ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್-ಬಿಜೆಪಿಯಿಂದ ಮತಬೇಟೆ: ಜೆಡಿಎಸ್ ನಡೆಯತ್ತ ಎಲ್ಲರ ಚಿತ್ತ

Update: 2021-11-26 05:49 GMT

ಚಿಕ್ಕಮಗಳೂರು: ಜಿಲ್ಲೆಯಲ್ಲಿನ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ ಸಂಬಂಧ ಜಿಲ್ಲಾ ಜೆಡಿಎಸ್ ನಿಲುವು ಇನ್ನೂ ಅಸ್ಪಷ್ಟವಾಗಿದೆ. ಜೆಡಿಎಸ್ ಪಕ್ಷದ ಬೆಂಬಲ ಕೋರಿ ಮಾಜಿ ಸಿಎಂ ಯಡಿಯೂರಪ್ಪ ಪಕ್ಷದ ವರಿಷ್ಠರಿಗೆ ಪತ್ರ ಬರೆದು ಬೆಂಬಲ ಕೋರಿದ್ದರೇ, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್ ಜಿಲ್ಲಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಬೆಂಬಲಿಸಲು ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲ ಬಿಜೆಪಿಗೋ, ಕಾಂಗ್ರೆಸ್‍ಗೋ ಎಂಬ ಗೊಂದಲ ಸಾರ್ವಜನಿಕರದ್ದಾಗಿದೆ.

ಜಿಲ್ಲೆಯಲ್ಲಿ ವಿಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. ಚುನಾವಣಾ ಕಣದಿಂದ ಜೆಡಿಎಸ್ ವಿಮುಖವಾಗಿದ್ದು, ಮುಂದಿನ ನಡೆಯ ಬಗ್ಗೆ ಎಲ್ಲರ ಚಿತ್ತ ಹರಿದಿದೆ. ಜಿಲೆಯಲ್ಲಿ ಜೆಡಿಎಸ್ ಬೆಂಬಲಿತ 350ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರಿದ್ದು, ಚುನಾವಣೆಯಲ್ಲಿ ಸ್ಫರ್ಧಿಸುವಂತೆ ಜಿಲ್ಲೆಯ ಜೆಡಿಎಸ್ ಮುಖಂಡರೊಬ್ಬರಿಗೆ ಪಕ್ಷದಿಂದ ಕರೆ ಬಂದಿದ್ದು, ಅವರು ಚುನಾವಣೆಯಲ್ಲಿ ಸ್ಫರ್ಧಿಸಲು ಹಿಂದೆ ಸರಿದಿದ್ದರಿಂದ ಜೆಡಿಎಸ್ ಜಿಲ್ಲೆಯಲ್ಲಿ ವಿಪ ಚುನಾವಣೆ ಕಣದಿಂದ ಹಿಂದೆ ಸರಿಯುವಂತಾಗಿದೆ ಎಂದು ಲಭ್ಯ ಮೂಲಗಳಿಂದ ತಿಳಿದು ಬಂದಿದೆ.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಜೆಡಿಎಸ್ ತನ್ನದೇ ಪ್ರಾಬಲ್ಯವನ್ನು ಹೊಂದಿದ್ದರೂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಸ್ವತಃ ಜೆಡಿಎಸ್ ಕಾರ್ಯಕರ್ತರಲ್ಲೇ ಆಶ್ಚರ್ಯಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ರಾಜಕೀಯ ಚದುರಂಗದಾಟದ ವೇದಿಕೆ ಸಿದ್ಧವಾಗಿದ್ದು, ಇಲ್ಲಿ ಜೆಡಿಎಸ್ ಪಾತ್ರ ನಿರ್ಣಾಯಕವಾಗಿರುವುದರಿಂದ ಪಕ್ಷದ ವರಿಷ್ಠರ ತೀರ್ಮಾನವನ್ನು ಜಿಲ್ಲಾ ಜೆಡಿಎಸ್ ಎದುರು ನೋಡುತ್ತಿದೆ. ಜೆಡಿಎಸ್ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆಂಬ ಬಗ್ಗೆ ತೀರ್ಮಾನದ ಮೇಲೆ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಅಖಾಡ ಪ್ರವೇಶಿಸಲಿದ್ದಾರೆ.

ಜೆಡಿಎಸ್ ಪಕ್ಷದ ಬಾಗಿಲು ತಟ್ಟಿದ ಕಾಂಗ್ರೆಸ್ ಮತ್ತು ಬಿಜೆಪಿ: ಕಾಫಿನಾಡಿನಲ್ಲಿ ವಿಧಾನ ಪರಿಷತ್ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಎ.ವಿ.ಗಾಯತ್ರಿ ಶಾಂತೇಗೌಡ ಹಾಗೂ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್ ಸ್ಪರ್ಧಾ ಕಣದಲ್ಲಿದ್ದು, ಬಿರುಸಿನ ಮತಬೇಟೆಯಲ್ಲಿ ಮಗ್ನರಾಗಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ತನ್ನದೆಯಾದ ಪ್ರಾಬಲ್ಯವನ್ನು ಹೊಂದಿದ್ದು, ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲವನ್ನು ಕೋರಿ ಎರಡು ಪಕ್ಷದ ಅಭ್ಯರ್ಥಿಗಳು ಜೆಡಿಎಸ್ ಪಕ್ಷದ ಕದತಟ್ಟಿವೆ ಎಂದು ಲಭ್ಯ ಮೂಲಗಳಿಂದ ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್ ವರಿಷ್ಠರು ಜೆಡಿಎಸ್ ಪಕ್ಷದ ಮುಖಂಡರಿಗೆ ಈಗಾಗಲೇ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಬಿಜೆಪಿಗೆ ಬೆಂಬಲ ಸೂಚಿಸುವಂತೆ ಬಿಜೆಪಿ ಪಕ್ಷದ ಕೆಲವು ಮುಖಂಡರು ಜೆಡಿಎಸ್ ಪಕ್ಷದ ಕೆಲವು ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕೆಂಬ ಸೂಕ್ತ ನಿರ್ದೇಶನ ಜೆಡಿಎಸ್ ವರಿಷ್ಠರಿಂದ ಇನ್ನೂ ಬಾರದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಸದ್ಯದ ಮಟ್ಟಿಗೆ ತಟಸ್ಥ ನಿಲು ಪ್ರದರ್ಶಿಸುತ್ತಿದ್ದು, ವರಿಷ್ಠರು ತಳೆಯುವ ತೀರ್ಮಾನಕ್ಕೆ ಬದ್ಧ ಎನ್ನುತ್ತಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವರಿಷ್ಠರು ಯಾವುದೇ ಸೂಚನೆ ನೀಡದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ತಟಸ್ಥವಾಗಿದೆ. ಜೆಡಿಎಸ್ ಪಕ್ಷದ ಮುಂದಿನ ನಡೆಯ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನ ಕೈಗೊಳ್ಳಲಿದ್ದು, ಅವರು ಯಾವ ಪಕ್ಷಕ್ಕೆ ಬೆಂಬಲ ನೀಡುವಂತೆ ಸೂಚಿಸುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ ನೀಡಿ ಚುನಾವಣಾ ಅಖಾಡಕ್ಕೆ ಪ್ರವೇಶಿಸುತ್ತೇವೆ.

-ರಂಜನ್ ಅಜೀತ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News