ಮಡಿಕೇರಿ: ಕಾನೂನು ದುರ್ಬಳಕೆ ಆರೋಪ; ಹಿಂದುತ್ವ ಸಂಘಟನೆಗಳಿಂದ ಪ್ರತಿಭಟನೆ

Update: 2021-11-22 10:17 GMT

ಮಡಿಕೇರಿ ನ.22 : ಇತ್ತೀಚೆಗೆ ಗರಗಂದೂರು, ಮಾದಾಪುರ ಮತ್ತು ಶನಿವಾರಸಂತೆಯಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸುವ ಸಂದರ್ಭ ತಾರತಮ್ಯ ತೋರಿದ್ದಾರೆ. ಕಾನೂನು ದುರ್ಬಳಕೆಯಿಂದ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕುಶಾಲನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸುಳ್ಳು ದೂರುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಗರಗಂದೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡನ ಮೇಲೆ ಹಲ್ಲೆ ನಡೆದು ತಿಂಗಳೇ ಕಳೆದಿದ್ದರೂ ಇಲ್ಲಿಯವರೆಗೆ ತಪ್ಪಿತಸ್ಥರನ್ನು ಬಂಧಿಸಿಲ್ಲ. ಮಾದಾಪುರದಲ್ಲಿ ಮತಾಂಧರು ನಡೆಸಿದ ಲವ್ ಜಿಹಾದ್  ಪ್ರಯತ್ನಗಳನ್ನು ವಿಫಲಗೊಳಿಸುವ ಪ್ರಯತ್ನದ ಪ್ರಕರಣವನ್ನೇ ದೊಡ್ಡ ಗಲಭೆಯೆಂಬಂತೆ ಬಿಂಬಿಸಿ ಕೊಲೆಯತ್ನ ಮತ್ತು ದರೋಡೆಯಂತಹ ಗಂಭೀರ ಪ್ರಕರಣಗಳನ್ನು ದಾಖಲಿಸಿ ಹಿಂದೂ ಯುವಕರನ್ನು ಜೈಲಿಗಟ್ಟಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಲಾಗಿದೆ.        

ಶನಿವಾರಸಂತೆಯಲ್ಲಿ ಕೂಡ ಕ್ಷುಲ್ಲಕ ಕಾರಣಕ್ಕೆ ಹಿಂದೂಗಳ ಮೇಲೆ  ದರೋಡೆ, ಕೊಲೆ ಯತ್ನ, ಪೊಕ್ಸೋದಂತಹ ಪ್ರಕರಣಗಳನ್ನು ದಾಖಲಿಸಿ ಗಲಭೆಕೋರರಿಗೆ ಪೊಲೀಸರು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾನೂನು ದುರ್ಬಳಕೆ ಮಾಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಿಂದು ಜಾಗರಣ ವೇದಿಕೆಯ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಜಿ., ಮೈಸೂರು ವಿಭಾಗದ ಕಾರ್ಯದರ್ಶಿ ಜೀವನ್, ಕೊಡಗು ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಕೃಷ್ಣಪ್ಪ, ಯುವಮೋರ್ಚಾದ ನವನೀತ್, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಫೋಟೋ :: ಪ್ರೊಟೆಸ್ಟ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News