ಒವೈಸಿಯದು ಜಿನ್ನಾ ಮಾನಸಿಕತೆ: ಸಿ.ಟಿ.ರವಿ

Update: 2021-11-23 16:19 GMT

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ರಕ್ತಪಾತಕ್ಕೆ ಅವಕಾಶ ಇಲ್ಲ. ಸಂವಿಧಾನದ ಬಗ್ಗೆ ವಿಶ್ವಾಸ ಇರುವವರು ರಕ್ತಪಾತದ ಮಾತನಾಡುವುದಿಲ್ಲ. ಒವೈಸಿಯ ಮಾನಸಿಕತೆಯನ್ನು ಗಮನಿಸಿದಾಗ ಜಿನ್ನಾ ಮಾನಸಿಕತೆ- ಒವೈಸಿ ಮಾನಸಿಕತೆಗೂ ಭಿನ್ನತೆ ಇಲ್ಲ ಎನಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ. ರವಿ  ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರು ಮತ್ತು ಎಂಐಎಂ ಪಾರ್ಟಿಯ ಒವೈಸಿಯವರ ಸಿಎಎ ರದ್ದುಪಡಿಸದೆ ಇದ್ದರೆ ಶಾಹಿನ್‍ಬಾಗ್ ರೀತಿಯಲ್ಲಿ ರಕ್ತಪಾತ ನಡೆಯುತ್ತದೆ ಎಂಬ ಬೆದರಿಕೆಯ ಪತ್ರಿಕಾ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರು ಕಸಬ್, ಬಿನ್ ಲಾಡೆನ್ ರೀತಿಯಲ್ಲಿ ವರ್ತಿಸಿದರೆ ಭಾರತ ಇಂಥ ಹಿಂಸಾಚಾರವನ್ನು ತಡೆಗಟ್ಟುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸುವುದಾಗಿ ಹೇಳಿದರು*.

ಇಷ್ಟಕ್ಕೂ ಸಿಎಎ ಎಂಬುದು ಪೌರತ್ವ ಕೊಡುವ ಕಾಯಿದೆ. ಯಾರು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ಥಾನದಿಂದ ನಿರಾಶ್ರಿತರಾಗಿ ಬಂದಿದ್ದಾರೋ ಅವರಿಗೆ ಸಿಎಎ ಪೌರತ್ವ ಕೊಡುತ್ತದೆ. ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳಿಗೆ ಕೊಡುವ ಪೌರತ್ವವನ್ನು ಮುಸ್ಲಿಮರಿಗೂ ಕೊಡಿ ಎಂದು ಅವರ ಬೇಡಿಕೆ ಇದೆ.  ಈ ಮೂರು ದೇಶಗಳೂ ಘೋಷಿತ ಇಸ್ಲಾಂ ರಾಷ್ಟ್ರಗಳು. ಇಸ್ಲಾಂ ರಾಷ್ಟ್ರದಲ್ಲಿ ಮುಸ್ಲಿಮರು ದೌಜ್ಯನ್ಯಕ್ಕೆ ಒಳಗಾಗುತ್ತಾರೆ ಎಂದರೆ ಇಸ್ಲಾಂ ಬಗ್ಗೆ ಇರುವ ಪರಿಕಲ್ಪನೆಯನ್ನು ಹೊಸ ಭಾಷ್ಯದಲ್ಲಿ ಯೋಚಿಸುವ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ಇಸ್ಲಾಂ ಮತವು ಜಗತ್ತನ್ನು ಇಸ್ಲಾಂ ಪಾಲಿಸುವವರು ಮತ್ತು ಪಾಲಿಸದೆ ಇರುವವರು ಎಂದು ಎರಡು ಭಾಗವಾಗಿ ನೋಡುತ್ತದೆ. ಅಲ್ಲಾನನ್ನು ಒಪ್ಪುವವರು ಮತ್ತು ಒಪ್ಪದೇ ಇರುವವರು ಎಂದು ಎರಡು ಭಾಗವಾಗಿ ನೋಡುತ್ತದೆ. ಇಸ್ಲಾಂ ರಾಷ್ಟ್ರದಲ್ಲಿ ಮುಸ್ಲಿಮರು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಇಲ್ಲಿ ಬರುತ್ತಾರೆಂದು ನಾನು ಭಾವಿಸುವುದಿಲ್ಲ ಎಂದು ತಿಳಿಸಿದರು*.

ಎಲ್ಲರಿಗೂ ಪೌರತ್ವ ಕೊಡಬೇಕಿದ್ದರೆ ಮೊದಲು ಈ 3 ದೇಶಗಳು ಇಸ್ಲಾಂ ರಾಷ್ಟ್ರ ಎಂದು ಘೋಷಿಸಿದ್ದನ್ನು ಹಿಂದಕ್ಕೆ ಪಡೆಯಬೇಕು. ಅಲ್ಲದೆ ಸರ್ವಧರ್ಮ ಸಮಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಮುಸ್ಲಿಮರು ಇತರ ಧರ್ಮದವರನ್ನು ಕಾಫಿರರು ಎಂದು ಪರಿಗಣಿಸಿ ಧಾರ್ಮಿಕ ದೌರ್ಜನ್ಯವನ್ನು ಮಾಡುತ್ತಾ ಬಂದಿದೆ. ಇಲ್ಲವೇ ಅಖಂಡ ಭಾರತ ಆಗಬೇಕು. ಹಾಗಾದಾಗ ಎಲ್ಲರಿಗೂ ಪೌರತ್ವ ಸಿಗುತ್ತದೆ ಎಂದರು.

ಇಲ್ಲಿಗೆ ಒಳನುಸುಳಿ ಬಂದು ಪೌರತ್ವ ಪಡೆಯಲು ಅವಕಾಶವಿಲ್ಲ. ಹಾಗೆ ಪೌರತ್ವ ಪಡೆಯಬೇಕೆಂದು ಬಯಸುವುದು ಭಾರತವನ್ನು ಜಿಹಾದ್ ಮೂಲಕ ವಶಪಡಿಸಿಕೊಳ್ಳುವ ಸಂಚಿನ ಭಾಗ ಎಂದೇ ಪರಿಗಣಿಸಬೇಕಾಗುತ್ತದೆ. ಅಕ್ರಮ ನುಸುಳುಕೋರರಿಗೆ ಇಲ್ಲಿ ಜಾಗ ಇಲ್ಲ. ನುಸುಳುಕೋರರ ಪರವಾಗಿ ಒವೈಸಿ ಮಾತನಾಡುತ್ತಿರುವುದು ದೇಶದ್ರೋಹಕ್ಕೆ ಸಮನಾದ ಸಂಗತಿ. ರಕ್ತಪಾತ ಮಾಡುವುದಾಗಿ ತಿಳಿಸಿದ್ದು, ಅzನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

 ಇದೇಜನ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಾರೆ. ಇದು ವಿರೋಧಾಭಾಸ. ಡಾ. ಅಂಬೇಡ್ಕರ್ ಅವರೇ ಸಮಾನ ನಾಗರಿಕ ಸಂಹಿತೆಯನ್ನು ಉಲ್ಲೇಖಿಸಿದ್ದರು. ಇವರಿಗೆ ಲಾಭ ಆಗುವ ಕಡೆಗಳಲ್ಲಿ ಸಮಾನ ನಾಗರಿಕ ಸಂಹಿತೆ ಬರಬಾರದು. 3 ಮದುವೆ ನಾಲ್ಕು ಮದುವೆ ಆಗಲು, ತಲಾಖ್ ತಲಾಖ್ ಅಂತ ಹೇಳಲು ಸಮಾನ ನಾಗರಿಕ ಸಂಹಿತೆ ಅಡ್ಡ ಬರಬಹುದೆಂದು ಅದನ್ನು ವಿರೋಧಿಸುವ ಮನೋಭಾವನೆಯೇ ವಿರೋಧಾಭಾಸದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.

ರೈತರ ಹೆಸರಿನಲ್ಲಿ ರೈತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೇರೇನೋ ನಡೆಯುತ್ತಿದೆ ಎಂಬ ಸಂಶಯ ಕೆಂಪುಕೋಟೆ ಮೇಲೆ ಖಲಿಸ್ಥಾನ ಧ್ವಜವನ್ನು ಹಾರಿಸಿದ ಸಂದರ್ಭದಲ್ಲೇ ಬಂದಿತ್ತು. ಉಗ್ರಗಾಮಿ ಸಂಘಟನೆಯು ಆಫರ್ ಕೊಟ್ಟಿದ್ದು, ಇದಕ್ಕೆ ಪುಷ್ಟಿ ಕೊಡುವಂತಿದೆ ಎಂದ ಅವರು, ಕೃಷಿ ಮಸೂದೆಯ ಯಾವ ಅಂಶ ರೈತ ವಿರೋಧಿ? ಎಂದು ಪ್ರಶ್ನಿಸಿದರು.

 2019ರಲ್ಲಿ ಕಾಂಗ್ರೆಸ್ ಪಕ್ಷವೇ ತನ್ನ ಪ್ರಣಾಳಿಕೆಯಲ್ಲಿ ಕೃಷಿ ಮಾರುಕಟ್ಟೆಯನ್ನು ಮುಕ್ತ ಮಾಡುವುದಾಗಿ ಹೇಳಿತ್ತು. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕೊಡುವ ಪ್ರಸ್ತಾಪ ಅಲ್ಲಿತ್ತು. ಭಾರತೀಯ ಕಿಸಾನ್ ಯೂನಿಯನ್‍ನ ರಾಕೇಶ್ ಸಿಂಗ್ ಟಿಕಾಯತ್ ಅವರೇ ಮಾರುಕಟ್ಟೆಯನ್ನು ಮುಕ್ತ ಮಾಡಬೇಕೆಂದು ತಮ್ಮ ಬೇಡಿಕೆಗಳ ಪಟ್ಟಿಯಲ್ಲಿ ಹೇಳಿದ್ದರು. ಅವರು ಬೇಡಿಕೆ ವಿಸ್ತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯ ಹುನ್ನಾರ ಇದೆ ಎಂದು ಅನಿಸುತ್ತದೆ ಎಂದು ತಿಳಿಸಿದರು. ಜಾಸ್ತಿ ಬೆಲೆ ಸಿಗುವಲ್ಲಿ, ದೇಶದ ಯಾವುದೇ ಭಾಗದಲ್ಲಿ ಉತ್ಪನ್ನ ಮಾರಾಟಕ್ಕೆ ಮಸೂದೆ ಅವಕಾಶ ನೀಡಿತ್ತು. ರಫ್ತು ಮಾಡಲೂ ಅವಕಾಶ ಕೊಡಲಾಗಿತ್ತು ಎಂದು ವಿವರಿಸಿದರು.

ನಮ್ಮ ಭಾಗದಲ್ಲಿ ಮಿನಿ ಸೌತೆಕಾಯಿ ಬೆಳೆಯುತ್ತಿದ್ದು, ಅದನ್ನು ಖರೀದಿಸಲು ಅಲಿಖಿತ ಒಪ್ಪಂದ ಇದೆ. ಚೆಂಡು ಹೂ, ಆಲೂಗಡ್ಡೆ ವಿಚಾರದಲ್ಲೂ ಇಂಥ ಒಪ್ಪಂದಗಳಾಗುತ್ತಿವೆ. ಪಂಜಾಬ್‍ನಲ್ಲಿ ಈ ಹಿಂದಿನಿಂದಲೇ ಆಲೂಗಡ್ಡೆ ಬೆಳೆ ಖರೀದಿ ಸಂಬಂಧ ಅಲಿಖಿತ ಒಪ್ಪಂದ ಇತ್ತು. ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ರೈತರಿಗೆ ಶಾಸನದ ಬಲ ಕೊಟ್ಟಿತ್ತು. ಫಾರ್ಮರ್ಸ್ ಪ್ರೊಡ್ಯೂಸ್ ಆರ್ಗನೈಸೇಶನ್ ಮೂಲಕ ಮೌಲ್ಯವರ್ಧನೆ ಅವಕಾಶ ಕೊಡಲಾಗಿದೆ. ಎಪಿಎಂಸಿ ಯಥಾವತ್ ಮುಂದುವರಿಯುತ್ತದೆ ಎಂದ ಬಳಿಕ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಬಗ್ಗೆ ಮಾತನಾಡಿದರು. ರೈತರ ಮುಂದಿಟ್ಟುಕೊಂಡು ಹೊಸ ಬೇಡಿಕೆ ಇಡುವುದನ್ನು ಗಮನಿಸಿದರೆ ಇದರ ಹಿಂದೆ ಬೇರೇನೋ ಸಂಚು ಇದ್ದಂತೆ ಕಾಣುತ್ತದೆ ಎಂದು ತಿಳಿಸಿದರು.

ನಗರ ನಕ್ಸಲರು, ಸಿಎಎ ವಿರುದ್ಧ ಹೋರಾಟ ಮಾಡಿದವರು ಈ ಹೋರಾಟದಲ್ಲಿದ್ದರು. ಅರ್ಬನ್ ನಕ್ಸಲರನ್ನು ಬಿಡುಗಡೆ ಮಾಡಬೇಕೆಂದು ಕೋರಿಕೆಯನ್ನೂ ಅವರು ಮುಂದಿಟ್ಟಿದ್ದರು. ಕೆಲವರು ರಾತ್ರಿ ಬೆಳಗಾಗುವುದರೊಳಗೆ ರೈತರಾಗಿ ಬದಲಾಗಿದ್ದರು. ಭಾರತದ ವಿಭಜನೆ ಸಾಧ್ಯತೆ ಬಗ್ಗೆ ಪಂಜಾಬ್‍ನ ಹಿಂದಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತಿಳಿಸಿದ್ದರು. ಚಳವಳಿ ಮುಂದುವರಿಕೆ, ಸಂಸತ್ತಿಗೆ ಮುತ್ತಿಗೆ ಹಾಕುವ ಹೇಳಿಕೆ ಹಿನ್ನೆಲೆಯಲ್ಲಿ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ತಿಳಿಸಿದರು. ಇದರ ಹಿಂದೆ ರೈತವಿರೋಧಿ ಷಡ್ಯಂತ್ರ ಇದ್ದಂತಿದೆ ಎಂದರು.

ರಾಷ್ಟ್ರವ್ಯಾಪಿ ಆಂದೋಲನ ಹುಟ್ಟುಹಾಕುವ ಸಾಧ್ಯತೆ ಮತ್ತು ಅರಾಜಕತೆ ಸೃಷ್ಟಿಸುವ ಸಾಧ್ಯತೆಯನ್ನು ಗಮನಿಸಿ ಈ ಕಾಯಿದೆ ಹಿಂದಕ್ಕೆ ಪಡೆಯಲಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶ ಇಲ್ಲ. ದೇಶದ ವಿವಿಧೆಡೆ ನಡೆದ ರಾಜ್ಯಗಳ ಚುನಾವಣೆಯಲ್ಲಿ ನಾವು ಗೆದ್ದಿದ್ದೆವು ಎಂದು ಅವರು ಸ್ಪಷ್ಟಪಡಿಸಿದರು. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳಬಾರದೆಂದು ಯೋಚಿಸಿ ಮೋದಿಯವರು ಈ ನಿರ್ಧಾರಕ್ಕೆ ಬಂದಿದ್ದಾರೆ. ತಾತ್ಕಾಲಿಕ ಹಿನ್ನಡೆ ಆಗಿದೆ. ಇದರ ಕುರಿತು ಅಧ್ಯಯನ ಮಾಡಿ ಪರಿಣಾಮಕಾರಿ ಮಸೂದೆ ತರಲಿದ್ದೇವೆ ಎಂದರು. ಪ್ರಧಾನಿಯವರು ಮತ ಆಧರಿತ, ಜಾತಿ ಆಧರಿತ ರಾಜಕೀಯ ಮಾಡಿಲ್ಲ ಎಂದರು. ಸಮಗ್ರ ಪರಿವರ್ತನೆ ಮತ್ತು ದೇಶದ ಹಿತದೃಷ್ಟಿಯಿಂದಲೇ ಅವರು ಕೆಲಸ ಮಾಡಿದವರು ಎಂದು ತಿಳಿಸಿದರು.

ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಳ, ಕಿಸಾನ್ ಸಮ್ಮಾನ್ ಯೋಜನೆ ಜಾರಿ, ಬೇವು ಲೇಪಿತ ಯೂರಿಯಾ ಬಿಡುಗಡೆ- ಇವೆಲ್ಲವೂ ರೈತ ವಿರೋಧಿಯೇ ಎಂದು ಪ್ರಶ್ನಿಸಿದರು. ದೇಶದ ವಿವಿಧೆಡೆ ಅಮಾವಾಸ್ಯೆ-ಹುಣ್ಣಿಮೆಗೊಂದು ಚುನಾವಣೆ ಬರುತ್ತದೆ. ಕೇಡರ್ ಬೇಸ್‍ಡ್ ಸಂಘಟನೆಗೆ ಚುನಾವಣೆ ಬಗ್ಗೆ ಭಯವಿಲ್ಲ ಎಂದು ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಡಾ. ಅಂಬೇಡ್ಕರರ ಜನ್ಮಸ್ಥಳ ಸೇರಿ ಪಂಚಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್‍ರನ್ನು ವಿಶ್ವಕ್ಕೆ ಪರಿಚಯಿಸಿದ ಬಳಿಕ ಕಾಂಗ್ರೆಸ್‍ನವರಿಗೆ ಅವರ ನೆನಪಾಗಿದೆ ಎಂದು ತಿಳಿಸಿದರು.

ಬಿಟ್ ಕಾಯಿನ್ ವಿಚಾರದಲ್ಲಿ ಸಾಕ್ಷ್ಯಾಧಾರ ಇದ್ದರೆ ಅದನ್ನು ಸದನದ ಮುಂದಿಡಬಹುದು ಎಂದು ಪ್ರಶ್ನೆಗೆ ಉತ್ತರಿಸಿದರು. ಆಗ ಉಪ್ಪು ತಿಂದವರು ನೀರು ಕುಡೀತಾರೆ ಎಂದು ತಿಳಿಸಿದರು. ಒಂದು ಪಾರ್ಟಿಯಾಗಿ ಕುಟುಂಬ ರಾಜಕೀಯದ ಮೇಲ್ಪಂಕ್ತಿಯನ್ನು ನಮ್ಮ ಪಕ್ಷ ಯಾವತ್ತೂ ಹಾಕಿಲ್ಲ. ವಂಶದ ಕಾರಣಕ್ಕೆ ಯಾರನ್ನೂ ಏಕಾಏಕಿ ರಾಷ್ಟ್ರೀಯ ನಾಯಕರನ್ನಾಗಿ ಬಿಜೆಪಿ ಮಾಡಿಲ್ಲ ಎಂದು ಈ ಕುರಿತ ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್‍ನಲ್ಲಿ ಡಿಎನ್‍ಎ ಮೂಲಕ ನಾಯಕತ್ವದ ಮೇಲ್ಪಂಕ್ತಿ ಹಾಕಿದೆ. ಆರ್‍ಜೆಡಿ, ಸಮಾಜವಾದಿ ಪಾರ್ಟಿ, ಎನ್‍ಸಿಪಿ, ಟಿಎಂಸಿ, ಜೆಡಿಎಸ್ ಮತ್ತಿತರ ಪಕ್ಷಗಳು ಇದನ್ನೇ ಮೇಲ್ಪಂಕ್ತಿಯಾಗಿ ಹಾಕಿವೆ ಎಂದರು.

ನಾವು 100 ಕೋಟಿ ಕೋವಿಡ್ ಲಸಿಕೆ, 84 ಕೋಟಿ ಬಡಜನರಿಗೆ ಪಡಿತರ ನೀಡಿಕೆ, 43 ಕೋಟಿ ಜನ್‍ಧನ್ ಖಾತೆಯನ್ನು ವಿಶ್ವದಾಖಲೆಯ ಸಾಧನೆ ಎಂದುಕೊಂಡರೆ, ಕೆಲವರು ಎಷ್ಟು ಜನ ಕುಟುಂಬಸ್ಥರು ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎಂಬುದನ್ನೇ ಸಾರ್ವಕಾಲಿಕ ದಾಖಲೆ ಮಾಡಲು ಕೆಲವು ರಾಜಕೀಯ ಪಕ್ಷಗಳು ಹೊರಟಿವೆ. ಕೆಲವರಿಗೆ ನಾಲ್ಕು ತಲೆಮಾರಿನ ಸಕ್ರಿಯ ರಾಜಕಾರಣ, ಒಂದು ಕುಟುಂಬದಲ್ಲಿ ಗರಿಷ್ಠ ಎಂಪಿ, ಎಂಎಲ್‍ಎ ಮಾಡಿಕೊಳ್ಳುವುದನ್ನೇ ಹೆಮ್ಮೆಯ ವಿಷಯ ಎಂದುಕೊಂಡಿವೆ. ಯಾರ್ಯಾರು ಈ ರೀತಿ ಇರುತ್ತಾರೋ ಅವರೆಲ್ಲರೂ ಹೆಗಲು ಮುಟ್ಟಿ ನೋಡಿಕೊಳ್ಳಲಿ ಎಂದರು.

ಬಿಜೆಪಿ ರಾಜ್ಯ ವಕ್ತಾರರು ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News