ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ: ಬಿ.ಎಸ್.ಯಡಿಯೂರಪ್ಪ

Update: 2021-11-20 17:45 GMT

ಬಾಗಲಕೋಟೆ, ನ. 20: 'ಮೋದಿಯವರ ಹೆಸರೇ ಸಾಕು ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುಮತ ಪಡೆಯುತ್ತಾರೆ. ನಾನು ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರೇ ಕೊಂಡಾಡುತ್ತಿದ್ದಾರೆ. ಮೋದಿ ವಿಶ್ವದ ನಾಯಕರೆಂದು ಪರಿಗಣಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದರು.

 `ಜನ ಸ್ವರಾಜ್ ಸಮಾವೇಶ' ಮುಗಿದ ಬಳಿಕ ನಾನು ಮತ್ತೊಮ್ಮೆ ರಾಜ್ಯಾದ್ಯಂತ ಪ್ರವಾಸ ಮಾಡುವೆ, ಸಾಮೂಹಿಕವಾಗಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲಿಸುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು.

`ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸ್ವಲ್ಪ ವಿಳಂಬವಾದರೂ ದೃಢ ನಿರ್ಧಾರ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದೆ. ಇದಕ್ಕೆ ಮೋದಿಯವರನ್ನು ಅಭಿನಂದಿಸುತ್ತೇನೆ. ಪ್ರತಿಷ್ಠೆ ಬದಿಗಿಟ್ಟು ರೈತರ ಹೋರಾಟ ನೋಡಿದ ಮೇಲೆ ಕಾಯ್ದೆ ಹಿಂಪಡೆದಿದ್ದು, ದೇಶದಲ್ಲಿ ರೈತರ ವಿಶ್ವಾಸ, ಗೌರವ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

`ರೈತ ಸಮುದಾಯಕ್ಕೆ ಬಹಳ ಒಳ್ಳೆಯದಾಗುತ್ತೆ. 11 ತಿಂಗಳು ರೈತರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ತಡವಾದರೂ ಅದರ ಸತ್ಯಾಂಶ ನೋಡಿಕೊಂಡು ಪ್ರಧಾನಿ ನಿರ್ಧಾರ ಕೈಗೊಂಡಿದ್ದಾರೆ. ರೈತರ ಹಿತದೃಷ್ಟಿಯಿಂದ ನಿರ್ಧಾರ ಸ್ವಾಗತಾರ್ಹ. ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಕ್ಕೆ ಬೇರೆ-ಬೇರೆ ಕಾರಣಗಳಿವೆ. ಆಗಿನ ಸಂದರ್ಭದ ಘಟನಾವಳಿಗಳು ಎಲ್ಲರಿಗೂ ಗೊತ್ತು. ಈಗ ವಿಶ್ಲೇಷಣೆ ಮಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News