ಜನರ ಹಣವನ್ನು ಬಕಾಸುರನ ರೀತಿ ನುಂಗುವುದೇ ಬಿಜೆಪಿಯವರ ಅಭಿವೃದ್ಧಿ: ಕುಮಾರಸ್ವಾಮಿ ವಾಗ್ದಾಳಿ

Update: 2021-11-22 13:47 GMT

ಮೈಸೂರು, ನ.22: ಆಡಳಿತದ ಹೆಸರಿನಲ್ಲಿ ಜನಹಣವನ್ನು ಬಕಾಸುರನ ರೀತಿ ನುಂಗುವುದೇ ಬಿಜೆಪಿಯವರ ಅಭಿವೃದ್ದಿ ಹೊರತು ರೈತರ, ಸಾಮಾನ್ಯ ಜನರ ಅಭಿವೃದ್ದಿ ಇವರಿಗೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ನಾಡಿನ ಮತದಾರರ ಅಭಿವೃದ್ಧಿ ಬೇಕಿಲ್ಲ, ಬಿಜೆಪಿ ನಾಯಕರುಗಳದ್ದು ಮತ್ತು ಅವರಹಿಂಬಾಲಕರಾಗಿ ಬಿಜೆಪಿ ಬಾವುಟ ಹಿಡಿದು ತಿರುಗುವವರ ಅಭಿವೃದ್ಧಿ ಮಾತ್ರ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮಳೆ ಬಂದು ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಇವರ ಪ್ರಕಾರ 5 ರಿಂದ 6 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದೆ. ಇವರಿಗೆ ಪರಿಹಾರ ನೀಡುವ ಬದಲು ಜನಸ್ವರಾಜ್ ಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜನಸ್ವರಾಜ್ ಯಾತ್ರೆಯಲ್ಲಿ ಎಲ್ಲೂ ರೈತರ ಸಂಕಷ್ಟಗಳ ಬಗ್ಗೆ ಮಾತನಾಡುವುದಿಲ್ಲ, ಸಾಕಷ್ಟು ಮನೆಗಳು ನಾಶ ಆಗಿರುವುದರ ಬಗ್ಗೆ ಮಾತನಾಡುವುದಿಲ್ಲ ಎಂದು ಹರಿಹಾಯ್ದರು.

ಬೆಳೆ ನಾಶಗೊಂಡವರಿಗೆ ಪರಿಹಾರ ಕೊಡಬೇಕು ಎಂದು ಸರ್ಕಾರದ ಸಚಿವರಿಗೆ ಕಿಂಚಿತ್ತಾದರೂ   ಕಾಳಜಿ ಇಲ್ಲ, ಮೊದಲು ಈ ನಾಡಿನ ರೈತರ ಬಗ್ಗೆ ಕಾಳಜಿ ಇಟ್ಟು ಕೆಲಸ ಮಾಡಿ.‌ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ನೀಡಿ, ಯಾವ ನೀತಿ ಸಂಹಿತೆಯೂ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಬಳ್ಳಾಪುರದಲ್ಲಿ  ಮನೆ ಕಳೆದುಕೊಂಡವರಿಗೆ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ನಿಮ್ಮದು ಬರೀ ಘೋಷಣೆಯಷ್ಟೆ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ, ಈ ಹಿಂದೆ ಬೆಳಗಾವಿ, ಬಾಗಲಕೋಟೆ ಮತ್ತು ಕೊಡಗಿನಲ್ಲಿ  ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡುವುದಾಗಿ ಘೋಷಿಸಿ ಪರಿಹಾರವನ್ನೇ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆಯಿಂದ ನಷ್ಟಕ್ಕೊಳದಾವರಿಗೆ ಪರಿಹಾರ ನೀಡಲು ಸರ್ಕಾರದಲ್ಲಿ ಹಣ ಇದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ, ಜೆಡಿಎಸ್ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಬಿಟ್ಟು  ಮೊದಲು ಸಮಪರ್ಪಕವಾಗಿ ಆಡಳಿತ ನಡೆಸುವತ್ತ ಗಮನ ಹರಿಸಿ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News