ಕೋಲಾರ: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-11-22 12:50 GMT

ಕೋಲಾರ : ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ರಾಗಿ ಬೆಳೆ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.90 ಬೆಳೆ ನಾಶವಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಚಿನ್ನದ ಜಿಲ್ಲೆಯಲ್ಲಿ ಸತತವಾಗಿ ಮಳೆಯ ಅವಾಂತರದಿಂದ ಆಗಿರುವ ಬೆಳೆ ಹಾನಿಯ ಸಮೀಕ್ಷೆಯನ್ನು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಆರ್ ಡಿ ಪಿ ಆರ್ ಇಲಾಖೆ ಅಧಿಕಾರಿಗಳು ಜಿಪಿಎಸ್ ಮೂಲಕ ಸರ್ವೇ ಮಾಡಿ ಪರಿಹಾರ ಆಪ್ ನಲ್ಲಿ ಅಪ್ಲೋಡ್ ಮಾಡಿದರೆ ದಿನದ ಇಪ್ಪತ್ತು ಗಂಟೆಯೊಳಗೆ  ರೈತರ ಖಾತೆಗೆ ನೇರವಾಗಿ ಪರಿಹಾರ ಹಣವನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ಇದೇ ರೀತಿಯಲ್ಲಿ ತೋಟಗಾರಿಕೆಯ ತರಕಾರಿ ಬೆಳೆ ಗಳು, ಹೂವಿನ ಬೆಳೆ ನಷ್ಟವಾಗಿರುವ ತೋಟಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು. ಕೃಷಿ  43 ಸಾವಿರದ 333 ಹೆಕ್ಟೇರ್, ತೋಟಗಾರಿಕೆ ಬೆಳೆ 6 ಸಾವಿರದ 966 ಹೆಕ್ಟೇರ್, ಹಾಗೂ ರಸ್ತೆಗಳು 189 ಕಿಲೋಮೀಟರ್, ಹಾಗೂ ಬ್ರಿಡ್ಜ್ 34 ದುರಸ್ಥಿಗೊಂಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮಳೆಗೆ 80 ಮನೆಗಳು ಸಂಪೂರ್ಣವಾಗಿ ನೆಲಕ್ಕೆ ಕುಸಿದು ಬಿದ್ದಿದೆ. ಉಳಿದಂತೆ 790 ಮನೆಗಳು ಹಾನಿಗೊಂಡಿದೆ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಪೂರ್ಣ ಪ್ರಮಾಣದ  ಮನೆಗಳ ಕುಸಿತಕ್ಕೆ ಮೂರು ಹಂತಗಳಲ್ಲಿ ಐದು ಲಕ್ಷ ರೂ. ಗಳನ್ನು  ನೀಡುವ ಜತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ 3 ಲಕ್ಷ ನೀಡಲಾಗುವುದು ಎಂದು ತಿಳಿಸಿ, ಮಳೆಗೆ ಕೆರೆಗಳು ಕೋಡಿ ಹರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಮನೆಗಳಿಗೆ ಹತ್ತು ಸಾವಿರ ರೂ. ಗಳನ್ನು ನೀಡಲಾಗುತ್ತದೆ ಎಂದರು.

ಜಿಲ್ಲೆಯ ಪ್ರತಿಯೊಂದು ಗ್ರಾಪಂಗಳಿಗೆ ಮನೆಗಳ ಮಂಜೂರಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ನಿಂದ ವಿಶ್ವದಲ್ಲಿ ಆರ್ಥಿಕ ಹಿಂಜರಿತವಾಗಿದೆ.

ರಾಜ್ಯದಲ್ಲಿ ಜಿಎಸ್ಟಿ ಕ್ರಮೇಣ 80 ಸಾವಿರದಿಂದ ಒಂದು ಲಕ್ಷ ಇಪ್ಪತ್ತು ಸಾವಿರ ರೂ. ಗಳ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಸರಕಾರಿ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿಯನ್ನು ಅಧಿಕಾರಿಗಳು ಮುಲಾಜಿಲ್ಲದೆ  ತೆರವುಗೊಳಿಸುವ ಕಾರ್ಯದಲ್ಲಿ ತೊಡಗಬೇಕು ಎಂದರಲ್ಲದೆ ಮುಂದಿನ ನಾಲ್ಕು ದಿನಗಳ ಕಾಲ  ಮಳೆಯ ಸೂಚನೆ ಇದ್ದು, ಜಿಲ್ಲಾಧಿಕಾರಿ , ಎಸ್ಪಿ, ಜಿಪಂ ಸಿಇಒ ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು  ಕೈಗೊಳ್ಳುವಂತೆ ಸೂಚಿಸಿದರು.

ರಾಜ್ಯ ಸರಕಾರ ರಾಜ್ಯದ ಜಿಲ್ಲಾಧಿಕಾರಿಗಳ ಪಿಡಿ ಖಾತೆಯ್ಲಲಿ 685 ಕೋಟಿ ರೂ.  ಇದ್ದು. ಒಳಕೆಗೆ ತೀರ್ಮಾನಿಸಲಾಗಿದೆ ಎಂದರು.ತೋಟಗಾರಿಕೆ ಬೆಳೆ ನಷ್ಟ, ರಸ್ತೆ ಮತ್ತು ಸೇತುವೆಗಳ ದುರಸ್ಥಿ ಗೆ 500 ಕೋಟಿ ರೂ. ಗಳು ಬಿಡುಗಡೆ ಜಿಲ್ಲೆಗೆ ಮಂಜೂರು ಆಗಿದ್ದು, ತುರ್ತಾಗಿ ಕಾಮಗಾರಿಯನ್ನು ನಡೆಸಲು ಸೂಚನೆ ನೀಡಿದರು.

ಸರಕಾರಿ ಶಾಲೆ, ಹಾಗೂ ಅಂಗನವಾಡಿ ಕೇಂದ್ರಗಳ ದೊಡ್ಡ ಪ್ರಮಾಣದಲ್ಲಿ ಮಾಡಲು ಎನ್ ಡಿ ಆರ್ ಎಫ್ ಅನುದಾನದಲ್ಲಿ ಡಿಸಿ ಅವರು ಪಿಡಿ ಖಾತೆಯಲ್ಲಿ ಸರಿಪಡಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಎಂಎಲ್ ಸಿ ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಸಂಪಂಗಿ, ಮಾಜಿ ಶಾಸಕ ಎಂ ನಾಗರಾಜ್, ಶಾಸಕ ರಮೇಶ್ ಕುಮಾರ್, ಮಾಜಿ ಶಾಸಕ  ಬಿ.ಪಿ. ವೆಂಕಟಮುನಿಯಪ್ಪ, ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ, ಎಸ್ಪಿ ಡೆಕ್ಕಾ ಕಿಶೋರ್ ಬಾಬು , ಜಿಪಂ ಸಿಇಒ ಉಕೇಶ್ ಕುಮಾರ್, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News