ಟೆಂಡರ್‌ ಕರೆಯದೆ, ಕಾಮಗಾರಿ ನಿರ್ವಹಿಸದೆ ನಕಲಿ ಬಿಲ್‌ ಸೃಷ್ಟಿ ಆರೋಪ : ಜಲಸಂಪನ್ಮೂಲ ಇಲಾಖೆಯ ಐವರ ಅಮಾನತು

Update: 2021-11-25 02:17 GMT

ಬೆಂಗಳೂರು: ಯಾವುದೇ ಟೆಂಡರ್‌ ಕರೆಯದೆ ಮತ್ತು ಕಾಮಗಾರಿ ನಿರ್ವಹಿಸದೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 16.62 ಕೋಟಿ ರೂ. ದುರುಪಯೋಗ ಮಾಡಿದ ಆರೋಪದಲ್ಲಿ ಜಲಸಂಪನ್ಮೂಲ ಇಲಾಖೆಯ ಐದು ಮಂದಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ಇದೇ ಪ್ರಕರಣದಲ್ಲಿ ಭಾಗಿಯಾದ, ಸದ್ಯ ಬೇರೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ಇಬ್ಬರನ್ನು ಅಮಾನತು ಮಾಡುವಂತೆ ಜಲಸಂಪನ್ಮೂಲ ಇಲಾಖೆ ಸೂಚಿಸಿದೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆಎನ್‌ಎನ್‌ಎಲ್‌) ವ್ಯಾಪ್ತಿಯ ಅಥಣಿಯ ಹಿಪ್ಪರಗಿ ಬ್ಯಾರೇಜ್‌ ನಾಲಾ (ಎಚ್‌ಬಿಸಿ) ವಿಭಾಗದಲ್ಲಿ ಹಣ ದುರ್ಬಳಕೆ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಕೆಎನ್‌ಎನ್‌ಎಲ್‌ ಧಾರವಾಡ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಎಸ್‌.ಎನ್‌. ವರದರಾಜು, ಅದೇ ಕಚೇರಿಯ ಲೆಕ್ಕ ಅಧೀಕ್ಷಕ ಡಿ.ಸಿ. ಶೀಲಾ ಮತ್ತು ವಿನಾಯಕ ಅರ್ಕಸಾಲಿ, ಪ್ರಥಮ ದರ್ಜೆ ಲೆಕ್ಕ ಸಹಾಯಕರಾದ ಅನಿಲ್‌ ಜಾಧವ್‌ ಮತ್ತು ಶರಣಪ್ಪ ಅಮಾನತುಗೊಂಡವರು ಎಂದು ತಿಳಿದುಬಂದಿದೆ.

ಇದೇ ಅಕ್ರಮದಲ್ಲಿ ಭಾಗಿಯಾಗಿ, ಪ್ರಸ್ತುತ ಜಲಸಂಪನ್ಮೂಲ ಇಲಾಖೆಯಿಂದ ವರ್ಗಾವಣೆಗೊಂಡು ಸದ್ಯ ‌ಬೆಳಗಾವಿ ಸ್ಮಾರ್ಟ್ ಸಿಟಿ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಎಂ.ಎಂ. ಮಿರ್ಜಾ, ಜಮಖಂಡಿಯಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (ಕಾಡಾ) ಲೆಕ್ಕಪರಿಶೋಧಕರಾಗಿರುವ ದೀಪಕ್‌ ಎ. ಮೂಡಲಗಿ ಎಂಬವರನ್ನು ಅಮಾನತು ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಲಾಗಿದೆ.

ಒಟ್ಟು ಎಂಟು ಕಾಮಗಾರಿಗಳಿಗೆ ಸಂಬಂಧಿಸಿದಂತೆ 2019ರ ಫೆ. 25ರಿಂದ 2020ರ ನ.7ರ ಮಧ್ಯೆ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು. ಈ ಎಂಟು ಬಿಲ್‌ಗಳ ಪೈಕಿ ಐದು ಬಿಲ್‌ಗಳು ಲಭ್ಯವಾಗಿವೆ. ಉಳಿದ ಮೂರು ನಾಪತ್ತೆಯಾಗಿರುವುದು ಕೂಡಾ ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News