌ನ ಪರಮಾಣು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

 ಇರಾನ್ ಸರಕಾರದೊಂದಿಗೆ ಸಂಪರ್ಕದ ಕೊರತೆಯ ಬಗ್ಗೆ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಮುಖ್ಯಸ್ಥ ರಫೇಲ್ ಗ್ರೋಸಿ ನವೆಂಬರ್ 12ರಂದು ತೀವ್ರ ಕಳವಳ ವ್ಯಕ್ತಪಡಿಸಿದ್ದು, ನವೆಂಬರ್ 22ರಂದು ನಡೆಯುವ ಐಎಇಎ ಆಡಳಿತ ಮಂಡಳಿ ಸಭೆಗೂ ಮುನ್ನ ಇರಾನ್ ಅಧಿಕಾರಿಗಳನ್ನು ಭೇಟಿಯಾಗುವ ವಿಶ್ವಾಸವಿದೆ ಎಂದಿದ್ದರು.

ಇದಕ್ಕೆ 3 ದಿನದ ಬಳಿಕ ಪ್ರತಿಕ್ರಿಯಿಸಿರುವ ಇರಾನ್, ಗ್ರೋಸಿಯನ್ನು ದೇಶಕ್ಕೆ ಆಹ್ವಾನಿಸಿದೆ.ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮುಖ್ಯಸ್ಥರು ನವೆಂಬರ್ 22ರ ಸಂಜೆ ಟೆಹ್ರಾನ್‌ಗೆ ಆಗಮಿಸಲಿದ್ದು ವಿದೇಶ ವ್ಯವಹಾರ ಸಚಿವ ಹುಸೇನ್ ಅಮೀರ್ ಅಬ್ದುಲಾಹಿನ್, ಇರಾನ್‌ನ ಪರಮಾಣು ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿಯನ್ನು ಭೇಟಿಯಾಗಲಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಈ ಮಧ್ಯೆ ರಶ್ಯಾ ಅಧ್ಯಕ್ಷ ಪುಟಿನ್‌ರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ‘ ಪರಮಾಣು ಒಪ್ಪಂದದ ಕುರಿತ ಮಾತುಕತೆಯನ್ನು ಇರಾನ್ ಗಂಭೀರವಾಗಿ ಪರಿಗಣಿಸಿದೆ’ ಎಂದಿದ್ದಾರೆ. ವಿಯೆನ್ನಾ ಸಭೆಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ ಮತ್ತು ರಶ್ಯಾ ಪಾಲ್ಗೊಳ್ಳಲಿವೆ. ಅಮೆರಿಕ ಪರೋಕ್ಷವಾಗಿ ಭಾಗವಹಿಸಲಿದೆ ಎಂದು ಮೂಲಗಳು ಹೇಳಿವೆ.

 ನವೆಂಬರ್ 29ರಂದು ವಿಯೆನ್ನಾದಲ್ಲಿ ನಡೆಯುವ ಪರಮಾಣು ಶಕ್ತಿಯ ಕುರಿತ ಸಭೆಗೂ ಮುನ್ನ ಆಯೋಜಿಸಿರುವ ಈ ಭೇಟಿ ಕಾರ್ಯಕ್ರಮಕ್ಕೆ ಮಹತ್ವವಿದೆ. ವಿಯೆನ್ನಾ ಸಭೆಯಲ್ಲಿ 2015ರ ಒಪ್ಪಂದ ಮರುಸ್ಥಾಪನೆ ಪ್ರಮುಖ ಚರ್ಚೆಯ ವಿಷಯವಾಗಿದೆ(ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದರೆ ಅದರ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತುಸು ಸಡಿಲಿಸುವ ಬಗ್ಗೆ 2015ರಲ್ಲಿ ಒಪ್ಪಂದ ಏರ್ಪಟ್ಟಿತ್ತು). ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ 2018ರಲ್ಲಿ ಅಮೆರಿಕ ಈ ಒಪ್ಪಂದದಿಂದ ಏಕಪಕ್ಷೀಯವಾಗಿ ಹೊರಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News