ಮೂರು ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್

Update: 2021-11-26 17:03 GMT

ಬೆಂಗಳೂರು, ನ. 26: `ಬೆಂಬಲ ಬೆಲೆ ಕಾಯ್ದೆ ಜಾರಿ, ವಿದ್ಯುತ್ ಖಾಸಗಿಕರಣ ಕಾಯ್ದೆ ರದ್ದು, ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ, ರೈತರ ಮೇಲಿನ ಕೇಸು ವಾಪಸ್ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು' ಆಗ್ರಹಿಸಿ ರಾಜ್ಯಾದ್ಯಂತ `ಸಂಯುಕ್ತ ಹೋರಾಟ-ಕರ್ನಾಟಕ' ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿತು.

ಶುಕ್ರವಾರ ರಾಜಧಾನಿ ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿನ ಗಾಂಧಿ ಪುತ್ಥಳಿಯಿಂದ ಮಂಡ್ಯದ ಶ್ರೀರಂಗಪಟ್ಟಣದ ವರೆಗೆ ಬೈಕ್ ರ್ಯಾಲಿ ನಡೆಸಿದ ನೂರಾರು ರೈತರು ಹಾಗೂ ರೈತಪರ ಕಾರ್ಯಕರ್ತರು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರು ಹೆದ್ದಾರಿ ಬಂದ್ ಮಾಡಿ ಕೃಷಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ದಿಲ್ಲಿ ಗಡಿಯಲ್ಲಿನ ರೈತ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ವಿವಿಧ ಜಿಲ್ಲೆಗಳಿಂದ ಎತ್ತಿನ ಗಾಡಿ, ಟ್ರ್ಯಾಕ್ಟರ್‍ಗಳೊಂದಿಗೆ ಆಗಮಿಸಿದ್ದ ರೈತರು ತಮ್ಮ ಜಾನುವಾರುಗಳನ್ನು ರಸ್ತೆಯಲ್ಲಿ ಕಟ್ಟಿಹಾಕಿ ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರಸ್ತೆಯಲ್ಲಿ ಆಹಾರ ತಯಾರಿಸಿ ಸೇವಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಸುಮಾರು ಎರಡು-ಮೂರು ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ ವಾಹನ ಸಂಚಾರಕ್ಕೆ ಪೊಲೀಸರು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಯಿತು. ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ ಹೋರಾಟದಲ್ಲಿ ಹುತಾತ್ಮರಾದ 700ಕ್ಕೂ ಅಧಿಕ ಮಂದಿ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಅವರ ವಿರುದ್ಧ ದಾಖಲಿಸಿರುವ ಎಲ್ಲ ಕೇಸುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕೃಷಿ ಕೂಲಿ ಕಾರ್ಮಿಕರ ಸಂಘ, ಕರ್ನಾಟಕ ಜನಶಕ್ತಿ ಸಂಘಟನೆ, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಜನವಾದಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಹೋರಾಟದ ನೇತೃತ್ವವನ್ನು ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಯಶವಂತ್, ದೇವಿ, ಜನಶಕ್ತಿಯ ನೂರು ಶ್ರೀಧರ್, ಸಿಪಿಎಂನ ಜಿ.ಎನ್.ನಾಗರಾಜ್ ಸೇರಿದಂತೆ ಇನ್ನಿತರರು ವಹಿಸಿದ್ದರು.

`ರಾಜ್ಯದ ಸರಕಾರ ಜಾರಿಗೆ ತಂದಿರುವ ಎಪಿಸಿಎಂ ತಿದ್ದುಪಡಿ, ಭೂ ಸುಧಾರಣೆ ತಿದ್ದುಪಡಿ, ಜಾನುವಾರು ಸಂರಕ್ಷಣೆ ಮತ್ತು ಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಅಕಾಲಿಕ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡುವುದು ಹಾಗೂ ಹಾಲು, ಕಬ್ಬು, ಕಾಫಿ ಸಹಿತ ಇನ್ನಿತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಗೆ ಸಂಬಂಧಿಸಿದಂತೆ ತಕ್ಷಣವೇ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಲು ಸಿಎಂ ಸಭೆ ಕರೆಯಬೇಕು. ಕೃಷಿ ಬೆಲೆ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು'

-ನೂರು ಶ್ರೀಧರ್ ಅಧ್ಯಕ್ಷ, ಕರ್ನಾಟಕ ಜನಶಕ್ತಿ

ಮಡಿಕೇರಿ : ರೈತರ ಹೋರಾಟಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಪರ ಸಂಘಟನೆಗಳ ಒಕ್ಕೂಟ ಮಡಿಕೇರಿಯಲ್ಲಿ ಜಾಥಾ ನಡೆಸಿತು.

ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಾಥಾ ನಡೆಸಿದ ಪ್ರಮುಖರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.


ಹಾಸನ:​ ಕರಾಳ ಮೂರು ಕೃಷಿ ಕಾಯಿದೆ ರದ್ಧತಿಗೆ ಒತ್ತಾಯಿಸಿ, ವಿದ್ಯುತ್ ಮಸೂದೆ ವಾಪಸ್ ಪಡೆದು, ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಲು ಆಹ್ರಹಿಸಿ ವಿವಿದ ಸಂಘಟನೆಯ ನೇತ್ರತ್ವದಲ್ಲಿ   ಎನ್.ಆರ್. ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಲಾಯಿತು.
​ ​ ​ ​ ​ ​ 
ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರೈತಪರ, ಕಾರ್ಮಿಕ ಹಾಗು ದಲಿತಪರ ಸಂಘಟನೆಯ ಕಾರ್ಯಕರ್ತರು ಸೇರಿ ಎನ್.ಆರ್ ವೃತ್ತದವರಗೆ ಮೆರವಣಿಗೆ ಬಂದು ಎನ್.ಆರ್ ವೃತ್ತದಲ್ಲಿ ಅರ್ಧ ಗಂಟೆ ವಾಹನಗಳ ಸಂಚಾರ ತಡೆದು ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಾಸ್ಸು ತೆಗೆದುಕೊಂಡರೆ ಅಷ್ಟೆ ಸಾಲದು ವಾಪಾಸ್ಸು ತೆಗೆದುಕೊಂಡ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಿ ತಕ್ಷಣವೇ ವಾಪಾಸ್ಸು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನೂ ಸಂಸತ್ನಲ್ಲಿ ಮಂಡಿಸಿ ವಾಪಾಸ್ಸು ಪಡೆಯಬೇಕು. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆಯನ್ನೂ ರದ್ದುಮಾಡಬೇಕು. ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು. ಮಳೆ ಹಾನಿಗೆ ರೈತರು ಒಳಗಾಗಿದ್ದು, ಎಲ್ಲ ರೈತರ ಬೆಳೆಸಾಲವನ್ನು ಮನ್ನಾ ಮಾಡಬೇಕು ಮತ್ತು ಪರಿಹಾರ ನೀಡಬೇಕು. ವೈಜ್ಞಾನಿಕ ಬೆಲೆ ನಿಗಧಿ ಪಡಿಸುವ ವರೆಗೂ ರೈತರ ಬ್ಯಾಂಕಿನ ವ್ಯವಹಾರವನ್ನು ಸಿಬಿಲ್ ವ್ಯಾಪ್ತಿಗೆ ಒಳಪಡಿಸಬಾರದು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News