ಬಾಳೆಹಣ್ಣು ಮೊಟ್ಟೆಗೆ ಪರ್ಯಾಯವಲ್ಲ : ತಜ್ಞರ ಪ್ರತಿಪಾದನೆ

Update: 2021-11-26 03:02 GMT

ಬೆಂಗಳೂರು: ಶಾಲೆಗಳಲ್ಲಿ ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಬಾಳೆಹಣ್ಣು ವಿತರಿಸುವ ಬಗ್ಗೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪೌಷ್ಟಿಕಾಂಶ ತಜ್ಞರು ವಿರೋಧಿಸಿದ್ದಾರೆ. ಮೊಟ್ಟೆಯಲ್ಲಿರುವ ಅಗತ್ಯ ಪೌಷ್ಟಿಕಾಂಶಗಳು ಬಾಳೆಹಣ್ಣಿನಲ್ಲಿ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ಡಿಸೆಂಬರ್ 1ರಿಂದ 2022ರ ಮಾರ್ಚ್ 30ರವರೆಗೆ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಲ್ಲಿ ಒಂದರಿಂದ ಎಂಟನೇ ತರಗತಿವರೆಗಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಮತ್ತು ಬೇಯಿಸಿದ ಮೊಟ್ಟೆ ನೀಡುವಂತೆ ಸೂಚಿಸುವ ಸುತ್ತೋಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಹೊರಡಿಸಿತ್ತು. ಈ ಭಾಗದ ವಿದ್ಯಾರ್ಥಿಗಳ ಅಪೌಷ್ಟಿಕತೆಯ ವಿರುದ್ಧದ ಸಮರವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಮಕ್ಕಳಿಗೆ ಮೊಟ್ಟೆ ವಿತರಿಸಬೇಕು ಎಂಬ ಬೇಡಿಕೆ ಸುಧೀರ್ಘ ಕಾಲದಿಂದ ಇತ್ತು.

ಸರ್ಕಾರದ ಹೊಸ ನಿರ್ಧಾರದ ಹಿನ್ನೆಲೆಯಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳನ್ನು ಪಟ್ಟಿ ಮಾಡಿ ಹೋಲಿಕೆ ಮಾಡುವ ಚಾರ್ಟ್‌ಗಳನ್ನು ಹಲವು ಮಂದಿ ಟ್ವಿಟ್ಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಇದು ದೋಷಪೂರಿತ ದೃಷ್ಟಿಕೋನ ಎಂದು ಟೀಕಿಸಿದ್ದಾರೆ. ಮೊಟ್ಟೆ ಸೇವಿಸದ ಮಕ್ಕಳಿಗಾಗಿ ಮೊಟ್ಟೆಯಷ್ಟೇ ಪ್ರೊಟೀನ್ ಮತ್ತು ಕೊಬ್ಬಿನ ಅಂಶ ಹೊಂದಿರುವ ಪನೀರ್ ಅಥವಾ ಸೋಯಾ ನೀಡುವಂತೆ ಸಲಹೆ ಮಾಡಿದ್ದಾರೆ.

ಒಂದು ಮೊಟ್ಟೆ ಆರು ಗ್ರಾಂ ಪ್ರೊಟೀನ್ ನೀಡಿದರೆ ಒಂದು ಬಾಳೆಹಣ್ಣು ಕೇವಲ 1 ಗ್ರಾಂ ಪ್ರೊಟೀನ್ ಒದಗಿಸಬಲ್ಲದು ಎಂದು ಪೌಷ್ಟಿಕಾಂಶ ತಜ್ಞರು ಟ್ವೀಟ್ ಮಾಡಿದ್ದಾರೆ. ಇಡೀ ರಾಜ್ಯಕ್ಕೆ ಈ ಯೋಜನೆ ವಿಸ್ತರಿಸುವಂತೆ ಮತ್ತೆ ಕೆಲವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News