ವಿಧಾನ ಮಂಡಲ ಸಚಿವಾಲಯಕ್ಕೆ ಆರ್ಥಿಕ ಸ್ವಾಯತತ್ತೆ ನೀಡಲು ಚರ್ಚೆ: ಸ್ಪೀಕರ್ ಕಾಗೇರಿ

Update: 2021-11-21 17:47 GMT

ಬೆಂಗಳೂರು, ನ. 21: `ವಿಧಾನಮಂಡಲ ಸಚಿವಾಲಯಕ್ಕೆ ಆರ್ಥಿಕ ಸ್ವಾಯತತ್ತೆ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸುವುದು' ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ರವಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯಗಳಿಗೆ ಆರ್ಥಿಕ ಸ್ವಾಯತ್ತತೆ ಇದೆ. ದೇಶದಲ್ಲೇ ಪ್ರಥಮ ಬಾರಿಗೆ ಹಿಮಾಚಲಯ ಪ್ರದೇಶದ ರಾಜ್ಯಕ್ಕೂ ಆರ್ಥಿಕ ಸ್ವಾಯತ್ತತೆ ನೀಡಲಾಗಿದೆ. ಅದೇ ರೀತಿ ಕರ್ನಾಟಕದ ಶಾಸಕಾಂಗಕ್ಕೂ ಸ್ವಾಯತ್ತತೆ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕರ ಜೊತೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.

`ಪ್ರತಿಯೊಂದು ವಿಷಯಕ್ಕೂ ಆರ್ಥಿಕ ಇಲಾಖೆಗೆ ಕಡತ ರವಾನಿಸಿ ಅನುಮತಿ ಪಡೆದುಕೊಳ್ಳುವ ಅಗತ್ಯವಿದೆ. ಶಾಸಕಾಂಗಕ್ಕೆ ಇದು ಸೂಕ್ತ ಎನಿಸುವುದಿಲ್ಲ. ಆರ್ಥಿಕ ಸ್ವಾಯತ್ತತೆ ಇದ್ದರೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿದೆ' ಎಂದ ಅವರು, `ಲೋಕಸಭೆ ಮಾದರಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಆರ್ಥಿಕ ಸ್ವಾಯತ್ತತೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.  ಇದನ್ನು ರಾಜ್ಯಗಳಲ್ಲಿ ಅಳವಡಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದರು.

`82ನೆ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ಮೋದಿ ವರ್ಚುಯಲ್ ಮೂಲಕ ಕರ್ತವ್ಯವನ್ನು ರಾಷ್ಟ್ರೀಯ ಕರ್ತವ್ಯದ ಸ್ಫೂರ್ತಿಯಾಗಿ ಪರಿಗಣಿಸಿ ಎಲ್ಲ ಚಟುವಟಿಕೆಗಳನ್ನು ಕೇಂದ್ರೀಕರಿಸಿ ಪರಿಣಾಮಕಾರಿಯಾಗಿ  ಗುರಿ ತಲುಪಲು ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು ಎಂದ ಅವರು, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನ.16 ರಿಂದ 19ರ ವರೆಗೆ ನಡೆದ 82ನೆ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ನ.17 ಮತ್ತು 18 ರಂದು ಭಾಗವಹಿಸಿ `ಶತಮಾನದ ಪಯಣ-ಮೌಲ್ಯಮಾಪನ ಮತ್ತು ಸಾಗಬೇಕಾದ ಮಾರ್ಗ ಹಾಗೂ ಸಂವಿಧಾನ, ಸದನ ಮತ್ತು ಜನತೆಯ ಅಭಿಮುಖವಾಗಿ ಪೀಠಾಸೀನಾಧಿಕಾರಿಗಳ ಹೊಣೆಗಾರಿಕೆ' ಕುರಿತು ಎರಡು ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಮಂಡಿಸಲಾಯಿತು ಎಂದರು.

ಇದೇ ವೇಳೆ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ವರ್ಷದಲ್ಲಿ ಒಂದು ಬಾರಿ ಏರ್ಪಡಿಸುತ್ತಿದ್ದ ಸಮ್ಮೇಳನವನ್ನು ಇನ್ನು ಮುಂದೆ ವರ್ಷದಲ್ಲಿ ಎರಡು ಬಾರಿ ನಡೆಸುವಂತೆ ನಿರ್ಣಯಿಸಲಾಗಿದೆ. ಮೊದಲ ಸಮ್ಮೇಳನವನ್ನು ದೆಹಲಿಯಲ್ಲಿ ಎರಡನೇ ಸಮ್ಮೇಳನವನ್ನು ಹೊರ ರಾಜ್ಯಗಳಲ್ಲಿ ನಡೆಸಲು ಹಾಗೂ  ಆಯ್ಕೆಯಾದ ಶಾಸಕರಿಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ನಿರ್ಣಯಿಸಲಾಗಿದೆ ಎಂದು ಕಾಗೇರಿ ಹೇಳಿದರು.

`ವಿಧಾನ ಪರಿಷತ್ತು ಮತ್ತು ವಿಧಾನಸಭೆಗೆ ಅತ್ಯುತ್ತಮ ಪ್ರಶಸ್ತಿ ನೀಡಲು ಚರ್ಚಿಸಲಾಗಿದ್ದು, ಇದಕ್ಕೆ ಮಾನದಂಡಗಳನ್ನು ರೂಪಿಸಲು ಸಮಿತಿಯ ಅವಶ್ಯಕತೆಯಿದ್ದು, ಸಮಿತಿ ರಚಿಸಲು ಅಂಗೀಕರಿಸಲಾಯಿತು. ಸದನ ನಡೆಸುವ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಭಾಷಣ ಮತ್ತು ಪ್ರಶ್ನೋತ್ತರ ವೇಳೆಯಲ್ಲಿ ಸದನದಲ್ಲಿ ಗದ್ದಲ ಉಂಟಾಗದಂತೆ ಸರ್ವ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿ, ಸದನವನ್ನು ಸುಗಮವಾಗಿ ನಡೆಸಲು ನಿರ್ಣಯಿಸಲಾಯಿತು' ಎಂದು ಅವರು ತಿಳಿಸಿದರು.

`ಭಾರತೀಯ ಶಾಸಕಾಂಗ, ಕಾಯಾರ್ಂಗ, ಚಟುವಟಿಕೆಯಲ್ಲಿ ಸಂವಿಧಾನದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮಹತ್ವ ನೀಡಲಾಗಿದ್ದು, ಹೊಸ ಶತಮಾನದ ಆರಂಭದಲ್ಲಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ವ್ಯವಸ್ಥಿತವಾಗಿ ಚರ್ಚೆ ನಡೆಸಲಾಗುವುದು. 1921 ರಿಂದ 2021ರ ವರೆಗೆ ಕೈಗೊಂಡ ಎಲ್ಲ ನಿರ್ಣಯ, ನಿರ್ಧಾರಗಳನ್ನು ಹೊಸ ಶತಮಾನದ ಆರಂಭದಲ್ಲಿ ಸುಗಮವಾಗಿ ನಡೆಸಲು ನಿರ್ಣಯಿಸಲಾಯಿತು ಎಂದರು.

`ಶಾಸಕಾಂಗ ನಿಯಮಗಳಲ್ಲಿ ಏಕರೂಪತೆ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ತರಲು ಸಂವಿಧಾನದ 10ನೆ ಶೆಡ್ಯೂಲ್‍ನಲ್ಲಿ ಅಂತಿಮ ವರದಿ ಸಿದ್ಧವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಂಡು ಸಂಸತ್‍ನಲ್ಲಿ ನಡೆದ ಚರ್ಚೆಗಳನ್ನು ಸಾರ್ವಜನಿಕರಿಗೆ ಆಪ್ ಮೂಲಕ ತಲುಪಿಸಲು ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತು ಶತಮಾನೋತ್ಸವದಲ್ಲಿ ಪಂಚಾಯತ್ ರಾಜ್ ಇಲಾಖೆಗಳು, ಗ್ರಾ.ಪಂ.ಗಳು ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಲು ಮನ್ನಣೆ ನೀಡಬೇಕೆಂದು ತೀರ್ಮಾನಿಸಲಾಯಿತು. ಸಮ್ಮೇಳನದಲ್ಲಿ ಒಟ್ಟು 12 ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.

`ಸಮ್ಮೇಳನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಪೀಠಾಧ್ಯಕ್ಷರು, ನಾನೂ ಸೇರಿದಂತೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾರ್ಯದರ್ಶಿಗಳು ಹಾಗೂ ದೇಶದ ಸುಮಾರು 20ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್‍ನ ಅಧ್ಯಕ್ಷರುಗಳು, ಸದಸ್ಯರುಗಳು, ಕಾರ್ಯದರ್ಶಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News